ದಾಸ ಸಾಹಿತ್ಯದಲ್ಲಿ ಪ್ರಮುಖ ದಾಸವರೇಣ್ಯರು ಶ್ರೀ ಪ್ರಾಣೇಶ ದಾಸರು- ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ , ರಾಯಚೂರು, ಅ.1- ದಾಸ ಸಾಹಿತ್ಯ ಮತ್ತು ವ್ಯಾಸ ಸಾಹಿತ್ಯದ ಪರಂಪರೆಯನ್ನು ಬೆಳೆಸಿದವರಲ್ಲಿ ಪ್ರಮುಖ ದಾಸ ವರೇಣ್ಯರೆಂದರೆ ಶ್ರೀ ಪ್ರಾಣೇಶ ದಾಸರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿಯವರು ಹೇಳಿದರು.
ಅವರು ಮಂಗಳವಾರ ಸಂಜೆ ರಾಯಚೂರು ನಗರದ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ ಶ್ರೀ ಪ್ರಾಣೇಶದಾಸರ ಉತ್ತರಾರಾಧನೆ ಕಾರ್ಯಕ್ರಮ ದಲ್ಲಿ ಮಾತನಾಡಿದರು.
1785 ರಿಂದ 1860 ಶ್ರೀ ಪ್ರಾಣೇಶದಾಸರ ಕಾಲಾವಧಿ ಯಾಗಿದ್ದು,ಲಿಂಗಸುಗೂರಿನಲ್ಲಿ ಜನಿಸಿದ ಇವರು ದಾಸ ಶ್ರೇಷ್ಠರಾದ ಜಗನ್ನಾಥದಾಸರಿಂದ ಹರಿದಾಸ ದೀಕ್ಷೆಯನ್ನು ಪಡೆದು ಶ್ರೀ ಪ್ರಾಣೇಶ ವಿಠಲ ಅಂಕಿತದಿಂದ ಬಿಂಬ ಧ್ಯಾನ ಸುಳಾದಿ, ಪಂಚಭೇದ, ತಂತ್ರಸಾರೋಕ್ತ ಕೇಶವಾದಿ, ಬುಡ್ಡಿ ಬ್ರಹ್ಮ ನ ಕಥ, ಗೋಪಿಕಾ ವಿಲಾಸ, ಸೀತಾ ಸ್ವಯಂವರ, ಪ್ರಹ್ಲಾದ ಚರಿತೆ ಪಾರ್ಥವಿಲಾಸ, ಮುಂತಾದ ಕೃತಿಗಳ ಜೊತೆಗೆ ನೂರಾರು ಸಂಕೀರ್ತನೆಗಳನ್ನು ಸುಳಾದಿ ಗಳನ್ನು, ಉಗಾಭೋಗಗಳನ್ನು ರಚಿಸಿ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಶ್ರೀ ಜಯಕುಮಾರ್ ದೇಸಾಯಿ ಕಾಡ್ಲೂರು ಇವರು ಮಾತನಾಡಿ ಶ್ರೀ ಪ್ರಾಣೇಶ ದಾಸರ ಕೃತಿಗಳು ಮದ್ವ ಸಿದ್ದಾಂತದ ಮೇಲೆ ರೂಪಗೊಂಡು ಹಲವಾರು ಸಾಮಾಜಿಕ ಮೌಲ್ಯಗಳನ್ನು ಬಿತ್ತುವಂತ ಕೃತಿಗಳನ್ನು ರಚಿಸಿ ದಾಸಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರಾಚಾರ್ಯರು, ಸಾಹಿತಿಗಳಾದ ಶ್ರೀ ವೆಂಕಟರಾವ್ ಕುಲಕರ್ಣಿ ಅವರು ಮಾತನಾಡಿ ರಾಯಚೂರು ದಾಸ ಸಾಹಿತ್ಯದ ತವರೂರು, ಪ್ರತಿ ದಾಸರ ಆರಾಧನೆಗಳನ್ನು ಅಚ್ಚುಕಟ್ಟಾಗಿ ಭಕ್ತಿ ಶ್ರದ್ಧೆಗಳಿಂದ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಹಿರಿಯ ಕಲಾವಿದರಾದ ಸುರೇಶ್ ಕಲ್ಲೂರ್ ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ಪ್ರಸನ್ನ ಆಲಂಪಲ್ಲಿ ಅವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.
ಈ ಸಂದರ್ಭದಲ್ಲಿ ಸುಷ್ಮಾಕರಣಂ, ವಾಸುಕಿ ಕರಣಂ ಶ್ರೀ ಸುರೇಶ್ ಕಲ್ಲೂರ್ ಅವರಿಂದ ಶ್ರೀ ಪ್ರಾಣೇಶ್ ದಾಸರು ರಚಿಸಿದ ಸಂಕೀರ್ತನೆಗಳ ದಾಸವಾಣಿ ಜರುಗಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಕೃಷ್ಣವೇಣಿ ಹಾಗೂ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
Comments
Post a Comment