ರೈತರಿಗೆ ಸಮರ್ಪಕ ರಸಗೊಬ್ಬರ ಸಿಗುವಂತಾಗಬೇಕು-ಡಾ.ಬಾಬುರಾವ್
ಜಯ ಧ್ವಜ ನ್ಯೂಸ್, ರಾಯಚೂರು,ಜು.26- ರಾಜ್ಯ ಸರಕಾರ ಜಿಲ್ಲೆಯ ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ಮುಂದಾಗಬೇಕೆಂದು ಸಮಾಜ ಸೇವಕ ಹಾಗೂ ಎಪಿಎಂಸಿ ಮಾಜಿ ಉಪಾಧ್ಯಕ್ಷ ಡಾ.ಬಾಬುರಾವ್ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಮಳೆ ರೈತರ ನಿರೀಕ್ಷೆಯಂತೆ ಬೀಳುತ್ತಿದೆ. ಈಗಾಗಲೇ ರೈತರು ಬಿತ್ತನೆ ಮಾಡಿರುವುದರಿಂದ ಬೆಳೆಗಳ ಬೆಳವಣಿಗೆ ಹೆಚ್ಚಿಸಲು ರಸಗೊಬ್ಬರದ ಅವಶ್ಯಕತೆ ಇರುವುದರಿಂದ ರಸಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ರೈತರಿಗೆ ತಮಗೆ ಬೇಕಾದ ರಸಗೊಬ್ಬರ ಬೇಕಾದಷ್ಟು ಪ್ರಮಾಣದಲ್ಲಿ ದೊರೆಯದಿರುವುದರಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಹತ್ತಿ ಮತ್ತಿತರ ಬೆಳೆಗಳು ಹೊಲದಲ್ಲಿ ನಳನಳಿಸುತ್ತಿದ್ದು ಖುಷಿಯಲ್ಲಿರುವ ರೈತರಿಗೆ ರಸಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲ. ದುಪ್ಪಟ್ಟು ಹಣ, ಪ್ರಭಾವ ಬೀರಿದ ರೈತರಿಗೆ ರಸಗೊಬ್ಬರ ಸಿಗುತ್ತಿದ್ದು, ಬಡವ ಹಾಗೂ ಮುಗ್ಧ ರೈತರಿಗೆ ರಸಗೊಬ್ಬರ ಮರೀಚಿಕೆಯಾಗಿ ಪರಿಣಮಿಸಿದೆ. ಅವರು ಏನೂ ಮಾಡಬೇಕೆಂದು ಚಿಂತಿತರಾಗಿದ್ದಾರೆ.
ಕೃಷಿ ಇಲಾಖೆ ಉಪನಿರ್ದೇಶಕರು ಮಾತ್ರ ಬೇಡಿಕೆನುಗುಣವಾಗಿ ರಸಗೊಬ್ಬರ ಜಿಲ್ಲೆಯಲ್ಲಿ ಲಭ್ಯವಿದೆ ಎಂದು ಕೆಡಿಪಿ ಸಭೆಯಲ್ಲಿ ಹೇಳಿದ್ದರೂ ಮಾರುಕಟ್ಟೆಯಲ್ಲಿ ಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಲಾಗಿದೆ. ರೈತರ ನೆರವಿಗೆ ಬರಬೇಕಾದ ಕೃಷಿ ಇಲಾಖೆ ಕೇವಲ ಹೇಳಿಕೆಗೆ ಸೀಮಿತವಾಗಿದೆ ಎಂದು ಆರೋಪಿಸಿದ್ದಾರೆ. ರಸಗೊಬ್ಬರ ದಾಸ್ತಾನುಗಳ ಮೇಲೆ ಹಠಾತ್ ದಾಳಿಯಂತಹ ಹಾಗೂ ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮಕ್ಕೆ ಮುಂದಾಗದೇ ರಸಗೊಬ್ಬರ ವ್ಯಾಪಾರಿಗಳ ಪರ ಜಾಣ್ಮೆ ಮೆರೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಬೇರೆ ಜಿಲ್ಲೆಗಳಲ್ಲಿ ರಸಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಧಿಕಾರಿಗಳು ಬೇಕಂತಲೇ ರೈತರು ತೊಂದರೆ ಅನುಭವಿಸುವಂತೆ ಮಾಡುತ್ತಿದ್ದಾರೆ. ಒಂದೆಡೆ ಕೃಷಿ ಇಲಾಖೆ ಸಚಿವರು ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂಬ ಹೇಳಿಕೆ ವಾಸ್ತವವನ್ನು ಮರೆಮಾಚುವಂತೆ ಕಾಣುತ್ತಿದೆ. ಮುಖ್ಯಮಂತ್ರಿಗಳು ರೈತರಿಗೆ ಸಮರ್ಪಕ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಪತ್ರಕ್ಕೆ ಬರೆಯುತ್ತಾರೆ. ಇದನ್ನು ನೋಡಿದರೆ ರಸಗೊಬ್ಬರ ವಿತರಣೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತದೆ. ಸರಕಾರಗಳು ರೈತರ ಬೇಡಿಕೆಗನುಗುಣವಾಗಿ ರಸಗೊಬ್ಬರ ಪೂರೈಸಬೇಕು. ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಗಳು ಪಾರದರ್ಶಕವಾಗಿ ಗೊಬ್ಬರ ಹಂಚಿಕೆ ಮಾಡಬೇಕೆಂದು ಎಪಿಎಂಸಿ ಮಾಜಿ ಉಪಾಧ್ಯಕ್ಷ ಹಾಗೂ ಸಮಾಜ ಸೇವಕ ಡಾ. ಬಾಬುರಾವ್ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
Comments
Post a Comment