ಭಕ್ತಿ ಮಾರ್ಗ ತೋರಿಸಿದ ಮಹಾಮಹಿಮರು ಮಹಿಪತಿ ದಾಸರು-ಮುರಳಿಧರ ಕುಲಕರ್ಣಿ
ಜಯ ಧ್ವಜ ನ್ಯೂಸ್ , ರಾಯಚೂರು, ನ.21- ದಾಸ ಶ್ರೇಷ್ಠರಾದ ಕಾಖಂಡಕಿಯ ಮಹಿಪತಿ ದಾಸರು ಜ್ಞಾನ ಯೋಗ,ಕರ್ಮದ ಜೊತೆಗೆ ಭಕ್ತಿ ಮಾರ್ಗದ ಮೂಲಕ ಜನಸಾಮಾನ್ಯರಿಗೆ ಭಗವಂತನನ್ನು ತೋರಿಸಿದ ಮಹಾ ಮಹಿಮ ದಾಸ ಶ್ರೇಷ್ಠ ರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.
ಅವರು ಶುಕ್ರವಾರ ಸಂಜೆ ರಾಯಚೂರು ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ನಡೆದ ಹರಿದಾಸ ಶ್ರೇಷ್ಠರಾದ ಶ್ರೀ ಮಹಿಪತಿ ದಾಸರ ಮಧ್ಯರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದರು.
ಪುರಂದರ ದಾಸರ ಕಾಲದ ನಂತರ ಶ್ರೀ ವಿಜಯದಾಸರ ಕಾಲಘಟ್ಟದವರೆಗೆ ನಿಂತು ಹೋಗಿದ್ದ ಹರಿದಾಸ ಸಾಹಿತ್ಯ ವನ್ನು ಇವರು ಪುನರ್ಜೀವನಗೊಳಿಸಿದರು ಎಂದರು.
ಬಿಜಾಪುರ ಸುಲ್ತಾನದ ಆದಿಲ್ ಶಾ ನ ಆಡಳಿತದಲ್ಲಿದ್ದ ಅರೆ ಹುಚ್ಚರಂತೆ ಅವಧೂತರಂತೆ ಕಾಣಿಸುತ್ತಿರುವ ಶಹನುಂಗಿ ಶಹನುಂಗ ಇವರ ಪ್ರಭಾವಕ್ಕೆ ಒಳಗಾಗಿ ವೈರಾಗ್ಯ ಜೀವನ ತಾಳಿದರು ಇವರು ಉರ್ದು, ತೆಲುಗು, ಹಿಂದಿ, ಮರಾಠಿ, ಕನ್ನಡ ದಲ್ಲಿ ಸಂಕೀರ್ತನೆಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯು ಮಹಿಪತಿ ದಾಸರ ಕೃತಿಗಳನ್ನು ಪ್ರಕಟಿಸಿದ್ದಾರೆ ಇವರ ಒಟ್ಟು ಸಂಗ್ರಹದಲ್ಲಿ ಕನ್ನಡದ ಕೃತಿಗಳು 700ಕ್ಕೂ ಅಧಿಕ, ಮರಾಠಿ ಹಿಂದಿ ಭಾಷೆಗಳಲ್ಲಿ 300ಕ್ಕೂ ಅಧಿಕ ಕೃತಿಗಳು ಲಭ್ಯವಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪತ್ರಕರ್ತ ಜಯ ಕುಮಾರ್ ದೇಸಾಯಿ ಕಾಡ್ಲೂರು ರವರು ಮಾತನಾಡಿ ಶ್ರೀ ಮಹಿಪತಿ ದಾಸರ ಸಾಹಿತ್ಯ ಎಲ್ಲಾ ಹರಿದಾಸರ ಸಾಹಿತ್ಯಕ್ಕಿಂತ ವಿಭಿನ್ನವಾಗಿದೆ ಇವರು ತತ್ವಜ್ಞಾನಿಗಳು,ಅನುಭಾವಿಕರು, ಪಂಡಿತೋತ್ತಮರು ಎಲ್ಲಕ್ಕಿಂತ ಹೆಚ್ಚಾಗಿ ಜನಸಾಮಾನ್ಯರಿಗೆ ಭಕ್ತಿ ಮಾರ್ಗದ ಮುಖಾಂತರ ಸದ್ವಿಚಾರವನ್ನು ತಿಳಿಸಿದ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬ್ರಾಹ್ಮಣ ಸಮಾಜದ ಮುಖಂಡರಾದ ಶ್ರೀ ಪ್ರಸನ್ನ ಆಲಂಪಲ್ಲಿ ಅವರು ಉದ್ಘಾಟಿಸಿ ಶ್ರೀ ಮಹಿಪತಿ ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಜನಸಾಮಾನ್ಯರಿಗೆ ಭಕ್ತಿ ಮಾರ್ಗವನ್ನು ತೋರಿಸಿದ್ದಾರೆ.
ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಇಂದಿರಾ ಬಾಯಿ ಸಂಗಮ್, ಕುಮಾರಿ ಅದಿತಿ ಕರ್ಣಂ, ಇವರ ದಾಸವಾಣಿ ಜರುಗಿತು.
ಈ ಸಂದರ್ಭದಲ್ಲಿ ನಾಗರತ್ನ ಕುಲಕರ್ಣಿ, ಪ್ರಕಾಶ್ ಹುಣಸಿಗಿ ಅವರು ಉಪಸ್ಥಿತರಿದ್ದರು. ಭಜನಾ ಮಂಡಳಿಗಳು ಸದಸ್ಯರು ಭಾಗವಹಿಸಿ ಶ್ರೀ ಮಹಿಪತಿ ದಾಸರ ಸಂಕೀರ್ತನೆಗಳನ್ನು ಸಾಮೂಹಿಕವಾಗಿ ಭಜನೆ ಮಾಡಿದರು.
ಕೊನೆಯಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಿತು.






Comments
Post a Comment