ಸಚಿವ ಬೋಸರಾಜು ರಿಂದ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ: ಮುಂದಿನ ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ
ಜಯ ಧ್ವಜ ನ್ಯೂಸ್, ರಾಯಚೂರು,ಸೆ.20- ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ .ಎಸ್. ಬೋಸರಾಜು ಅವರು ಇಂದು ರಾಯಚೂರು ನಗರದ ಹೊರವಲಯದ ಯರಮರಸ್ ಪ್ರದೇಶದಲ್ಲಿ ಸಂಚರಿಸಿ ನಿರ್ಮಾಣ ಹಂತದಲ್ಲಿರುವ ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿ ಪರಿಶೀಲಿಸಿದರು.
ನಿರ್ಮಾಣ ಹಂತದಲ್ಲಿರುವ ಪ್ಲೈಟ್ ಟರ್ಮಿನಲ್ ಕಟ್ಟಡ, ಎಲೆಕ್ಟ್ರಿಕಲ್ ಸೇಫ್ಟಿ ಕಟ್ಟಡ, ರವ್ ವೇ ಕಾಮಗಾರಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರದಿಂದ ಯಾವುದೇ ರೀತಿಯ ಹಣಕಾಸಿನ ಕೊರತೆಯಿಲ್ಲ. ಜಿಲ್ಲಾಡಳಿತವು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು, ಜಿಲ್ಲಾಧಿಕಾರಿಗಳು ನಿರಂತರವಾಗಿ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆಯುತ್ತಿದ್ದಾರೆ. ನಿಲ್ದಾಣವನ್ನು ಉತ್ತಮವಾಗಿ ಸಿದ್ದಪಡಿಸಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.
ನಿಲ್ದಾಣದ ಕಾಂಪೌಂಡ್ ನಿರ್ಮಾಣ ಕಾರ್ಯ ಈಗಾಗಲೆ ಶೇ.90ರಷ್ಟು ಪೂರ್ಣಗೊಂಡಿದೆ. ಈಗಾಗಲೇ ಇಲ್ಲಿನ ಮಣ್ಣಿನ ಪರೀಕ್ಷೆ ನಡೆಸಿದ್ದು, ಮುಖ್ಯವಾಗಿ ಆಗಬೇಕಾದ ರನ್ ವೇ ಮತ್ತು ಟಾವರ್ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ. ಬೇರೆಡೆ 5 ಎಕರೆ ಜಾಗ ಗುರುತಿಸಿ ಸಂತ್ರಸ್ತ ಕುಟುಂಬದವರಿಗೆ ಮನೆಕಟ್ಟಲು ಅನುಕೂಲ ಕಲ್ಪಿಸಲಾಗಿದೆ.
ಅಗತ್ಯವಿರುವ ಹೆಚ್ಚುವರಿ ಭೂಸ್ವಾಧೀನಕ್ಕು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ರಾಯಚೂರ ಭಾಗದಲ್ಲಿ ವೈಟಿಪಿಎಸ್, ಆರ್ ಟಿಪಿಎಸ್, ಹಟ್ಟಿ ಚಿನ್ನದ ಗಣಿ, ಐಐಐಟಿ, ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾನಿಲಯ, ಆದಕವಿ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾಲಯ, ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಂತ್ರಾಲಯ ಮತ್ತು ನೂರಾರು ಖಾಸಗಿ ಕಂಪನಿಗಳು ಇರುವುದರಿಂದ ರಾಯಚೂರಿನಿಂದ ಬೇರೆಡೆ ಸಂಚರಿಸಲು ವಿಮಾನ ನಿಲ್ದಾಣದ ಅಗತ್ಯವಿದೆ ಎಂದರು.
ಜಿಂದಾಲ್, ಕರ್ನೂಲ್ ನಂತೆ ವಿಮಾನಯಾನದ ಅಗತ್ಯತೆ ಇಲ್ಲಿದೆ. ವಿಜಯಪುರ ವಿಮಾನ ನಿಲ್ದಾಣ, ಶಿವಮೋಗ್ಗ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಗಮನಿಸಿದ್ದು, ಅಲ್ಲಿನ ಕಾಮಗಾರಿಗಳಿಗೆ ಹೋಲಿಸಿದರೆ ರಾಯಚೂರ ವಿಮಾನ ನಿಲ್ದಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. 2026ರ ದಸರಾ ಹೊತ್ತಿಗೆ ನಿರ್ಮಾಣ ಕಾರ್ಯ ಸಂಪೂರ್ಣವಾಗುವ ರೀತಿ ಸಿದ್ಧತಾ ಕಾರ್ಯಗಳು ನಡೆದಿವೆ ಎಂದು ಸಚಿವರು ತಿಳಿಸಿದರು.
ಈ ವೇಳೆ ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಸಹಾಯಕ ಆಯುಕ್ತರಾದ ಗಜಾನನ ಬಾಳೆ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ ಮತ್ತಿತರರು ಇದ್ದರು.
Comments
Post a Comment