ಲಿಂಗಸ್ಗೂರಿನಲ್ಲಿ ಕೆಯುಡ್ಬ್ಬುಜೆ ಯಿಂದ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ:
ಪತ್ರಿಕೋದ್ಯಮವು ಜನರ ಹಾಗೂ ಸರ್ಕಾರದ ನಡುವಿನ ಸಂಪರ್ಕ ಸೇತುವೆ- ಸಚಿವ ಡಾ.ಶರಣಪ್ರಕಾಶ ಆರ್. ಪಾಟೀಲ
ಜಯ ಧ್ವಜ ನ್ಯೂಸ್ ರಾಯಚೂರು, ಜು.27- ಪತ್ರಿಕಾ ರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಟ್ಟಿದೆ. ಜನರು ಹಾಗೂ ಸರ್ಕಾರಗಳ ನಡುವೆ ಸಂಪರ್ಕ ಸೇತುವೆಯಾಗಿ ಪತ್ರಿಕೋದ್ಯಮವು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ಹೇಳಿದರು.
ಜುಲೈ 27ರ ಭಾನುವಾರ ದಂದು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಶ್ರೀವಿಜಯ ಮಹಾಂತೇಶ್ವರ ಶಾಖಾಮಠದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ರಾಯಚೂರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಈ ಡಿಜಿಟಲ್ ಜಗತ್ತಿನಲ್ಲಿ ಪತ್ರಿಕೋದ್ಯಮವು ಸಹ ಡಿಜಿಟಲೀಕರಣಗೊಂಡಿದೆ. ಮೊಬೈಲ್‌ನಲ್ಲಿಯೇ ಎಲ್ಲಾ ಕ್ಷಣ ಕ್ಷಣದ ಸುದ್ದಿಗಳನ್ನು ನಾವು ನೋಡಬಹುದಾಗಿದೆ. ಪತ್ರಿಕೆ ಓದುಗರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಜನರ ಮನಸ್ಥಿತಿ ಅರಿತು ಪತ್ರಿಕಾರಂಗವು ಸಹ ತನ್ನ ಕಾರ್ಯ ಶೈಲಿಯನ್ನು ಬದಲಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಪತ್ರಕರ್ತರಿಗೆ ತಮ್ಮ ವೃತ್ತಿಯಲ್ಲಿ ಭದ್ರತೆ ಇಲ್ಲ ಎನ್ನುವ ಕೊರಗು ಇದೆ. ಇದನ್ನು ಅರಿತು ರಾಜ್ಯ ಸರ್ಕಾರವು ಪತ್ರಕರ್ತರಿಗೆ ಯೋಜನೆಗಳನ್ನು ರೂಪಿಸಿ ಅನುಕೂಲ ಕಲ್ಪಿಸಿದೆ ಎಂದರು.
ಡಿಜಿಟಲ್ ಮೀಡಿಯಾದ ಬೆಳವಣಿಗೆಯಿಂದಾಗಿ ಪತ್ರಿಕೆಗಳನ್ನು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನರಿತು ಡಿಜಿಟಲ್ ಯುಗದ ಸವಾಲುಗಳನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.
ಸೋಷಿಯಲ್ ಮೀಡಿಯಾವನ್ನು ಸರಿಯಾಗಿ ಬಳಸಬೇಕು ಎಂದು ತಿಳಿಸಿದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಮಾತನಾಡಿ, ದೇಶದ ಇತಿಹಾಸ ಗಮನಿಸಿದಾಗ ಪತ್ರಕರ್ತರು ಅಮೂಲ್ಯ ಕೊಡುಗೆ ನೀಡಿರುವುದನ್ನು ನೋಡಬಹುದು.
ದೇಶದ ಬೆಳವಣಿಗೆಯಲ್ಲಿ
ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ಇಂದಿನ ಕಾರ್ಪೋರೇಟ್ ಜಗತ್ತಿನ ಮಧ್ಯೆಯೂ
ಪತ್ರಿಕಾರಂಗದ ಮೂಲ ಉದ್ದೇಶ ಬದಲಾಗದಂತೆ ಪತ್ರಕರ್ತರು ಮತ್ತು ಪತ್ರಿಕೆಗಳು ಕಾರ್ಯನಿರ್ವಹಿಸಬೇಕಿದೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಪತ್ರಕರ್ತ ಬಿ.ಎಂ. ಹನೀಪ್ ಅವರು ಮಾತನಾಡಿ, ಸಮಾಜದ ಹಿತಕ್ಕಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕು. ಪತ್ರಕರ್ತರು ಮತ್ತು ಶಿಕ್ಷಕರು ದಾರಿ ತಪ್ಪಿದರೆ ಸಮಾಜವೇ ಹದಗೆಡುವ ಸಾಧ್ಯತೆ ಇದೆ. ಇಂತಹ ಪವಿತ್ರವಾದ ಪತ್ರಿಕಾವೃತ್ತಿಯ ಗಣತೆ ಕಾಯ್ದುಕೊಳ್ಳಬೇಕು ಎಂದರು.
ರಾಜ್ಯದ ಸರ್ಕಾರಿ ವಿವಿಗಳಲ್ಲಿ ಪತ್ರಿಕೋದ್ಯಮ ವಿಭಾಗದ ಸಾಮರ್ತ್ಯ ಕ್ಷೀಣವಾಗುತ್ತಿದೆ. ಪತ್ರಿಕೋದ್ಯಮ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ ಎನ್ನುವ ಆತಂಕವಿದೆ. ಇದನ್ನು ಅರಿಯಬೇಕು. ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಬಗ್ಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ :ಮಾಧ್ಯಮ ಕ್ಷೇತ್ರದಲ್ಲಿನ ಸೇವೆ, ವಿಶೇಷ ಸಾಧನೆ ಹಿನ್ನೆಲೆಯಲ್ಲಿ ಜಿಲ್ಲೆಯ ಪತ್ರಕರ್ತರಿಗೆ ಹಾಗೂ ಪತ್ರಿಕಾ ವಿತರಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಪತ್ರಕರ್ತ ಭೀಮರಾಯ ಹದ್ದಿನಾಳ ಹಾಗೂ ದಿ.ಶಿವಶಂಕರಗೌಡ ಯದ್ಧಲದಿನ್ನಿ ಸ್ಮರಣಾರ್ಥ ವಿಶೇಷ ಪ್ರಶಸ್ತಿಯನ್ನು ಪತ್ರಕರ್ತ ಎನ್.ಬಸವರಾಜ ಅವರಿಗೆ ಪ್ರದಾನ ಮಾಡಲಾಯಿತು.
ಕೆಯುಡ್ಬ್ಲೂಜೆ ವಾರ್ಷಿಕ ಪ್ರಶಸ್ತಿಯನ್ನು ಜೆಲ್ಲೆಯ ಪತ್ರಕರ್ತರಾದ ವಿಶ್ವನಾಥ ಹೂಗಾರ, ನೀಲಕಂಠಸ್ವಾಮಿ, ಹೆಚ್. ವೀರನಗೌಡ, ಅಮರೇಶ ಚಿಲ್ಕರಾಗಿ, ಸುನೀಲ್ ಕುಮಾರ, ನವೀನ್ ಕುಮಾರ, ಅಮರೇಶ ಸಾಲಿಮಠ, ರಾಘವೇಂದ್ರ, ಬಿ.ಮಲ್ಲಪ್ಪ, ಶಶಿಧರ ಕಂಚಿಮಠ ಅವರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಿಕಾ ವಿತರಕರಾದ ವೀರೇಶ ಎಂ.ಕರಡಿ ಅವರಿಗೂ ಸಹ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾನಿಧ್ಯವನ್ನು ವಿಜಯ ಮಹಾಂತೇಶ್ವರ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಲಿಂಗಸಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ.ವಜ್ಜಲ್, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಾಪುರ, ಡಿ.ಎಸ್.ಹೂಲಗೇರಿ, ಜಿಲ್ಲಾಧಿಕಾರಿ ನಿತೀಶ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ,ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ, ಪ್ರಧಾನ ಕಾರ್ಯದರ್ಶಿ ಎಂ.ಪಾಷಾ, ಲಿಂಗಸೂಗುರು ತಾಲೂಕಾ ಅಧ್ಯಕ್ಷ ಗುರುರಾಜ ಗೌಡೂರು, ಪ್ರಧಾನ ಕಾರ್ಯದರ್ಶಿ ಅಮರಯ್ಯ ಘಂಟಿ ಸೇರಿದಂತೆ ಇನ್ನಿತರರು ಇದ್ದರು.
Comments
Post a Comment