ಅನಂತಪುರ ಬಳಿ ಖಾಸಗಿ ಬಸ್‌ಗೆ ಬೆಂಕಿ: ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ
ಜಯ ಧ್ವಜ ನ್ಯೂಸ್ ರಾಯಚೂರು, ಅ.17-
ಬೆಂಗಳೂರನಿಂದ ರಾಯಚೂರಿಗೆ ಬರುತ್ತಿದ್ದ ಖಾಸಗಿ ಬಸ್ ನಡುರಸ್ತೆಯಲ್ಲೇ ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗರದಿನ್ನೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ನಡೆದಿದೆ. ಅದೃಷ್ಟವಶಾತ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ಹೇಳಲಾಗುತ್ತಿದೆ.
ಗ್ರೀನ್ ಲೈನ್ ಟ್ರಾವೆಲ್ಸ್ ಸಂಸ್ಥೆಗೆ ಸೇರಿದ ಬಸ್‌ನ ಹಿಂಬದಿ ಟಯರ್ ಬ್ಲಾಸ್ಟ್ ಆಗಿ ಕ್ಷಣಾರ್ಧದಲ್ಲಿ ಬೆಂಕಿಯ ಕಿಡಿ ಚಿಮ್ಮಿದ ಪರಿಣಾಮ ಸಂಪೂರ್ಣ ಬಸ್ ಬೆಂಕಿಗೆ ಆಹುತಿಯಾಗಿದೆ. ಆದರೆ, ಬಸ್‌ನಲ್ಲಿದ್ದ 36 ಮಂದಿ ಪ್ರಯಾಣಿಕರು ಸಕಾಲದಲ್ಲಿ ಹೊರಬಂದ ಪರಿಣಾಮ ದೊಡ್ಡ ದುರಂತ ತಪ್ಪಿದೆ. ಬಸ್‌ನ ಹಿಂಭಾಗದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ರಾಯಚೂರು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ ಅವರು ತಕ್ಷಣ ಚಾಲಕನಿಗೆ ತಿಳಿಸಿದರೂ, ಚಾಲಕ ಅದನ್ನು ತಕ್ಷಣವಾಗಿ ಗಮನಿಸದೇ ಕೆಲವು ಅಂತರದವರೆಗೆ ಚಾಲನೆ ಮುಂದುವರಿಸಿದ್ದಾನೆ. ಬಳಿಕ ಬೆಂಕಿ ತೀವ್ರಗೊಳ್ಳುತ್ತಿದ್ದಂತೆಯೇ ನಿರ್ಮಲಾ ಬೆಣ್ಣೆ ಅವರ ಒತ್ತಾಯದ ಮೇರೆಗೆ ಬಸ್ ನಿಲ್ಲಿಸಲಾಯಿತು. ಪ್ರಯಾಣಿಕರು ತಕ್ಷಣ ಬಸ್‌ನಿಂದ ಇಳಿದುಕೊಂಡು ಪ್ರಾಣ ಉಳಿಸಿಕೊಂಡಿದ್ದಾರೆ.
ಈ ಘಟನೆಯಲ್ಲಿ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್‌ನಲ್ಲಿದ್ದ ಲಗೇಜು, ಪ್ರಮಾಣಪತ್ರಗಳು ಹಾಗೂ ಹಬ್ಬದ ಸಂದರ್ಭಕ್ಕಾಗಿ ಕೊಂಡೊಯ್ಯುತ್ತಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿ ನಂದಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಪ್ರಯಾಣಿಕರ ಪ್ರಕಾರ, ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಪ್ರಮುಖ ಕಾರಣವಾಗಿದೆ. ಬಸ್‌ನ ಹಿಂಬದಿ ಟಯರ್ ಈಗಾಗಲೇ ಪಂಚರ್ ಆಗಿದ್ದರೂ ಚಾಲಕ ಅದನ್ನು ಕಡೆಗಣಿಸಿದ್ದಾನೆ ಎಂದು ಆರೋಪಿಸಲಾಗಿದೆ. ರಾಯಚೂರಿಗೆ ತಲುಪಿದ ಬಳಿಕ ಪ್ರಯಾಣಿಕರು ನಗರದ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರೂ, “ಘಟನೆ ಆಂಧ್ರ ಪ್ರದೇಶದ ವ್ಯಾಪ್ತಿಯಲ್ಲಿದೆ” ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ದೂರು ಕೇಳಿಬಂದಿದೆ
ಒಟ್ಟಾರೆ ಬಸ್ ನಿರ್ವಹಣೆಯಲ್ಲಿನ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಪ್ರಯಾಣಿಕರು ಗ್ರೀನ್ ಲೈನ್ ಟ್ರಾವೆಲ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments
Post a Comment