ಪತ್ರಕರ್ತರಿಗೆ ಮಾಹಿತಿ ಹಕ್ಕು ಕಾಯ್ದೆ  ಬಹಳ ಉಪಯುಕ್ತ -   ಬಿ.ವೆಂಕಟಸಿಂಗ್  

ಜಯ ಧ್ವಜ ನ್ಯೂಸ್, ರಾಯಚೂರು, ನ.22- ಮಾಹಿತಿ ಹಕ್ಕು ಕಾಯ್ದೆ ಪತ್ರಕರ್ತರಿಗೆ ಬಹಳ ಉಪಯುಕ್ತವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪತ್ರಕರ್ತರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಜನರಿಗೆ ತಿಳಿಸಲು ಈ ಕಾಯ್ದೆ ಸಹಾಕರಿಯಾಗಲಿದೆ ಎಂದು ಮಾಹಿತಿ ಹಕ್ಕು ಆಯೋಗದ ಕಲಬುರಗಿ ವಿಭಾಗದ ಆಯುಕ್ತರಾದ ಬಿ.ವೆಂಕಟಸಿಂಗ್ ಅವರು ತಿಳಿಸಿದರು. 


ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ಸ್ ಗಿಲ್ಡ್ ನಿಂದ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಆಯುಕ್ತರ ಸೌಹಾರ್ದ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.   

ಸರ್ಕಾರದ ಹಣದ ಖರ್ಚು ವೆಚ್ಚಗಳನ್ನು ನಾವು ‌ಮಾಹಿತಿ ಆಯೋಗದ ಮೂಲಕ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2005 ರಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಯಿತು. ಕಳೆದ 20  ವರ್ಷದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ೬೧ ಸಾವಿರ ಅರ್ಜಿಗಳು ಬಾಕಿ ಉಳಿದು ಮೊದಲನೇ ಸ್ಥಾನದಲ್ಲಿದ್ದರೆ; ರಾಜ್ಯದಲ್ಲಿ ೪೧ ಸಾವಿರ ಅರ್ಜಿಗಳು ಬಾಕಿ ಉಳಿದು ಮೂರನೇ ಸ್ಥಾನದಲ್ಲಿದೆ. ಕಲಬುರಗಿ ವಿಭಾಗದಲ್ಲಿ ಏಳು ಸಾವಿರ ಅರ್ಜಿಗಳು ಬಾಕಿ ಉಳಿದಿವೆ ಎಂದು ವಿವರಿಸಿದರು.

ಅಧಿಕಾರಿಗಳು ನಿರ್ಲಕ್ಷ್ಯದಿಂದ ಮಾಹಿತಿ ಕೊಡಲು ಹಿಂಜರಿದರೆ, ಇನ್ನೂ ಕೆಲವರು ಭಯದಿಂದ ಹಿಂಜರಿಯುತ್ತಿದ್ದಾರೆ. ಇನ್ನೂ ಕೆಲವರು ಉದ್ದೇಶ ಪೂರಕವಾಗಿಯೇ ಮಾಹಿತಿ ನೀಡುತ್ತಿಲ್ಲ. ಅಧಿಕಾರಿಗಳು ಕಚೇರಿಯ ಎಲ್ಲ ವಿವರ ದಾಖಲಿಸಬೇಕು. ಅದು ಕೂಡ ಸರಿಯಾಗಿ ಮಾಡುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಇರುತ್ತಾರೆ. ಆದರೆ, ಅವರು ಮಾಹಿತಿ ನೀಡದಿದ್ದರೆ ಅಧಿಕಾರಿಗಳಿಗೆ ದಂಡ ಹಾಕುವ, ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕಿದೆ. ಈ ಬಗ್ಗೆ ಜನರಿಗೆ ಮಾಹಿತಿ ಸಿಗಬೇಕಿದ್ದು, ಕಾಯಿದೆ ಬಗ್ಗೆ ‌ಮಾಹಿತಿ‌ ಕಾರ್ಯಾಗಾರ ನಡೆಸುವ ಉದ್ದೇಶವಿದೆ. ಬೀದರ್ ನಲ್ಲಿ ನ.29ರಂದು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಬದ್ಧತೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ‌ ಸಾಧನೆ ಮಾಡಲು ಸಾಧ್ಯ. ದೇವದುರ್ಗದ ಹಿಂದುಳಿದ ತಾಲೂಕಿನ ಕುಗ್ರಾಮದಲ್ಲಿ ಬೆಳೆದ ನಾನು ಓದಿದ್ದು ಐಟಿಐ. ಆದರೆ, ಆಕಸ್ಮಿಕವಾಗಿ ಮಾಧ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ. ಕಳೆದ 39 ವರ್ಷಗಳ ಸೇವಾನುಭವ ಹೊಂದಿದ್ದೇನೆ. ಅಲ್ಲದೇ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಿಪೋರ್ಟರ್ ನಲ್ಲಿ ೨೫ ವರ್ಷಗಳಲ್ಲಿ ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ.

ಈಗ ನನಗೆ ಮಾಹಿತಿ ಆಯೋಗದ ಆಯುಕ್ತರಾಗುವ ಅವಕಾಶ ಸಿಕ್ಕಿದ್ದು, ಇದಕ್ಕೆ ಪತ್ರಕರ್ತ ಮಿತ್ರರ ಸಹಕಾರವೇ ಕಾರಣ ಎಂದು ಅಭಿಪ್ರಾಯ ಪಟ್ಟರು.  


ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ ಮಾತನಾಡಿ, ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಬೆಳೆದು ಬಂದಿರುವ ಬಿ.ವೆಂಕಟಸಿಂಗ್ ಅವರು ಇಂದು ಮಾಹಿತಿ ಆಯೋಗದ ಆಯುಕ್ತರಂತ ದೊಡ್ಡ ಹುದ್ದೆ ಅಲಂಕರಿಸಿರುವುದು ಅವರ ಪರಿಶ್ರಮಕ್ಕೆ ಹಿಡಿದ


ಕನ್ನಡಿಯಾಗಿದೆ. ಮಾಹಿತಿ ಹಕ್ಕು ಆಯೋಗ ಬಹಳ ಪ್ರಮುಖ ಕ್ಷೇತ್ರವಾಗಿದ್ದು, ಅಲ್ಲಿಯೂ ಅವರು ಯಶಸ್ಸು ಕಾಣಲಿ. ಮುಂದೆಯೂ ಮಾಧ್ಯಮ ಕ್ಷೇತ್ರಕ್ಕೆ ಅವರ ಮಾರ್ಗದರ್ಶನ ಇರಲಿ ಎಂದು ತಿಳಿಸಿದರು. 

ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, 
ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ಮಾತನಾಡಿದರು.

 ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಮಿ ಕುಕನೂರು, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಇದ್ದರು.

ಕಾರ್ಯಕ್ರಮದಲ್ಲಿ ಹಿರಿಯ , ಕಿರಿಯ ಪತ್ರಕರ್ತರು, ಛಾಯಾಗ್ರಹಕರು ಇದ್ದರು.




Comments

Popular posts from this blog