ಮಹಾನಗರ ಪಾಲಿಕೆಯ ಸಾಮಾನ್ಯ ಮಹಾಸಭೆ: ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಶಾಸಕ ಶಿವರಾಜ ಪಾಟೀಲ್ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ಯುದ್ಧ
ಜಯ ಧ್ವಜ ನ್ಯೂಸ್ ರಾಯಚೂರು, ಅ. 28 - ಮಹಾನಗರ ಪಾಲಿಕೆಯ ಸಾಮಾನ್ಯ ಮಹಾಸಭೆ ಇಂದು ಬೆಳಿಗ್ಗೆ ಜಿ.ಪಂ ಸಭಾಂಗಣದಲ್ಲಿ ನಡೆಯಿತು. ಸಭೆ ಪ್ರಾರಂಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಹಾಗೂ ಆಡಳಿತ ಪಕ್ಷದ ಸದಸ್ಯರು ನಡುವೆ ವಾಗ್ಯುದ್ಧ ನಡೆಯಿತು. ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಶಾಸಕರು ಮತ್ತು ಹಿರಿಯ ಸದಸ್ಯ ಜಯಣ್ಣ ನಡುವೆ ಕೆಲ ಹೊತ್ತು ಗುಂಡಿ ಮುಚ್ಚುವ ವಿಷಯದಲ್ಲಿ ಕಾವೇರಿದ ಚರ್ಚೆ ನಡೆಯಿತು. ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ್ ಮಧ್ಯ ಪ್ರವೇಶಿಸಿ ರಸ್ತೆ ಗುಂಡಿ ಮುಚ್ಚುವ ವಿಷಯದಲ್ಲಿ ಎಲ್ಲರ ಸಹಭಾಗಿತ್ವ ಸಹಕಾರ ಅಗತ್ಯವೆಂದು ಚರ್ಚೆಗೆ ತೆರೆಯಳೆದರು. ಮಹಾನಗರಪಾಲಿಕೆ ಅಧೀನದಲ್ಲಿನ ಎಲ್ಲಾ ಮಳಿಗೆಗಳು ಉತ್ತಮ ನಿರ್ವಹಣೆ ಆಗಬೇಕು. ಬಾಡಿಗೆ ದರ, ಒಪ್ಪಂದ ಸೇರಿದಂತೆ ಯಾವುದೇ ವಿಷಯಗಳ ಬಗ್ಗೆ ದೂರುಗಳು ಬಾರದ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಪಾಲಿಕೆಯ ವ್ಯಾಪ್ತಿಯ ಮಳಿಗೆಗಳಿಗೆ ಈ ಹಿಂದೆ ನಿಗದಿಪಡಿಸಿದ ಬಾಡಿಗೆ ದರವನ್ನು ಪರಿಷ್ಕರಿಸಲು ಪರಿಶೀಲಿಸಬಹುದೆಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಅವರು ವಿಷಯ ಪ್ರಸ್ತಾಪಿಸಿದರು. ಮಳಿಗೆಗಳನ್ನು ಬಾಡಿಗೆ ಪಡೆದವರೇ ಬೇರೆ; ಅಲ್ಲಿ ವ್ಯಾಪಾರ ಮಾಡುವವರೇ ಬೇರೆಯಾಗಿರುತ್ತಾರೆ. ಈ ಬಗ್ಗೆ ಸಹ ಪರಿಶೀಲಿಸಬೇಕು. ಬಾಡಿಗೆ ಪಡೆದಾಗ ನೀಡುವ ಒಪ್ಪಂದ ಪತ್ರ ಹಾಗೂ ಅಲ್ಲಿ ವ್ಯಾಪಾರಕ್ಕಾಗಿ ನೀಡುವ ವ್ಯಾಪಾರ ಪರವಾನಿಗೆಯನ್ನು ಪರಿಶೀಲಿಸಬೇಕು ಎಂದು ಶಾಸಕರಾದ ಶಿವರಾಜ ಪಾಟೀಲ್ ಒತ್ತಾಯಿಸಿದರು. ಪಾಲಿಕೆಯ ಸದಸ್ಯರಾದ ದರೂರು ಬಸವರಾಜ ಪಾಟೀಲ, ಶ್ರೀನಿವಾಸರೆಡ್ಡಿ ಸೇರಿದಂತೆ ಅನೇಕ ಸದಸ್ಯರು ಧನಿಗೂಡಿಸಿದರು.
ಪಾಲಿಕೆ ಒಡೆತನದ ಮಳಿಗೆಗಳನ್ನು ಬಾಡಿಗೆ ಪಡೆದವರು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಕಟ್ಟಡದ ವರ್ಗಾವಣೆಯನ್ನೂ ಪಾಲಿಕೆಯ ಅಧಿಕಾರಿಗಳೇ ಈ ಹಿಂದೆ ಮಾಡಿರುವುದರ ಬಗ್ಗೆ ತನಿಖೆಯಾಗಬೇಕು ಎಂದು ಪಾಲಿಕೆಯ ಸದಸ್ಯ ಎನ್.ಶ್ರೀನಿವಾಸರೆಡ್ಡಿ ಅವರು ಇದೆ ವೇಳೆ ಒತ್ತಾಯಿಸಿದರು.
ಮಹಾನಗರ ಪಾಲಿಕೆಯ ಮಳಿಗೆಗಳಿಗೆ ಈ ಹಿಂದೆ ಎಷ್ಟು ಬಾಡಿಗೆ ದರ ನಿಗಧಿಪಡಿಸಲಾಗಿತ್ತು. ಈ ಮಧ್ಯೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದೆಯೋ ಅಥವಾ ಇಲ್ಲವೋ? ಮಳಿಗೆಯನ್ನು ಬಾಡಿಗೆ ಪಡೆದವರು ಹೆಚ್ಚಿನ ಬೆಲೆಗೆ ಬೇರೆಯವರೆಗೆ ಬಾಡಿಗೆ ನೀಡುತ್ತಿದ್ದಾರೆ ಎನ್ನುವ ಸಂದೇಹದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಬಾಡಿಗೆ ದರ ಹೆಚ್ಚಳ ಅಗತ್ಯವಿದೆ ಎಂಬುದರ ಬಗ್ಗೆ ಕೂಡಲೇ ಪರಿಶೀಲಿಸಿ ಕ್ರಮವಹಿಸಬೇಕು ಎಂದು ಮಹಾಪೌರರು ಸೂಚನೆ ನೀಡಿದರು. ಇ ಖಾತಾ ವಿತರಣೆ ವಿಳಂಬ ಮಾಡುತ್ತಿರುವ ಅಧಿಕಾರಿಗಳು ಸಿಬ್ಬಂದಿಗಳ ಧೋರಣೆಗೆ ಶಾಸಕರು ಕೆಂಡಾಮಂಡಲರಾಗಿ ಹೀಗೆ ಮುಂದುವರೆದರೆ ಜನ ದಂಗೆ ಏಳುತ್ತಾರೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಇದರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಇದನ್ನು ಸರಿಪಡಿಸಬೇಕೆಂದರು. ಅನಧಿಕೃತ ಹಾಗು ನಿಯಮ ಉಲ್ಲಂಘಿಸುವ ವಸತಿ ಸಮುಚ್ಚಯಗಳ ಮೇಲೆ ದಂಡ ವಿಧಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೇಟ್ಲಾಬುರ್ಜದಿಂದ ಮಾವಿನಕೆರೆಗೆ ಹೋಗುವ ಮುಖ್ಯ ರಸ್ತೆಗೆ ಹಾಗೂ ಮನ್ಸಲಾಪೂರು ಗ್ರಾಮದ ಮುಖ್ಯ ರಸ್ತೆಗೆ ಹೊಸ ಹೆಸರು ನಾಮಕರಣ ಮಾಡಿ ನಾಮಫಲಕ ಅಳವಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ವೋಚ್ಚ ನ್ಯಾಯಾಲಯದ ಮತ್ತು ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಆದೇಶದನ್ವಯ ವಾರ್ಡವಾರು ಬೀದಿ ನಾಯಿಗಳ ಗಣತಿ ಮಾಡುವ ಕುರಿತು ಮತ್ತು ಹೊಸ ಆಧುನಿಕ ಎಬಿಸಿ ಶೇಡ್ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಯಿತು. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ದಾವಣಗೇರಿ ಜಿಲ್ಲೆಯ ಮಾದರಿಯಲ್ಲಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ, ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.ನಿವೇಶನ ರಹಿತ ಪತ್ರಕರ್ತರಿಗೆ ನಿಯಮಾನುಸಾರ ಅನುಮೋದನೆ ಪಡೆದು ನಿವೇಶನ ಪೂರೈಸುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಯಿತು. ಇಂದೋರ್ ಮಾದರಿ ತ್ಯಾಜ್ಯ ವಿಲೇವಾರಿ ಹಾಗೂ ಹಾನಿಕಾರಕ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.
ಅಜಂಡಾವರು ವಿಷಯಗಳ ಬಗ್ಗೆ ಚರ್ಚಿಸಿ ಕೆಲ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪಾಲಿಕೆಯ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ, ಉಪಮಹಾಪೌರಾದ ಸಾಜೀದ್ ಸಮೀರ್, ವಿವಿಧ ವಾರ್ಡಗಳ ಪಾಲಿಕೆ ಸದಸ್ಯರು, ನಾಮನಿರ್ದೇಶನ ಸದಸ್ಯರು, ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ, ಉಪ ಆಯುಕ್ತರಾದ ಸಂತೋಷ ರಾಣಿ, ಪರಿಸರ ಅಭಿಯಂತರ ಜಯಪಾಲರೆಡ್ಡಿ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗದ ಅಧಿಕಾರಿಗಳು ಸಭೆಯಲ್ಲಿ ಇದ್ದರು.




Comments
Post a Comment