ವೈದ್ಯಕೀಯ ಕ್ಷೇತ್ರದಲ್ಲಿ ಪ್ಯಾರಾ ಮೆಡಿಕಲ್ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ- ವಸಂತ ಕುಮಾರ್ ಜಯ ಧ್ವಜ ನ್ಯೂಸ್ , ರಾಯಚೂರು, ಅ.7- ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ ಪ್ಯಾರಾಮೆಡಿಕಲ್ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಸೇವೆಯ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ, ಇವರು ಎರಡನೆಯ ವೈದ್ಯರಿದ್ದಂತೆ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎಸ್.ಕೆ.ಇ. ಕಲ್ಯಾಣ ಕರ್ನಾಟಕ ಪ್ಯಾರಾಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಆತ್ಮೀಯ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು
ರಾಯಚೂರು ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಎಸ್.ಕೆ.ಇ. ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿರುವದು ಕಂಡುಬರುತ್ತಿದೆ, ಇದನ್ನು ನೋಡಿದರೆ ಸಂಸ್ಥೆಯ ಅಧ್ಯಕ್ಷರಾದ ಡಾ.ಬಾಬುರಾವ್ ಶೆಗುಣಿಸಿಯವರ ಶ್ರಮ ಎದ್ದು ಕಾಣುತ್ತದೆ. ಅವರು ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಸ್ತು, ತರಬೇತಿ ನೀಡಿ ಜೀವನ ಕಟ್ಟಿಕೊಳ್ಳಲು ಶ್ರಮಿಸುತ್ತಿರುವದು ಶ್ಲಾಘನೀಯವಾದದ್ದು ಎಂದು ಪ್ರಶಂಸಿಸಿದರು.
ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ವೃತ್ತಿಪರರಿಗೆ ಬೆಂಬಲ ನೀಡಲು ಮತ್ತು ರೋಗಿಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಲು ವಿಶೇಷ ತರಬೇತಿ ನೀಡುವ ಪ್ಯಾರಾಮೆಡಿಕಲ್ ಕೋರ್ಸ್ ಉತ್ತಮ ಶೈಕ್ಷಣಿಕ ಕಾರ್ಯಕ್ರಮಗಳಾಗಿವೆ.ಇವುಗಳಲ್ಲಿ ಲ್ಯಾಬ್ ಟೆಕ್ನಾಲಜಿ, ರೇಡಿಯಾಲಜಿ, ಆಪ್ಟೋಮೆಟ್ರಿ, ಡಯಾಲಿಸಿಸ್, ಇತ್ಯಾದಿ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿ ಸೇವೆಯಾಗಿ ಗುರುತಿಸಲ್ಪಡುತ್ತಿದೆ. ನಿಮ್ಮ ಸೇವೆ ಸಹಕಾರ ಇಲ್ಲದೇ ವೈದ್ಯಕೀಯ ಸೇವೆ ಸಲ್ಲಿಸುವದು ಕಷ್ಟವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಾ.ರಝಾಕ ಉಸ್ತಾದ, ಎಸ್.ಕೆ.ಇ. ಕಲ್ಯಾಣ ಕರ್ನಾಟಕ ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಡಾ.ಬಾಬುರಾವ ಶೆಗುಣಸಿ ಅವರು ವಿಭಿನ್ನ ರೀತಿಯಲ್ಲಿ ತರಬೇತಿ ನೀಡುವ ಮೂಲಕ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ, ಪ್ಯಾರಾಮೆಡಿಕಲ್ ತರಬೇತಿ ಪಡೆದ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಕೆಲಸ ಮಾಡಲು ಸಾದ್ಯವಾಗುತ್ತದೆ. ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಲು ಸರಕಾರ ಹತ್ತು ಹಲವು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವದು ಕಾಣಬಹುದು. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳು ಇನ್ನೂ ಉನ್ನತ ಮಟ್ಟದ ಶಿಕ್ಷಣ ಪಡೆದು ಜೀವನ ಕಟ್ಟಿಕೊಳ್ಳಲು ಎಲ್ಲರೂ ಶ್ರಮಿಸಬೆಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಅಸ್ಲಂ ಪಾಶಾ ಮಾತನಾಡಿದರು. ಕಾಲೇಜಿನ ಅಧ್ಯಕ್ಷರಾದ ಡಾ.ಬಾಬುರಾವ ಪ್ರಾಸ್ತಾವಿಕವಾಗಿ ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೊ.ವೆಂಕಣ್ಣ, ಶರಣಪ್ಪ ಅಸ್ಕಿಹಾಳ, ಡಾ.ಭಾಸ್ಕರ ರೆಡ್ಡಿ, ಕಾಲೇಜಿನ ಉಪನ್ಯಾಸಕರು ಹಾಗೂ ಇತರರು ಉಪಸ್ಥಿತರಿದ್ದರು.
Comments
Post a Comment