ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ:
ರಕ್ತದಾನ ಜೀವದಾನದಷ್ಟೇ ಶ್ರೇಷ್ಠ - ಪಾರಸಮಲ್ ಸುಖಾಣಿ
ಜಯ ಧ್ವಜ ನ್ಯೂಸ್ ,ರಾಯಚೂರು, ಆ.22- ನಗರದ ಎಲ್.ವಿ.ಡಿ ಪದವಿ ಮಹಾವಿದ್ಯಾಲಯದಲ್ಲಿಂದು ರಾಜಯೋಗಿನಿ ಪ್ರಕಾಶಮಣಿಜೀ ಅವರ ಪುಣ್ಯತಿಥಿ ಹಾಗೂ ವಿಶ್ವ ಭ್ರಾತೃತ್ವ ದಿನ ಅಂಗವಾಗಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ಇತರ ಸಂಘ ಸಂಸ್ಥೆಗಳೊಂದಿಗೆ ಜರುಗಿದ ಬೃಹತ್ ರಕ್ತದಾನ ಶಿಬಿರವನ್ನು ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಾರಸಮಲ್ ಸುಖಾಣಿಯವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವುದು ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಷ್ಟೇ ಶ್ರೇಷ್ಠ ಕಾರ್ಯವಾಗಿದ್ದು 4 ದಿನಗಳ ಕಾಲ ನಡೆಯುವ ಬೃಹತ್ ರಕ್ತದಾನ ಶಿಬಿರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದರು.
ರಕ್ತದ ತುರ್ತುಅಗತ್ಯವನ್ನು ಪೂರೈಸುವ ಉದ್ದೇಶ ಹಾಗೂ ವಿಶ್ವ ಭಾತೃತ್ವದ ಸಂದೇಶವನ್ನು ಹರಡುವ ಉದ್ದೇಶದಿಂದ ಈಶ್ವರೀಯ ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿರುವ ಈ ಪವಿತ್ರ ಕಾರ್ಯವನ್ನು ಉದ್ಘಾಟಿಸುವುದು ನನ್ನ ಸೌಭಾಗ್ಯವಾಗಿದೆ ಎಂದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ರವಿಬೋಸರಾಜುರವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿಯೂ ಸಹ ರಕ್ತದ ಕೊರತೆಯಿದ್ದು ಸಂಕಷ್ಟದ ಸಂದರ್ಭದಲ್ಲಿರುವ ರೋಗಿಗಳಿಗೆ ನಾವು ಇಂದು ಮಾಡಿರುವ ರಕ್ತದಾನ ಅವರಿಗೆ ಮತ್ತೊಮ್ಮೆ ಜೀವ ತುಂಬಲಿದೆ ಎಂದರು. ರಕ್ತದಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಯುವಕರು ಕೆಟ್ಟ ಚಟಗಳಿಗೆ ದಾಸರಾಗದೆ, ಆರೋಗ್ಯವಂತರಾಗಿ ಇನ್ನೊಂದು ಜೀವ ಉಳಿಸುವ ರಕ್ತದಾನ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.
ನನ್ನ ಎಲ್ಲಾ ಸ್ನೇಹಿತರು, ಹಿತೈಶಿಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸುವ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಲು ಕೈಜೋಡಿಸಬೇಕೆಂದು ಮನವಿ ಮಾಡಿದರು.
ರಾಜಯೋಗಿನಿ ಬ್ರಹ್ಮಕುಮಾರಿ ಸ್ಮಿತಾ ಅಕ್ಕರವರು ಮಾತನಾಡಿ ಬ್ರಹ್ಮಕುಮಾರೀಸ್ ಸಂಸ್ಥೆಯ ಪೂರ್ವ ಮುಖ್ಯ ಆಡಳಿತಾಧಿಕಾರಿ ರಾಜಯೋಗಿನಿ ದಾದಿ ಪ್ರಕಾಶಮಣಿ ಜೀ ಅವರ 18ನೇ ಪುಣ್ಯತಿಥಿ (ಆ.25)ರಂದು ವಿಶ್ವ ಭ್ರಾತೃತ್ವ ದಿನ ಎಂದು ಆಚರಿಸಲಾಗುತ್ತಿದೆ. ಈಗಾಗಿ ಭಾರತ ಮತ್ತು ನೇಪಾಳ ಉಭಯ ದೇಶಗಳಲ್ಲಿ ಈ ಪವಿತ್ರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು. 4 ದಿನಗಳ ಶಿಬಿರದಲ್ಲಿ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸಿ ಹಲವರ ಜೀವನಕ್ಕಾಗಿ ಬೆಳಕಾಗಬೇಕಾಗಿದೆ ಎಂದರು.
ಇಂದಿನ ರಕ್ತದಾನ ಶಿಬಿರದಲ್ಲಿ 70 ಕ್ಕೂ ಜನರು ರಕ್ತದಾನವನ್ನು ಮಾಡಿದರು. ರಕ್ತದಾನ ಮಾಡಿದಂತಹ ದಾನಿಗಳಿಗೆ ಪ್ರಮಾಣಪತ್ರ ,ಸಸಿಗಳನ್ನು , ಹಣ್ಣುಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಶಾಂತಪ್ಪ , ರಿಮ್ಸ್ ನಿರ್ದೇಶಕರಾದ ಡಾ.ರಮೇಶ್ , ರಾಜಶೇಖರ್ ಮುಸ್ಟೂರು, , ವೈ.ಗೋಪಾಲರೆಡ್ಡಿ , ಜಟ್ರಂ ಶ್ರೀನಿವಾಸ , ಕಡಗೋಲು ಆಂಜನೇಯ್ಯ ,ಶಶಿರಾಜ್, ಎಲ್.ವಿ.ಡಿ ಕಾಲೇಜು ಪ್ರಾಚಾರ್ಯರಾದ ಶರಣಗೌಡ ಬಿ.ಎಚ್. ಎಸ್.ಬಿ.ಎ.ಬಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪದ್ಮಾ ವಸುಂಧರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Comments
Post a Comment