ಯರಗೇರಾ ಹೊಸ ತಾಲೂಕು ರಚನೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ - ನಿಜಾಮುದ್ದೀನ್. ಜಯ ಧ್ವಜ ನ್ಯೂಸ್, ರಾಯಚೂರು,ಜು.31- ಯರಗೇರಾ ಹೋಬಳಿಯನ್ನು ನೂತನ ತಾಲೂಕು ರಚನೆ ಮಾಡುವ ಕುರಿತು ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಯರಗೇರಾ ತಾಲೂಕು ರಚನೆ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮೊಹಮ್ಮದ್ ನಿಜಾಮುದ್ದೀನ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಯರಗೇರಾ ತಾಲೂಕು ರಚನೆ ಕುರಿತು ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು ತದನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಯರಗೇರಾ ತಾಲೂಕು ರಚನೆಗೆ ಮನವಿ ಮಾಡಿದಾಗ ಸಿಎಂ ನೂತನ ತಾಲೂಕು ರಚನಾ ಸಮಿತಿಯೊಂದಿಗೆ ಸಭೆ ನಡೆಸಿ ತಾಲೂಕು ರಚನೆ ಬಗ್ಗೆ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ ಎಂದು ಅವರು ವಿರೋಧ ಪಕ್ಷದ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರನ್ನು ಸಹ ಭೇಟಿಯಾಗಿ ಬೆಂಬಲ ಕೋರಿದ್ದೇವೆಂದರು. ಈ ಹಿಂದೆ ನಿಜಾಮರ ಆಳ್ವಿಕೆ ವೇಳೆ ಯರಗೇರಾ ತಾಲೂಕು ಇತ್ತೆಂದು ದಾಖಲೆಗಳಲ್ಲಿ ಉಲ್ಲೇಖವಿದ್ದು ಹೈದ್ರಾಬಾದ್ ನಲ್ಲಿ ನಿಜಾಂ ಸರ್ಕಾರದ ಆಳ್ವೆಕೆ ವೇಳೆಯ ನಕ್ಷೆ ಮತ್ತು ದಾಖಲೆ ಸಂಗ್ರಹಿಸುವ ಪ್ರಯತ್ನದಲ್ಲಿದ್ದು ನಮ್ಮ ಹೋರಾಟಕ್ಕೆ ಈ ದಾಖಲೆಗಳು ಪುಷ್ಟಿ ನೀಡಲಿವೆ ಎಂದರು. ನಮ್ಮ ಹೋರಾಟಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸಂಪೂರ್ಣ ಬೆಂಬಲಿಸಿದ್ದಾರೆ ಎಂದರು. ಗಿಲ್ಲೇಸೂಗೂರು ತಾಲೂಕು ರಚನೆ ಬಗ್ಗೆ ಹೋರಾಟ ನಡೆಯುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಜಾಪ್ರಭುತ್ವದಲ್ಲಿ ಶಾಂತ ರೀತಿಯಲ್ಲಿ ಹೋರಾಟ ಕೈಗೊಳ್ಳುವ ಅಧಿಕಾರ ಎಲ್ಲರಿಗೂ ಇದೆ ಎಂದ ಅವರು ಯರಗೇರಾ ತಾಲೂಕು ರಚನೆ ಮಾಡದಿದ್ದಲ್ಲಿ ಉಗ್ರ ಹೋರಾಟ ರೂಪರೇಷೆ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆಂದರು. ಈ ಸಂದರ್ಭದಲ್ಲಿ ಬಸವರಾಜ ಹೂಗಾರ್, ಮೆಹೆಬೂಬ ಪಟೇಲ್, ಲಕ್ಷ್ಮೀಪತಿ, ರಫಿ ಇನ್ನಿತರರು ಇದ್ದರು.
Comments
Post a Comment