ಶಾಸಕರಾದ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ತುಂಗಾಭದ್ರಾ ನದಿ ತಟದಲ್ಲಿ ಅಂಬಾ ಆರತಿ ಕಾರ್ಯಕ್ರಮ
ಜಯ ಧ್ವಜ ನ್ಯೂಸ್ , ರಾಯಚೂರು ಸೆ.22-
'ಅಂಬಾ ಮಾತಾಕಿ ಜೈ'.. 'ತಾಯಿ ತುಂಗಭದ್ರಗೆ ಜಯವಾಗಲಿ'.. 'ಹರಹರ ಮಹಾದೇವ..'.. 'ತುಂಗಾರತಿಗೆ ಜಯವಾಗಲಿ..' 'ಅಂಬಾ ಮಾತೆಗೆ ಜಯವಾಗಲಿ'.. ಎನ್ನುವ ಭಕ್ತಿ ಭಾವದ ಘೋಷಣೆಗಳ ಮಧ್ಯೆ ತುಂಗಭದ್ರಗೆ ಅಂಬಾ ಆರತಿ ಕಾರ್ಯಕ್ರಮವು ಇಂದು ತುಂಗಭದ್ರಾ ತಟದಲ್ಲಿರುವ ಮುಕ್ಕುಂದಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಗೋಧೂಳಿ ಹೊತ್ತಿಗೆ, ಜಿಟಿಜಿಟಿ ಮಳೆಹನಿಗಳ ಸಿಂಚನದಲ್ಲಿ ವಾರಣಾಸಿಯ ಪ್ರಖ್ಯಾತ ಅರ್ಚಕರ ತಂಡವು ಮುಕ್ಕುಂದಾ ನದಿ ತೀರದಲ್ಲಿ ಅಂಬಾ ಆರತಿಯ ಪೂಜಾ ಕೈಂಕರ್ಯಗಳನ್ನು ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಜಯಕಾರದ ಘೋಷಣೆಗಳು ಮೊಳಗಿದವು.
ಮುಕ್ಕುಂದಾ ಸೇರಿದಂತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ತುಂಗಭದ್ರೆಯ ಅಂಗಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಆಂಬಾ ಆರತಿಯ ಸಂಭ್ರಮವನ್ನು ಕಣ್ತುಂಬಿಕೊಂಡರು.
ನೆರೆದಿದ್ದ ಜನರು ತುಂಗಭದ್ರೆಗೆ ಹಾಗೂ ತಾಯಿ ಅಂಬಾದೇವಿಗೆ ಭಕ್ತಿ-ಭಾವದಿಂದ ನಮನ ಸಲ್ಲಿಸಿದರು.
ಶಾಸಕರ ನೇತೃತ್ವ: ಸಿಂಧನೂರ ತಾಲೂಕಾಡಳಿತ ಮತ್ತು ಸಿಂಧನೂರ ತಾಲೂಕು ದಸರಾ ಉತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನೇತೃತ್ವವನ್ನು ಸಿಂಧನೂರ ಕ್ಷೇತ್ರದ ಶಾಸಕರು ಹಾಗೂ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ ಅವರು ವಹಿಸಿದ್ದರು.
ದೇವರಲ್ಲಿ ಪ್ರಾರ್ಥನೆ: ಇದೆ ವೇಳೆ ಶಾಸಕರು ಮಾತನಾಡಿ, ತುಂಗಾಮಾತೆ ಮತ್ತು ಅಂಬಾಮಾತೆಯ ಆಶೀರ್ವಾದವು ಇಡೀ ದೇಶಕ್ಕೆ, ರಾಜ್ಯಕ್ಕೆ ಮತ್ತು ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ಇರಲಿ ಎಂದು ಕೇಳಿ ಕೊಳ್ಳುತ್ತೇವೆ ಎಂದ ಅವರು ತುಂಗಭದ್ರೆಯು ಸದಾಕಾಲ ಹರಿಯುತ್ತ ಈ ಭಾಗವು ಹಸಿರಿನಿಂದ ಕಂಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಮನವಿ: ಸಿಂಧನೂರ ತಾಲೂಕಿನಲ್ಲಿ
ಹೊಸ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಆರಂಭಿಸುವ ಹಿನ್ನೆಲೆಯಲ್ಲಿ ನಾವು ನಮ್ಮ ಸಿಂಧನೂರ ದಸರಾ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ 9 ದಿನಗಳ ಕಾಲ ಸಿಂಧನೂರ ನಗರ ಮತ್ತು ಸುತ್ತಲಿನ ವಿವಿಧ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸ್ಥಳೀಯ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳ ಕಲಾವಿದರು ಕಲಾರಸದೌತಣ ನೀಡಲಿದ್ದಾರೆ. ಸಾರ್ವಜನಿಕರು ಅಗಮಿಸಿ ಕಾರ್ಯಕ್ರಮ ಯಶಗೊಳಿಸಬೇಕು ಎಂದು ಶಾಸಕರು ಸಿಂಧನೂರ ತಾಲೂಕಿನ ಜನರಲ್ಲಿ ಮನವಿ ಮಾಡಿದರು.
ಇತಿಹಾಸದ ಸಂಭ್ರಮ: ಮಾಜಿ ಸಂಸದರಾದ ಕೆ ವಿರುಪಾಕ್ಷಪ್ಪ ಅವರು ಮಾತನಾಡಿ, ವಿಜಯನಗರದ ಅರಸರು ಮುಕ್ಕುಂದಾ ಗ್ರಾಮದಿಂದಲೇ ದಸರಾ ಆಚರಣೆ ಆರಂಭಿಸಿದರು ಎನ್ನುವ ಐತಿಹ್ಯವಿದೆ. ಅದರಂತೆ ಸಿಂಧನೂರ ತಾಲೂಕಾಡಳಿತವು ಈ ಬಾರಿ ದಸರಾ ಉತ್ಸವ ಹಮ್ಮಿಕೊಂಡು ಅಂಬಾ ಆರತಿ ಕಾರ್ಯಕ್ರಮ ನಡೆಸಿ ಇತಿಹಾಸದ ಸಂಭ್ರಮ ಮರುಕಳಿಸುವ ಕಾರ್ಯವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖಂಡರಾದ ಎಂ.ಪಿ.ನಾಡಗೌಡ್ರು, ಸಹಾಯಕ ಆಯುಕ್ತರಾದ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ ಅರುಣಕುಮಾರ ದೇಸಾಯಿ, ತಾಲೂಕು ಪಂಚಾಯತ್ ಇಓ, ಸಿಂಧನೂರ ತಾಲೂಕಿನ ಗಣ್ಯ ನಾಗರಿಕರು, ಸಿಂಧನೂರು ತಾಲೂಕಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಮುಕ್ಕುಂದಾ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಇದ್ದರು.
ಪ್ರಸಾದದ ವ್ಯವಸ್ಥೆ: ಅಂಬಾ ಆರತಿ ಕಾರ್ಯಕ್ರಮದ ಬಳಿಕ ನೆರೆದಿದ್ದ ಜನತೆಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
Comments
Post a Comment