ರಾಯಚೂರು, ಬಳ್ಳಾರಿ, ಶಿವಮೊಗ್ಗ, ಬೀದರ್, ಬೆಳಗಾವಿಯಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆಗೆ ಚಿಂತನೆ- ಡಾ.ಶರಣಪ್ರಕಾಶ ಪಾಟೀಲ


ಜಯ ಧ್ವಜ ನ್ಯೂಸ್  , ರಾಯಚೂರು ಅ.9 -

ಕರ್ನಾಟಕದಾದ್ಯಂತ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ರಾಯಚೂರು, ಬೀದರ್ ಮತ್ತು ಬೆಳಗಾವಿಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ
ಡಾ.ಶರಣಪ್ರಕಾಶ್‌ ಪಾಟೀಲ್‌ ಅವರು ತಿಳಿಸಿದರು.
ವಿಕಾಸ ಸೌಧದಲ್ಲಿ ಅ.09ರಂದು ನಡೆದ ಕಿದ್ವಾಯಿ ಆಸ್ಪತ್ರೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಂಬರುವ ತಿಂಗಳುಗಳಲ್ಲಿ ತುಮಕೂರು, ಮೈಸೂರು, ಮಂಡ್ಯ ಮತ್ತು ಕಾರವಾರದಲ್ಲಿ ಬಾಹ್ಯ ಕ್ಯಾನ್ಸರ್ ಕೇಂದ್ರಗಳನ್ನು (PCC ಗಳು) ಆರಂಭಿಸಲಾಗುತ್ತದೆ‌.
ಪ್ರಸ್ತುತ 80 ಹಾಸಿಗೆಗಳನ್ನು ಹೊಂದಿರುವ ಕಲಬುರಗಿಯ ಪಿಸಿಸಿಯಲ್ಲಿ ಹೆಚ್ಚುವರಿಯಾಗಿ 210 ಹಾಸಿಗೆಗಳನ್ನು ಅಳವಡಿಸಲು ತೀರ್ಮಾನಿಸಲಾಗಿದ್ದು ಇದಕ್ಕಾಗಿ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
*ಹೆರಿಗೆ ರಜೆಯಲ್ಲಿರುವ ದಾದಿಯರಿಗೆ ಪರಿಹಾರ*
2021ರಿಂದಲೂ ಗುತ್ತಿಗೆ ಮತ್ತು ಹೊರ ಗುತ್ತಿಗೆ ದಾದಿಯರಿಗೆ ಪೂರ್ಣ ವೇತನ ನಿರಾಕರಿಸಲಾಗಿತ್ತು ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಂಡ ಸಚಿವರು, ಪೂರ್ಣ ವೇತನವನ್ನು ಬಿಡುಗಡೆ ಮಾಡುವಂತೆ  ಸಂಸ್ಥೆಯ ನಿರ್ದೇಶಕ ಡಾ. ಟಿ. ನವೀನ್ ಅವರಿಗೆ ಸೂಚಿಸಿದರು.


*ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ:* ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಹೆಚ್ಚಿನ ಸೇವೆ ಒದಗಿಸಬೇಕೆಂಬ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಬ್ಲಾಕ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು, 
ಹೆಚ್ಚುವರಿಯಾಗಿ 450 ಹಾಸಿಗೆ ಲಭ್ಯವಾಗಲಿದೆ.
ಈ ಹೊಸ ಯೋಜನೆ ಸಂಬಂಧ ನೀಲನಕ್ಷೆಯನ್ನು ಶೀಘ್ರದಲ್ಲೇ ಸಲ್ಲಿಸುವಂತೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಕಿದ್ವಾಯಿಯಲ್ಲಿ 720 ಹಾಸಿಗೆಗಳಿವೆ, ಆದರೆ ರೋಗಿಗಳ ಒಳಹರಿವು ಇತ್ತೀಚೆಗೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಬ್ಲಾಕ್‌ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳಿಗೆ ರೋಗಿಗಳು ಹೋಗುವುದು ತಪ್ಪುತ್ತದೆ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸಾರ್ವಜನಿಕ ಆರೋಗ್ಯ ಚಿಕಿತ್ಸೆಯನ್ನು ಕೈಗೆಟುಕುವ ದರದಲ್ಲಿ ನೀಡಲು ಸಹಕಾರಿಯಾಗುತ್ತದೆ ಎಂದು ಸಚಿವರು ತಿಳಿಸಿದರು.
"ಕಿದ್ವಾಯಿ ಆಸ್ಪತ್ರೆಗೆ ಬಹಳ ದೂರದೂರುಗಳಿಂದ ಆಗಮಿಸುತ್ತಾರೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳು ಆರೈಕೆಗಾಗಿ ತಮ್ಮ ಭೂಮಿ ಅಥವಾ ಮನೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಎದುರಿಸುತ್ತಾರೆ. ಎಲ್ಲರಿಗೂ ಆರೋಗ್ಯ ನೀಡಬೇಕೆಂಬ ನಮ್ಮ ಸರ್ಕಾರದ ಆಶಯದಂತೆ ಹೊಸ ಬ್ಲಾಕ್‌ ಕಟ್ಟಡ ನಿರ್ಮಾಣ ಮಾಡಿ ಹೆಚ್ಚುವರಿ ವ್ಯವಸ್ಥೆ ಮಾಡುತ್ತಿದ್ದೇವೆ" ಎಂದು ಸಚಿವರು ಹೇಳಿದರು.
 ರೋಗನಿರ್ಣಯಕ್ಕಾಗಿ ಬರುವವರಿಗೆ ಅಂತಿಮ ವರದಿಗಳು ದೊರೆಯುವವರೆಗೆ ಆಸ್ಪತ್ರೆ ವಾರ್ಡ್‌ಗಳಲ್ಲಿ ಒಳರೋಗಿಗಳಾಗಿ ಸೇರಿಸಿಕೊಳ್ಳಬೇಕೆಂದು ಸಂಸ್ಥೆಯ ಅಧಿಕಾರಿಗಳಿಗೆ ಸಚಿವರು
ಸೂಚನೆ ನೀಡಿದರು. "ಬೆಂಗಳೂರಿನ ರೋಗಿಗಳು ಹೆಚ್ಚಿನ ತೊಂದರೆಗಳನ್ನು ಎದುರಿಸದಿದ್ದರೂ, ದೂರದ ಜಿಲ್ಲೆಗಳಿಂದ, ವಿಶೇಷವಾಗಿ ಉತ್ತರ ಕರ್ನಾಟಕದವರಿಗೆ ಈ ರೀತಿಯ ಆಶ್ರಯದ ಅಗತ್ಯವಿದೆ ಎಂದು ಹೇಳಿದರು.

Comments

Popular posts from this blog