ನಕಲಿ ಎಸ್. ಟಿ. ಪ್ರಮಾಣ ಪತ್ರ ತಡೆಯಲು ಆಗ್ರಹಿಸಿ ಪ್ರತಿಭಟನೆ
ಜಯ ಧ್ವಜ ನ್ಯೂಸ್ ,ರಾಯಚೂರು, ಸೆ. 25- ನಾಯಕ ತಳವಾರ ಮತ್ತು ನಾಯಕ ಪರಿವಾರ ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಿಂದುಳಿದ ವರ್ಗದಲ್ಲಿ ಬರುವ ಜಾತಿಗಳವರಿಗೆ ತಳವಾರ ಹೆಸರಿನಲ್ಲಿ ನಕಲಿ ಎಸ್ ಟಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ವಾಲ್ಮೀಕಿ ನಾಯಕ ಸಮಾಜದಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ರಾಯಚೂರು ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ವೃತ್ತದಿಂದ ಬೈಕ್ ರ್ಯಾಲಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಡಳಿತ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿಪ್ರವರ್ಗ-೧ ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವದನ್ನು ಹಾಗೂ ಅನ್ಯ ಸಮುದಾಯದವರನ್ನು ಎಸ್.ಟಿ ಪಟ್ಟಿಗೆ ಸೇರಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
೧೯.೩.೨೦೨೦ರಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಯ ಕ್ರಮ ಸಂಖ್ಯೆ ೩೮ ರಲ್ಲಿ ನಾಯಕ ಬುಡಕಟ್ಟಿನ ಪರ್ಯಾಯ ಹೆಸರುಗಳಾದ ಪರಿವಾರ ಮತ್ತು ತಳವಾರ ಬುಡಕಟ್ಟುಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಸಲಾಗಿದೆ. ಆದರೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ವಿಶೇಷವಾಗಿ ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-೧ ರ ಕ್ರಮ ಸಂಖ್ಯೆ ೬ ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ,ಕೊಲಿ ಮುಂತಾದ ಜಾತಿಗೆ ಸೇರಿದವರಿಗೆ ಎಸ್ ಟಿ ಪ್ರಮಾಣ ಪತ್ರ ನೀಡುತ್ತಿದ್ದು ಸಂವಿಧಾನ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಬೇರೆ ಬೇರೆ ಸಮುದಾಯಗಳನ್ನು ಸೇರಿಸಲು ಸರ್ಕಾರ ಸ್ಪಂದಿಸುತ್ತಿರುವುದು ಸಂವಿಧಾನ ಆಶಯಗಳಿಗೆ ವಿರುದ್ದವಾಗಿರುವುದರಿಂದ ಯಾವುದೇ ಕಾರಣಕ್ಕೂ ಬೇರೆ ಪ್ರಬಲ ಸಮುದಾಯಗಳನ್ನು ಎಸ್ ಟಿ ಗೆ ಸೇರಿಸಬಾರದು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರಘುವೀರ್ ನಾಯಕ್ ಮಲ್ಲಿಕಾರ್ಜುನಾಯಕ, ಭೀಮರಾಯ ಹದ್ದಿನಾಳ, ಕೊಟ್ರೇಶಪ್ಪ ಕೋರಿ, ರಾಮ ನಾಯಕ್, ನರೇಂದ್ರ ನಾಯಕ್,ರಮೇಶ ನಾಯಕ,ರಾಮಕೃಷ್ಣ ನಾಯಕ, ರೂಪಾ ಶ್ರೀನಿವಾಸ್ ನಾಯಕ್, ಕರಿಯಪ್ಪ ನಾಯಕ ಮಡ್ದಿಪೇಟ, ರಾಮುಲು ನಾಯಕ ತಿಮ್ಮಾಪುರ ಪೇಟೆ, ವಿರುಪಾಕ್ಷಿ ನಾಯಕ ಮಂಗಳಾರಪೇಟೆ, ನಾಗರಾಜ್ ನಾಯಕ್ ಗಂಗಾ ನಿವಾಸ್, ಅರುಣ್ ಕುಮಾರ್ ದೊರೆ, ಸಂಗಮೇಶ್ ನಾಯಕ್, ತಿಮ್ಮಪ್ಪ ಮಟಮಾರಿ, ರವಿ ನಾಯಕ ತಿಮ್ಮಾಪುರ ಪೇಟೆ, ಪ್ರಕಾಶ್ ನಾಯಕ್ ಮಡ್ಡಿಪೇಟೆ, ಪಾಂಡು ನಾಯಕ್ ಮಡ್ಡಿಪೇಟೆ, ವಿನಾಯಕ ಕಮಲಾಪುರ್, ಶಿವರಾಯ ನಾಯಕ್, ನರಸಿಂಹ ನಾಯಕ್ ಸ್ಟೇಷನ್ ಏರಿಯಾ, ಮಹೇಂದ್ರ ನಾಯಕ್ ಹೊಸಪೇಟೆ, ಈರಣ್ಣ ನಾಯಕ್ (ರಾಣಾ ), ರವಿ ನಾಯಕ ಮಲಯಾಬಾದ್, ರಾಜು ನಾಯಕ್ ಗಂಗಾ ನಿವಾಸ್, ವೀರೇಶ್ ನಾಯಕ್ ಗಾಜಗಾರಪೇಟೆ, ಜೆಲ್ಲಿ ರಾಮಪ್ಪ ನಾಯಕ್, ಮಹೇಂದ್ರ ನಾಯಕ್ (ಪೂಜಾರಿ ), ಸದಾಶಿವ ನಾಯಕ್, ವೆಂಕಟೇಶ್ ನಾಯಕ್ ಬಿಜನಗೇರೆ, ವೀರೇಶ್ ನಾಯಕ್ ಬಿಜನಗೇರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Comments
Post a Comment