ರಾಜ್ಯಕ್ಕೆ ಏಮ್ಸ್ ಅನುಮೋದನೆ ನೀಡಿಲ್ಲ ಎಂಬ ಕೇಂದ್ರ ಸರಕಾರದ ಹೇಳಿಕೆ ಖಂಡನಾರ್ಹ- ಡಾ.ಬಾಬುರಾವ್
ಜಯ ಧ್ವಜ ನ್ಯೂಸ್ ,ರಾಯಚೂರು, ಆ.2-ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಿಲ್ಲ ಎಂದು ಕೇಂದ್ರ ಸರಕಾರದ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿರುವುದು ಕೇಂದ್ರ ರಾಜ್ಯ ಸರಕಾರದ ವಿರುದ್ಧ ತಳೆದಿರುವ ಮಲತಾಯಿ ಧೋರಣೆಯ ಪ್ರತೀಕವಾಗಿದೆ ಎಂದ ಸಮಾಜ ಸೇವಕ ಡಾ. ಬಾಬುರಾವ್ ಕಿಡಿ ಕಾರಿದ್ದಾರೆ.
ರಾಜ್ಯದಲ್ಲಿ ಏಮ್ಸ್ ಸ್ಥಾಪನೆ ಕುರಿತು ಲೋಕಸಭೆಯಲ್ಲಿ ಶುಕ್ರವಾರ ಪ್ರಶ್ನೋತ್ತರ ಅವಧಿಯಲ್ಲಿ ರಾಯಚೂರು ಸಂಸದ ಜಿ.ಕುಮಾರನಾಯಕ, ಹಾಗೂ ಬಳ್ಳಾರಿ ಸಂಸದ ಇ. ತುಕಾರಾಂ ಕೇಳಿದ ಪ್ರಶ್ನೆಗೆ ಆರೋಗ್ಯ ಖಾತೆ ರಾಜ್ಯ ಸಚಿವ ಪ್ರತಾಪ ರಾವ್ ಜಾಧವ್ ಉತ್ತರ ನೀಡಿದ್ದಾರೆ. ಈವರೆಗೂ ದೇಶದಲ್ಲಿ 22 ಏಮ್ಸ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ ಎಂದು ಅವರ ಉತ್ತರದಲ್ಲಿಯೇ ದಕ್ಷಿಣ ಭಾರತದ ಬಗ್ಗೆ ಕೇಂದ್ರ ಸರಕಾರಕ್ಕಿರುವ ಅಸಡ್ಡೆ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.
ಕೇಂದ್ರಕ್ಕೆ ಹೆಚ್ಚಿನ ಆದಾಯವನ್ನು ತಂದು ಕೊಡುವ ರಾಜ್ಯ ಕರ್ನಾಟಕ ಎನ್ನುವುದನ್ನು ಕೇಂದ್ರ ಮರೆತಂತಿದೆ. ಕೇಂದ್ರ ಸರಕಾರ 22 ರಾಜ್ಯಗಳಲ್ಲಿ ಏಮ್ಸ್ ಮಂಜೂರು ಮಾಡಿದೆ. ಆಂಧ್ರಪ್ರದೇಶ, ಆಸ್ಸಾಂ, ಬಿಹಾರಕ್ಕೆ (ಎರಡು), ಛತ್ತೀಸ್ ಗಡ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರಕ್ಕೆ ಎರಡು, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಓರಿಸ್ಸಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶಕ್ಕೆ ಎರಡು, ಉತ್ತರಖಾಂಡ್, ಪಶ್ಚಿಮ ಬಂಗಾಳ ಈ ಪಟ್ಟಿಯನ್ನು ನೋಡಿದರೆ ಏಮ್ಸ್ ಉತ್ತರ ಭಾರತದ ಬಹುತೇಕ ರಾಜ್ಯಗಳಿಗೆ ಕೊಡಮಾಡಲಾಗಿದೆ. ಒಂದೊಂದು ರಾಜ್ಯಕ್ಕೆ ಎರಡೆರಡು ಏಮ್ಸ್ ಕೊಡಮಾಡಲಾಗಿದೆ. ಇತ್ತೀಚಿಗೆ ರಚನೆಯಾಗಿರುವ ತೆಲಂಗಾಣ, ಜಾರ್ಖಂಡ್ ನಂತಹ ರಾಜ್ಯಗಳಿಗೆ ಏಮ್ಸ್ ನೀಡಿರುವ ಕೇಂದ್ರ ಸರಕಾರ ಕರ್ನಾಟಕಕ್ಕೆ ಏಮ್ಸ್ ನೀಡುವುದಕ್ಕೆ ಮೀನ ಮೇಷ ಎಣಿಸುತ್ತಿರುವುದಕ್ಕೆ ಕಾರಣವೇ ಗೊತ್ತಾಗುತ್ತಿಲ್ಲ. ರಾಜ್ಯದ 28 ಜನ ಸಂಸದರು ಈ ಕುರಿತು ಸಂಸತ್ ನಲ್ಲಿ ಒಕ್ಕೊರಲಿನ ಧ್ವನಿ ಎತ್ತಬೇಕು. ಇಲ್ಲವೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಹಿಂದುಳಿದ ಮಹತ್ವಾಕಾಂಕ್ಷಿ ಜಿಲ್ಲೆಯಾಗಿರುವ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಈಗಾಗಲೇ ಕಲ್ಯಾಣ ಕರ್ನಾಟಕದ ಸಂಸದರು ಸಂಬ0ಧಪಟ್ಟ ಸಚಿವರನ್ನು ಕಂಡು ಮನವಿ ಮಾಡಿಕೊಂಡಿದ್ದಾರೆ. ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೇಂದ್ರಕ್ಕೆ ಸರಕಾರಕ್ಕೆ ಹಲವು ಪತ್ರಗಳನ್ನು ಕಳುಹಿಸಿಕೊಟ್ಟಿದ್ದಾರೆ. ಹೀಗೆ ಏಮ್ಸ್ ಪಡೆಯಲು ರಾಜ್ಯ ಸರಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಕೇಂದ್ರ ಸರಕಾರ ಅಸಡ್ಡೆ ತೋರಿಸುತ್ತಿರುವುದು ಎಷ್ಟು ಸರಿ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಪ್ರಯತ್ನವನ್ನು ಸಡಿಲಗೊಳಿಸಬಾರದು. ಬದಲಿಗೆ ಎಲ್ಲ ೨೮ ಸಂಸದರನ್ನೊಳಗೊಂಡ ನಿಯೋಗ ತೆಗೆದುಕೊಂಡು ಹೋಗಿ ಪ್ರಧಾನ ಮಂತ್ರಿಗಳಿಗೆ ರಾಜ್ಯಕ್ಕೆ ಏಮ್ಸ್ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡುವುದಕ್ಕೆ ಮುಂದಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಸ್ಥಳೀಯ ಪ್ರಭಾವಿ ಮುಖಂಡರೂ ಸಣ್ಣ ನೀರಾವರಿ ಸಚಿವರು ಮುಖ್ಯಮಂತ್ರಿಗಳನ್ನು ಒಪ್ಪಿಸಿ ಏಮ್ಸ್ ಪಡೆಯುವ ನಿಟ್ಟಿನಲ್ಲಿ ಮತ್ತೆ ಮತ್ತೆ ಪ್ರಯತ್ನ ಮಾಡಲೇ ಬೇಕು. ರಾಯಚೂರಿಗೆ ಏಮ್ಸ್ ಪಡೆಯಲೇಬೇಕೆಂದು ಪ್ರಯತ್ನಗಳು ಸಾಗಬೇಕಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Comments
Post a Comment