ಅರಕೇರ ವಸತಿ ಶಾಲೆ ಪ್ರಿನ್ಸಿಪಾಲ್ ಪತ್ರಕರ್ತರ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿರುವುದನ್ನು ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾಧಿಕಾರಿಗೆ ಮನವಿ

ಜಯ ಧ್ವಜ ನ್ಯೂಸ್, ರಾಯಚೂರು,ಆ.25- ಜಿಲ್ಲೆಯ  ಅರಕೇರ ಪಟ್ಟಣದಲ್ಲಿ ವರದಿಗೆ ತೆರಳಿದ್ದ ಪತ್ರಕರ್ತರನ್ನು ಅವಾಚ್ಯವಾಗಿ ನಿಂದಿಸಿದ ಘಟನೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.                                      ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಪತ್ರಿಕಾ ಮಾಧ್ಯಮದ ಮೇಲೆ ನಿರಂತರ ದಾಳಿ, ದೌರ್ಜನ್ಯ, ಅವಮಾನಗಳು ನಡೆಯುತ್ತಿವೆ ಅದರ ಭಾಗವಾಗಿ ಕೊತ್ತದೊಡ್ಡಿ ವಸತಿ ಶಾಲೆಯಲ್ಲಿ ಅನಾರೋಗ್ಯಕ್ಕೆ ತುತ್ತಾದ ವಿದ್ಯಾರ್ಥಿಗಳನ್ನು ಅರಕೇರ ಪಟ್ಟಣದ ಸಮುದಾಯ ಆರೋಗ್ಯ‌ ಕೇಂದ್ರದಲ್ಲಿ ತಪಾಸಣೆಗೆ ಕರೆತರಲಾಗಿತ್ತು.


ಈ ಸಂದರ್ಭದಲ್ಲಿ ಪತ್ರಕರ್ತರು ವಿಡಿಯೋ, ಫೋಟೊ ಚಿತ್ರೀಕರಣ ಮಾಡುತ್ತಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಪ್ರಿನ್ಸಿಪಾಲ್ ಸುರೇಶ ವರ್ಮಾ ಮಾಹಿತಿ ಮತ್ತು ಚಿತ್ರ ಸಂಗ್ರಹಿಸಿದ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದರು. ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು   ಖಂಡಿಸಲಾಯಿತು.

ಪತ್ರಕರ್ತರು ಮಕ್ಕಳ ಹಿತದೃಷ್ಟಿಯಿಂದ ಮಾಹಿತಿ ಪಡೆಯಲು ಹೋಗಿದ್ದು ತಪ್ಪಾ.? ಜವಬ್ದಾರಿಯುತ ಸ್ಥಾನದಲ್ಲಿರುವ ಪ್ರಿನ್ಸಿಪಾಲ್ ಸಂವಿಧಾನದ ನಾಲ್ಕನೇ ಅಂಗದಲ್ಲಿ ನಿಷ್ಪಕ್ಷಪಾತವಾಗಿ, ನಿಷ್ಟುರವಾದಿಯಾಗಿ ಸೇವೆಗೈಯುವವರಿಗೆ ಅಗೌರವ ತೋರಿದ್ದಾರೆ. ಹೀಗಾದರೆ ಪತ್ರಕರ್ತರು ಸಮಾಜದಲ್ಲಿ ಸ್ವತಂತ್ರವಾಗಿ ವರದಿಗಾರಿಕೆ ಮಾಡುವುದು ಹೇಗೆ ಸಾಧ್ಯವಾಗುತ್ತದೆ. ಇಂತಹ ಬೇಜವಬ್ದಾರಿಯುತ ಅಧಿಕಾರಿಗಳಿಂದ ಪತ್ರಕರ್ತರ ಮೇಲೆ ನಿರಂತರ ಅಪಮಾನಗಳು ನಡೆಯುತ್ತಿವೆ. ಇದರಿಂದ ಪತ್ರಕರ್ತರು ಮಾನಸಿಕವಾಗಿ ನೊಂದಿದ್ದಾರೆ. ಇಡೀ ಮಾಧ್ಯಮ ಕ್ಷೇತ್ರವನ್ನು ಮನಬಂದಂತೆ ಹೀಯಾಳಿಸಿ, ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಕೊತ್ತದೊಡ್ಡಿ ಏಕಲವ್ಯ ವಸತಿ ಶಾಲೆಯ ಪ್ರಿನ್ಸಿಪಾಲರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಒತ್ತಾಯಿಸಿತು. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಆರ್. ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಪಾಷಾ ಹಟ್ಟಿ ,  ಸೇರಿದಂತೆ ಹಿರಿಯ, ಕಿರಿಯ ಪತ್ರಕರ್ತರು, ಕ್ಯಾಮರಾಮನ್ ಉಪಸ್ಥಿತರಿದ್ದರು.

Comments

Popular posts from this blog