ನಾಳೆ ನಗರದಲ್ಲಿ ಆರೆಸ್ಸೆಸ್ ಭವ್ಯ ಪಥಸಂಚಲನ: ಸಹಸ್ರಾರು ಗಣವೇಷಧಾರಿಗಳ ಆಕರ್ಷಕ ಪಥಸಂಚಲನಕ್ಕೆ ನಗರ ಸಜ್ಜು. ಜಯ ಧ್ವಜ ನ್ಯೂಸ್ , ರಾಯಚೂರು, ಅ.31- ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆ ಹಾಗೂ ವಿಜಯದಶಮಿ ಉತ್ಸವ ಅಂಗವಾಗಿ ನಾಳೆ ನ.1 ಶನಿವಾರದಂದು ಭವ್ಯ ಪಥ ಸಂಚಲನ ನಡೆಯಲಿದೆ. ಸಂಜೆ.4.15ಕ್ಕೆ ನಗರದ ಗದ್ವಾಲ ರಸ್ತೆಯ ವೀರಾಂಜನೇಯ ಮುನ್ನೂರು ಕಾಪು ಕಲ್ಯಾಣ ಮಂಟಪದಿಂದ ಪಥ ಸಂಚಲನ ಆರಂಭಗೊಳ್ಳಲಿದ್ದು ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಸಾವಿರಾರು ಗಣವೇಷಧಾರಿಗಳು, ಘೋಷ್ ವಾದನದೊಂದಿಗೆ ಆಕರ್ಷಕ ಪಥಸಂಚಲನ ನಡೆಯಲಿದ್ದು ಸಂಜೆ.5.45ಕ್ಕೆ ಬಸವೇಶ್ವರ ವೃತ್ತದ ಬಳಿಯಿರುವ ವಾಲ್ಕಟ್ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ರಾಮಕೃಷ್ಣ ಎಂ.ಆರ್ ಆಗಮಿಸಲಿದ್ದು , ವಕ್ತಾರರಾಗಿ ಆರೆಸ್ಸೆಸ್ ಕರ್ನಾಟಕ ಉತ್ತರ ಪ್ರಾಂತ ಪ್ರಚಾರ ವಿಭಾಗ ಪ್ರಮುಖರಾದ ಕೃಷ್ಣಾ ಜೋಷಿ ಕಲಬುರ್ಗಿ ಆಗಮಿಸಲಿದ್ದಾರೆ. ನಗರ ಸಜ್ಜು: ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಕೇಸರಿ ಧ್ವಜಗಳು ಹಾಗೂ ಕೇಸರಿ ಪರಪರಿಗಳಿಂದ ಶೃಂಗಾರ ಗೊಂಡಿದ್ದು ಪಥ ಸಂಚಲನ ಸ್ವಾಗತಕ್ಕೆ ಅನೇಕ ಕಡೆಗಳಲ್ಲಿ ಚಿತ್ತಾಕರ್ಷಕ ರಂಗೋಲಿಗಳಿಂದ ಕಂಗೊಳಿಸುತ್ತಿದೆ. ಸುಮಾರು ಎರೆಡು ಸಾವಿರ ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆಯಿದ್ದು ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

Comments
Post a Comment