ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಆ‌.1 ರಂದು ಪ್ರತಿಭಟನೆ:                                                 ಪಕ್ಷಾತೀತವಾಗಿ ಒಳಮೀಸಲಾತಿ ಹೋರಾಟಕ್ಕೆ ಕರೆ-ಎ.ನಾರಾಯಣಸ್ವಾಮಿ.                                                                                                                             ಜಯ ಧ್ವಜ ನ್ಯೂಸ್, ರಾಯಚೂರು, ಜು.28- ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಕುರಿತು ತೀರ್ಪು ನೀಡಿ ಒಂದು ವರ್ಷ ಗತಿಸುತ್ತಿದ್ದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ಮೇನಾಮೇಷ ಎಣೆಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಆ.1 ರಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು. ಅವರಿಂದು ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಆಗಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ರವರು ತೀರ್ಪು ನೀಡಿ ಒಳ ಮೀಸಲಾತಿ ಕಲ್ಪಿಸುವುದು ಆಯಾ ರಾಜ್ಯ ಸರ್ಕಾರಗಳು ಜವಾಬ್ದಾರಿ ಎಂದು ಹೇಳಿದ ನಂತರದಲ್ಲಿ ಒಂದು ವರ್ಷ ಗತಿಸುತ್ತಿದ್ದರೂ  ಸರ್ಕಾರ ವರದಿ ಜಾರಿ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ದೂರಿದರು.

ಸುಪ್ರೀಂ ಕೋರ್ಟ್ ತೀರ್ಪು ಬಳಿಕ ನಿವೃತ್ತ ನ್ಯಾಯಮೂರ್ತಿ ನಾಗ್ ಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಿದ ಸರ್ಕಾರ ತದ ನಂತರ ನಾಗಮೋಹನದಾಸ್ ರವರು ಮಧ್ಯಂತರ ವರದಿ ಸರ್ಕಾರಕ್ಕೆ ಸಲ್ಲಿಸಿ ಎಂಪಿರಿಕಲ್ ಡಾಟಾಯಿಲ್ಲದೆ ಮೀಸಲಾತಿ ಕಲ್ಪಿಸುವುದು ಅಸಾಧ್ಯವೆಂದು ಹೇಳಿದ ಬಳಿಕ ಸರ್ಕಾರ ಸಮೀಕ್ಷೆ ಕೈಗೊಳ್ಳುತ್ತಿದೆ ಆದರೆ ಸಮೀಕ್ಷೆ ಸಮರ್ಪಕವಾಗಿ ಆಗದೆ ಕಾಟಾಚಾರಕ್ಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿವೆ ಬೆಂಗಳೂರಲ್ಲೆ ಸರಿಯಾಗಿ ಸಮೀಕ್ಷೆ ನಡೆದಿಲ್ಲವೆಂಬ ದೂರು ಕೇಳಿಬಂದಿವೆ ಎಂದರು. ಒಳ ಮೀಸಲಾತಿ ಬಗ್ಗೆ ಆಡಳಿತ ನಡೆಸುತ್ತಿರುವ ದಲಿತ ಸಮುದಾಯದ ಯಾವೊಬ್ಬ ನಾಯಕರು ಪ್ರಶ್ನಿಸದೆ ಮೌನವಹಿಸಿರುದೇಕೆಂದು ಪ್ರಶ್ನಿಸಿದರು. ಹರಿಯಾಣ, ಪಂಜಾಬ್, ಆಂಧ್ರ ,ತೆಲಂಗಾಣದಲ್ಲಿ ಒಳ ಮೀಸಲಾತಿಗೆ ಸರ್ಕಾರ ಅಸ್ತು ಎಂದಿದೆ ಪಕ್ಕದ ತೆಲಂಗಾಣದಲ್ಲಿ ರೇವಂತರೆಡ್ಡಿ ಪಕ್ಷದ ಫರ್ಮಾನಿಗೆ ಸೆಡ್ಡು ಹೊಡೆದು ಮೀಸಲಾತಿ ಕಲ್ಪಿಸಿದ್ದಾರೆ ಅಂತಹ ಧೈರ್ಯ ಸಿದ್ದರಾಮಯ್ಯ ಏಕೆ ಪ್ರದರ್ಶಿಸುತ್ತಿಲ್ಲವೆಂದು ಪ್ರಶ್ನಿಸಿದ ಅವರು ಸಚಿವ ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಪ್ರಿಯಾಂಕ ಖರ್ಗೆ ,ಮಹಾದೇವಪ್ಪ, ತಿಮ್ಮಾಪೂರು ಏಕೆ ಸಿಎಂ ಗೆ ಆಗ್ರಹಿಸುತ್ತಿಲ್ಲವೆಂದರು. ಎಐಸಿಸಿ ಯಿಂದ ಒಳಮೀಸಲಾತಿ ಬಗ್ಗೆ ಯಾರು ಚಕಾರವೆತ್ತ ಬಾರದು ಎಂಬ ಸೂಚನೆ ನೀಡುವುದರ ಹಿಂದಿನ ಮರ್ಮವೇನೆಂದು ಪ್ರಶ್ನಿಸಿದ ಅವರು ಯಾವುದೆ ಪಕ್ಷ ಮೀಸಲಾತಿ ವಿರುಧ್ದ ನಡೆದುಕೊಂಡರೆ ಅದನ್ನು ಖಂಡಿಸುತ್ತೇನೆ ನಾನು ಅಧಿಕಾರದಲ್ಲಿದ್ದಾಗೂ ಸಂಸತ್ ನಲ್ಲಿ ಒಳ ಮೀಸಲಾತಿ  ಬಗ್ಗೆ ಧ್ವನಿಯತ್ತಿದ್ಧೇನೆಂದರು. ಮಾದಿಗ ಸಮಾಜ ಜನಸಂಖ್ಯೆಗನುಗುಣವಾಗಿ ರಾಜಕೀಯ ಸ್ಥಾನಮಾನ ಪಡೆಯಬೇಕೆಂದ ಅವರು ಪಕ್ಷಬೇಧ ಮರೆತು ನಮ್ಮ ಹಕ್ಕು ಪಡೆಯಲು ಹೋರಾಡಬೇಕೆಂದರು. ಮಳೆಗಾಲ ಅಧಿವೇಶನದಲ್ಲಿ ಒಳ‌ಮಿಸಲಾತಿ ಬಗ್ಗೆ ರಾಜ್ಯ  ಸರ್ಕಾರದ ನಡೆ ನೋಡಿಕೊಂಡು ರಾಜ್ಯದಲ್ಲಿ ಬೀದಿಗಿಳಿದು ಸಮುದಾಯದ ಶಕ್ತಿ ಸರ್ಕಾರಕ್ಕೆ ತೋರಿಸುತ್ತೇವೆ ಎಂದರು. ಒಳ ಮೀಸಲಾತಿ ಯಾರಿಗೂ ಬೇಡವಾದ ಕೂಸಾಗಿದೆ ಅದನ್ನು ಮುದ್ದಾಡುವವರು ಇಲ್ಲ ಎತ್ತಿಕೊಳ್ಳುವವರು ಇಲ್ಲವೆಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ರವೀಂದ್ರ ಜಲ್ದಾರ್, ಮಾರೆಪ್ಪ, ನರಸಪ್ಪ ದಂಡೋರಾ,  ಎಂ.ವಿರುಪಾಕ್ಷಿ, ಪಿ.ಯಲ್ಲಪ್ಪ,  ತಿಮ್ಮಪ್ಪ,ಮಂಜುನಾಥ, ಭೀಮಣ್ಣ ಸೇರಿದಂತೆ ಅನೇಕರಿದ್ದರು.

Comments

Popular posts from this blog