ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ:                    
ಅಗತ್ಯ ಮಾಹಿತಿ ನೀಡಲು ಅಪರ ಜಿಲ್ಲಾಧಿಕಾರಿ ಶಿವಾನಂದ ಮನವಿ

ಜಯ ಧ್ವಜ ನ್ಯೂಸ್  , ರಾಯಚೂರು ಸೆ. 18- ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025ರ ಜಾಗೃತಿ ಅಭಿಯಾನದಲ್ಲಿ ನಾವೆಲ್ಲರೂ ಭಾಗಿಯಾಗಬೇಕು.ಈ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರರಿಗೆ ಅಗತ್ಯ ಮಾಹಿತಿ ಒದಗಿಸಿ ಸಮೀಕ್ಷೆ ಯಶ್ವಿಸಿಗೊಳಿಸಲು ಜಿಲ್ಲೆಯ ಎಲ್ಲಾ ನಾಗರೀಕರು ಸಹಕಾರ ನೀಡಬೇಕು. ಇದು ನಮ್ಮ ಸಮೀಕ್ಷೆ-ನಾವು ಜವಾಬ್ದಾರಿಯಿಂದ ಪಾಲ್ಗೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಮನವಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ವರ್ಗಗಳ ಅಥವಾ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು. ಹಾಗೂ ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಎಲ್ಲಾ ಜನಾಂಗದಲ್ಲಿರುವ ದುರ್ಬಲ ಅಥವಾ ಹಿಂದುಳಿದವರನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸುವುದು ಸಮೀಕ್ಷೆಯ ಉದ್ದೇಶವಾಗಿದೆ. 

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯಕ್ಕಾಗಿ ಸೆಪ್ಟೆಂಬರ್ 22ರಿಂದ ನವಂಬರ್ 07ರವರೆಗೆ ಗಣಿತಿದಾರರು ಮನೆಮನೆಗೆ ಭೇಟಿ ನೀಡಿ ಕುಟುಂಬದ ಅಂಕಿ-ಅಂಶಗಳನ್ನು ಸಂಗ್ರಹಿಸುವರು. 

ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಕೌಶಲ್ಯ, ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಮುಂತಾದ ಮಾಹಿತಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯನ್ನು ದೃಢೀಕರಣ ಪತ್ರವಾಗಿ ಬಳಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತದೆ. 

ಈ ವೇಳೆ ಪಡಿತರ ಚೀಟಿ, ಆಧಾರ್ ಕಾರ್ಡ್/ಸಂಖ್ಯೆ, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಕಾರ್ಡ್ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕಾಗಿರುತ್ತದೆ. ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳ ನಿಗದಿತ ನಮೂನೆಯನ್ನು ಮಾಹಿತಿಗಾಗಿ ಆಶಾ ಕಾರ್ಯಕರ್ತೆಯರ ಮೂಲಕ ನಗರದ ಕೆಲವು ಆಯ್ದು ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತಲುಪಿಸಲಾಗುತ್ತಿದೆ.

ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡಗಳು ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಸಮೀಕ್ಷೆ ವೇಳೆ ಇ-ಕೆವೈಸಿ ಪ್ರಕ್ರಿಯೆಗಾಗಿ ಒಟಿಪಿ ಸಂಖ್ಯೆ ಆ ಸದಸ್ಯರ ಆಧಾರ್ ನಂಬರ್‌ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ಗೆ ಬರುತ್ತದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರು ಪೋನ್ ಮೂಲಕ ಒಟಿಪಿ ಸಂಖ್ಯೆ ಪಡೆದು ಮಾಹಿತಿ ನೀಡಬೇಕಾಗುತ್ತದೆ. 

6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಸದಸ್ಯನಿಗೂ ಆಧಾರ್ ಕಾರ್ಡ ಕಡ್ಡಾಯವಾಗಿದೆ. ಆಧಾರ್ ಇಲ್ಲದಿದ್ದರೆ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ನೋಂದಾಯಿಸಿ, ಆಧಾರ್ ಸಂಖ್ಯೆ ಪಡೆದು ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಹಾಗೇಯೇ ಮೊಬೈಲ್ ನಂಬರ್ ಆಧಾರ್ ನಂಬರ್‌ಗೆ ಲಿಂಕ್ ಆಗಿಲ್ಲದಿದ್ದರೆ ಅದನ್ನು ತಕ್ಷಣವೇ ಲಿಂಕ್ ಮಾಡಿಸಿಕೊಳ್ಳಬೇಕು.

ಆಧಾರ ಕಾರ್ಡನಲ್ಲಿ ನಮೂದಾದ ಮೊಬೈಲ್ ನಂಬರ್ ಚಾಲ್ತಿಯಲ್ಲಿ ಇಲ್ಲದಿದ್ದರೇ ಕೂಡಲೇ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಆಧಾರ ಕಾರ್ಡ್ ನಲ್ಲಿ ಅಪ್‌ಡೇಟ್ ಮಾಡಲು ಸಮೀಪದ ಗ್ರಾಮ-ಒನ-ಸೇವಾ ಕೇಂದ್ರ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡಬಹುದಾಗಿದೆ ಎಂದು ಅವರು ಸಲಹೆ ಮಾಡಿದ್ದಾರೆ.

ಈ ಸಮೀಕ್ಷಾ ಕಾರ್ಯಕ್ಕಾಗಿ ಇಡಿಎಸ್‌ಎಸ್ ವತಿಯಿಂದ ಸಾಷ್ಟವೇರ್ ಮತ್ತು ಮೊಬೈಲ್ ಆ್ಯಪ್ ತಯಾರಿಸಲಾಗಿದ್ದು, ಈ ಸಂಸ್ಥೆಯ ಮಾರ್ಗದರ್ಶನದೊಂದಿಗೆ ಕರ್ನಾಟಕ ರಾಜ್ಯದಾದ್ಯಂತ ಇಂಧನ ಇಲಾಖೆಯ ಮೀಟರ್ ರಿಡರ್‌ಗಳಿಂದ ಮನೆಮನೆಗೆ ತೆರಳಿ ಜಿಯೋ ಟ್ಯಾಗಿಂಗ್ ಮೂಲಕ ಯುಹೆಚ್‌ಐಡಿ ಜನರೇಟ್ ಮಾಡಿ ಮತ್ತು ಸ್ಟೀಕರಿಂಗ್ ಅಂಟಿಸಿ ಈ ನಂಬರ್ ನಮೂದಿಸಲಾಗಿರುತ್ತದೆ. ಬಿಟ್ಟು ಹೋದ ಮನೆಗಳಿಗೆ ಗಣಿತಿದಾರರು ಯುಹೆಚ್‌ಐಡಿ ಜನರೇಟ್ ಮಾಡಲಿದ್ದಾರೆ. ಈ ಆಧಾರ ಮೇಲೆ ಕುಟುಂಬ ಸಂಖ್ಯೆಗಳನ್ನು ಗುರುತಿಸಿ ಪ್ರತಿ ಗಣಿತಿದಾರರಿಗೆ 150 ಮನೆಗಳ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಇಂತಹ 10 ಬ್ಲಾಕ್‌ಗಳಿಗೆ ಒಬ್ಬ ಗಣಿತಿ ಮೇಲ್ವಿಚಾರಕರನ್ನು ನೇಮಿಸಲಾಗುತ್ತಿದೆ. ಮತ್ತು ತರಬೇತಿಗಾಗಿ 08 ರಾಜ್ಯ ಮಟ್ಟದ 68 ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್‌ಗಳನ್ನು, ಪ್ರತಿ ತಾಲ್ಲೂಕಿಗೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ, ತಾಂತ್ರಿಕ ಸಿಬ್ಬಂದಿ ನಿಯೋಜಿಸಲಾಗಿದೆ. 2024ನೇ ಸಾಲಿನಲ್ಲಿ ಜಿಲ್ಲಾ ಸಾಂಖ್ಯಿಕ ಇಲಾಖೆಯ ಪ್ರಕಾರ ಅಂದಾಜು 4,75,000 ಕುಟುಂಬಗಳಿರುತ್ತದೆ. ಅದರಂತೆ ಜಿಲ್ಲೆಯ ದೇವದುರ್ಗ ತಾಲೂಕಿಗೆ 425 ಗಣಿತಿದಾರರು, 45 ಮೇಲ್ವಿಚಾರಕರು, 09 ಮಾಸ್ಟರ್ ಟ್ರೈನರ್ಸ, ಲಿಂಗಸುಗೂರು ತಾಲೂಕಿಗೆ 470 ಗಣಿತಿದಾರರು, 50 ಮೇಲ್ವಿಚಾರಕರು, 10 ಮಾಸ್ಟರ್ ಟ್ರೈನರ‍್ಸ, ಮಾನವಿ ತಾಲೂಕಿಗೆ 310 ಗಣಿತಿದಾರರು, 35 ಮೇಲ್ವಿಚಾರಕರು, 07 ಮಾಸ್ಟರ್ ಟ್ರೆನರ್ಸ, ಮಸ್ಕಿ ತಾಲೂಕಿಗೆ 310 ಗಣಿತಿದಾರರು, 35 ಮೇಲ್ವಿಚಾರಕರು, 07 ಮಾಸ್ಟರ್ ಟ್ರೆನರ್ಸ, ರಾಯಚೂರು ತಾಲೂಕಿಗೆ 860 ಗಣಿತಿದಾರರು, 90 ಮೇಲ್ವಿಚಾರಕರು, 18 ಮಾಸ್ಟರ್ ಟ್ರೆನರ‍್ಸ, ಸಿಂಧನೂರು ತಾಲೂಕಿಗೆ 563 ಗಣಿತಿದಾರರು, 60 ಮೇಲ್ವಿಚಾರಕರು, 12 ಮಾಸ್ಟರ್ ಟ್ರೈನರ‍್ಸ, ಸಿರವಾರ ತಾಲೂಕಿಗೆ 240 ಗಣಿತಿದಾರರು, 25 ಮೇಲ್ವಿಚಾರಕರು, 05 ಮಾಸ್ಟರ್ ಟ್ರೈನರ್ಸ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3178 ಗಣಿತಿ ದಾರರು, 340 ಮೇಲ್ವಿಚಾರಕರು ಹಾಗೂ 68 ಮಾಸ್ಟರ್ ಟ್ರೇನರ್ಸ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. 

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಲಾಗಿರುತ್ತದೆ. ಗಣಿತಿದಾರರಿಗೆ ಒದಗಿಸಲು ಕೈಪಿಡಿ, ಬ್ಯಾಗ್, ಟೋಪಿ ಮತ್ತು ಸ್ವಯಂ ದೃಢೀಕರಣ ಪತ್ರಗಳ ಕಿಟ್ ಸಿದ್ಧಪಡಿಸಲಾಗಿರುತ್ತದೆ. ಆಯಾ ತಾಲ್ಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ವಾರ್ ರೂಮ್‌ಗಳನ್ನು ಸ್ಥಾಪಿಸಿ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ನಿಯೋಜಿಸಿ ಸಮೀಕ್ಷೆ ಕಾರ್ಯ ಸುಗಮವಾಗಿ ಮತ್ತು ವೇಗವಾಗಿ ಜರುಗಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 

ಹೆಚ್ಚಿನ ಮಾಹಿತಿಗಾಗಿ ಆಯೋಗದ ಸಹಾಯವಾಣಿ ಸಂಖ್ಯೆ: 8050770004ಗೆ ಕರೆ ಮಾಡಬಹುದಾಗಿದೆ. ಅಥವಾ ಆಯೋಗದ ಜಾಲತಾಣ https://kscbc.karnataka.gov.in ಗೆ ಭೇಟಿ ನೀಡಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog