ಮಹಿಳೆಯರ ದೂರು ಅರ್ಜಿಗಳ ಬಗ್ಗೆ  15 ದಿನಗಳಲ್ಲಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ- ಡಾ.ನಾಗಲಕ್ಷ್ಮಿ ಚೌಧರಿ


ಜಯ ಧ್ವಜ ನ್ಯೂಸ್ ,ರಾಯಚೂರು, ಸೆ.19- ಮಹಿಳೆಯರು, ವಿದ್ಯಾರ್ಥಿನಿಯರು ,ಸಾರ್ವಜನಿಕರಿಂದ ಸ್ವೀಕೃತವಾದ ದೂರು ಅರ್ಜಿಗಳಿಗೆ ಸ್ಪಂದಿಸಿ 15 ದಿನಗಳಲ್ಲಿ ವರದಿ ನೀಡುವಂತೆ  ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.

ಅವರಿಂದು ನಗರದ  ಮಹಾನಗರ ಪಾಲಿಕೆಯ ಕಚೇರಿ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ  ಮಾತನಾಡಿ ಇಂದು ನಗರದಲ್ಲಿ ನಡೆದ ಸಂವಾದ  ಕಾರ್ಯಕ್ರಮದಲ್ಲಿ  ಸ್ವೀಕೃತವಾದ ದೂರು ಅರ್ಜಿಗಳನ್ನು ಆಯಾ ಇಲಾಖೆಯ ಆಯುಕ್ತರಿಗೆ ಕಳುಹಿಸಲಾಗುವುದು. ಈ ಸಂಬಂಧ ಆಯಾ ಇಲಾಖೆಗಳು ಸಹ 15 ದಿನಗಳೊಳಗೆ ವರದಿ ಕಳುಹಿಸಲು ಸೂಚಿಸಲಾಗಿದೆ ಎಂದರು.

ಸಂವಾದದಲ್ಲಿ ಅನೇಕ ಬಗೆಯ ದೂರು ಅರ್ಜಿಗಳು ಬಂದಿದ್ದು ಜಿಲ್ಲೆಯಲ್ಲಿ ಕುಬ್ಜ ಮಕ್ಕಳ ಸಂಖ್ಯೆ ಹಾಗೂ ಅಪೌಷ್ಠಿಕತೆ, ರಕ್ತಹೀನತೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ದೂರುಗಳು ಬಂದಿವೆ. ಕಾರ್ಖಾನೆ ನೀರು ನದಿಗೆ, ಜಮೀನಿಗೆ ಹರಿದು ಕಲುಷಿತವಾಗುತ್ತಿದೆ. ಯರಮರಸ್ ಸುತ್ತಲಿನ ಪ್ರದೇಶದಲ್ಲಿ ಪರಿಸರ ಮಾಲಿನ್ಯವಾಗಿದೆ ಎಂದು ದೂರುಗಳು ಬಂದಿವೆ ಇದಕ್ಕೆಲ್ಲ ಸ್ಪಂದನೆ ನೀಡಲಾಗಿದೆ. ಇದು ಇಲ್ಲಿಗೆ ಮುಕ್ತಾಯವಾಗದು. ಅಧಿಕಾರಿಗಳು ಜನರ ಬಳಿ ಹೋಗಬೇಕು. ಜಾಗೃತಿ ಮೂಡಿಸಬೇಕು. ಜನತೆಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.


ಎಲ್ಲ ಕಚೇರಿಗಳ ಗೋಡೆಗಳ ಮೇಲೆ ಮಹಿಳಾ ಸಹಾಯವಾಣಿ ಸಂಖ್ಯೆಯನ್ನು ಬರೆಸಲು ಎಲ್ಲ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು. ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಮಹಿಳಾ ಗ್ರಾಮ ಸಭೆಗಳನ್ನು ಕಡ್ಡಾಯ ನಡೆಸಲು ಮಾನ್ಯ ಮುಖ್ಯಮಂತ್ರಿಗಳು ಸೂಚಿಸಿದ್ದು, ರಾಯಚೂರ ಜಿಲ್ಲೆಯಲ್ಲಿ ಈ ಕ್ರಮವಾಗಿದೆಯಾ ಎಂಬುದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದರು.

ಸಿಂಧನೂರ ಭೇಟಿ ವೇಳೆ ಆಘಾತಕಾರಿ ವಿಷಯ ಕಂಡುಬಂದದ್ದು ದೂರುಗಳು ಸಹ ಕೇಳಿ ಬಂದಿವೆ ಎಂದರು. ಸಿಂಧನೂರ, ಮಸ್ಕಿ, ಮಾನವಿ ಪಟ್ಟಣ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ವಾಸ ಮಾಡಿರುವ ಸಿಂದೋಲ ಅಲೆಮಾರಿ ಸಮುದಾಯದ ಜನಗಳಿಗೆ, ಮಾಜಿ ದೇವದಾಸಿ ಮಹಿಳೆಯರಿಗೆ ಮೂಲಭೂತ ಸೌಕರ್ಯ ಇಲ್ಲ ಅವರಿಗೆ ನಿವೇಶನ ಸೌಕರ್ಯ ಸಮರ್ಪಕವಾಗಿ ದೊರೆತಿಲ್ಲ. ಅವರು ವಾಸಿಸುವ ಕ್ಯಾಂಪಗಳಲ್ಲಿನ ರಸ್ತೆ ಸರಿ ಇಲ್ಲ ಎಂದು ಅನೇಕ ಗ್ರಾಮಗಳಿಂದ ಬಂದಿದ್ದ ಸುಮಾರು 600ಕ್ಕೂ ಹೆಚ್ಚು ಮಹಿಳೆಯರು  ದುಸ್ಥಿತಿಯಲ್ಲಿದ್ದಾರೆ. ಅವರಿಗೆ ಸ್ಪಂದನೆ ನೀಡಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸುವ ವೇಳೆ, ಬಹಳಷ್ಟು ಜನ ವಿದ್ಯಾರ್ಥಿನಿಯರು, ಸಾರಿಗೆ ಬಸ್ ಗಳ ಸೌಕರ್ಯ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕೆಎಸ್ಆರ್ ಟಿಸಿ ಸ್ಪಂದನೆ ಮಾಡಬೇಕು. ಹಾಸ್ಟಲಗಳಲ್ಲಿ ವ್ಯವಸ್ಥೆ ಸರಿ ಇಲ್ಲ ಎಂಬುದು ನನಗೆ ಖುದ್ದು ಭೇಟಿ ವೇಳೆ ಕಂಡು ಬಂದಿದೆ. ಇದು ಸರಿ ಆಗಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಇಂದಿನ  ಸಂವಾದ ಸಭೆಗೆ ಆಗಮಿಸಿದ್ದ ಬಹಳಷ್ಟು ಮಹಿಳೆಯರು ನೊಂದು ಕಣ್ಣೀರು ಹಾಕಿದ್ದಾರೆ. ಅಂತಹ ವಿಧವೆಯರು, ಸೌಲಭ್ಯ ವಂಚಿತ  ಹೆಣ್ಣು ಮಕ್ಕಳಿಗೆ ಅಧಿಕಾರಿಗಳು ಸ್ಪಂದನೆ ಮಾಡಬೇಕು ಎಂದೂ ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ. ಎಂ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತರಾದ ಗಜಾನನ ಬಾಳೆ  ಇನ್ನಿತರರು ಇದ್ದರು.

Comments

Popular posts from this blog