ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಸಮಾರಂಭ : ಮಾಧ್ಯಮ ಕೈಗೊಂಬೆಯಾಗಿರುವುದು ಕಳವಳಕಾರಿ- ಬೋಸರಾಜು
ಜಯ ಧ್ವಜ ನ್ಯೂಸ್, ರಾಯಚೂರು, ಡಿ.28- ದೇಶದ ಕೆಲವೇ ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕೈಗೊಂಬೆಯಾಗಿದೆ. ಇದರಿಂದ ಇಂದು ಮಾಧ್ಯಮ ಕ್ಷೇತ್ರ ಕವಲುದಾರಿ ಹಿಡಿಯುವಂತಾಗಿದೆ ಎಂದು ರಾಜ್ಯ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರು ಕಳವಳ ವ್ಯಕ್ತಪಡಿಸಿದರು.
ಅವರಿಂದು ನಗರದ ರಾಯಚೂರು ರಿಪೋರ್ಟರ್ ಗಿಲ್ಡ್ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ಸ್ ಗಿಲ್ಡ್,ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲಾಭಕ್ಕಾಗಿ ಪತ್ರಿಕೋದ್ಯಮವನ್ನು ನಿರ್ವಹಿಸುವುದು ಅತ್ಯಂತ ಅಪಾಯಕಾರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೆಲವೇ ವ್ಯಕ್ತಿಗಳು ಇದನ್ನು ನಿಯಂತ್ರಿಸಿದರೆ, ಮುಕ್ತ ಚರ್ಚೆ ಮತ್ತು ಮಾಹಿತಿಯಿಂದ ಜನ ವಂಚಿತಗೊಳ್ಳುತ್ತಾರೆ ಎಂದರು.
ಪತ್ರಕರ್ತರು ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಬಂದರೂ ಪ್ರಾಮಾಣಿಕತೆಯಿಂದ ವರದಿ ಮಾಡಬೇಕು. ಯಾವುದೇ ಆಮಿಷ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಷ್ಠುರ ಮತ್ತು ನಿಖರವಾಗಿ ಕಾರ್ಯನಿರ್ವಹಿಸಬೇಕು. ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರ ಪತ್ರಿಕೊದ್ಯಮ ಅತ್ಯಂತ ಮಹತ್ವದು, ಕಲ್ಯಾಣ ಕರ್ನಾಟಕ ಭಾಗದ ಸಮಗ್ರಯತ್ತ ಪತ್ರಕರ್ತರು ಕಾರ್ಯನಿರ್ವಾಹಸ ಬೇಕಾಗಿದೆ ಎಂದರು.
ಜಿಲ್ಲೆಯ ಪತ್ರಕರ್ತರು ಅನೇಕ ವಿಷಯಗಳ ಬಗ್ಗೆ ನಮಗೆ ಮಾರ್ಗದರ್ಶನ ನೀಡಿದ್ದಾರೆ.ಪತ್ರಿಕೋದ್ಯಮ ಪವಿತ್ರ ಮತ್ತು ಗೌರವದ ವೃತ್ತಿಯಾಗಿದೆ. ಪತ್ರಿಕೆಗಳಲ್ಲಿನ ವರದಿಗಳು ಸಮಾಜದ ಕನ್ನಡಿಯಂತಿರಬೇಕು. ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಪತ್ರಿಕೋದ್ಯಮಕ್ಕಿದೆ ಎಂದರು. ಪತ್ರಕರ್ತರು ಕೇವಲ ಉದ್ಯಮಗಳ ಕೈಗೊಂಬೆಯಾದರೆ ಪ್ರಜಾಪ್ರಭುತ್ವ ಮಹತ್ವವನ್ನು ಕಳೆದುಕೊಂಡು, ಜನ ಮಾಧ್ಯಮಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಪಾಯ ಅಧಿಕವಾಗಿದೆ. ದೇಶದ ಪ್ರಜಾಪ್ರಭುತ್ವ ಆರೋಗ್ಯವಾಗಿ ಉಳಿಯಲು ಮತ್ತು ಜನ ಜಾಗೃತಿಗೆ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪತ್ರಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುದಾರರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಸರ್ಕಾರದ ಒಳ್ಳೆ ಕೆಲಸಗಳಿಗೆ ಬೆನ್ನು ತಟ್ಟುವ ಮತ್ತು ತಪ್ಪು ದಾರಿಯ ಸಂದರ್ಭದಲ್ಲಿ ಎಚ್ಚರಿಸುವ ಜವಾಬ್ದಾರಿಯನ್ನು ನಿರ್ಮಿಸಬೇಕಾಗಿದೆ. ಪತ್ರಿಕೋದ್ಯಮ ಕಾಲಕ್ರಮಣ ಬದಲಾಗುತ್ತಿದೆ. ಹಿಂದೆ ಮುದ್ರಣ ಮಾಧ್ಯಮಕ್ಕೆ ಇರುವ ಮಾನ್ಯತೆ ಈಗ ಕಡಿಮೆಯಾಗಿದೆ. ಕಾರಣ, ವಿದ್ಯುನ್ಮಾನ ಮಾಧ್ಯಮಗಳು ಪ್ರಭಾವ ಹೆಚ್ಚಾಗಿತ್ತು.
ಆದರೆ, ಪತ್ರಕರ್ತರು ಕೇವಲ ಉಧ್ಯಮಗಳು ಹಾಗೂ ರಾಜಕಾರಣಗಳ ಕೈಗೊಂಬೆಯಾಗಿ ಕೆಲಸ ಮಾಡದೇ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬೆಳಕು ಚೆಲ್ಲಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಜನರಲ್ಲಿ ವಿಶ್ವಾಸ ಬರುತ್ತಿದೆ. ಜನಸಾಮಾನ್ಯರಿಗೆ ಪತ್ರಕರ್ತರು ಮಾದರಿಯಾಗಬೇಕು.
ಈ ಭಾಗದ ಸಮಗ್ರ ಅಭಿವೃದ್ಧಿಗೆ ಪತ್ರಿಕೋದ್ಯಮ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕೆಂದರು.ರಾಷ್ಟ್ರ ಮಟ್ಟದಲ್ಲಿ ಅನೇಕ ಮಾಧ್ಯಮಗಳು ಕಾರ್ಪೊರೇಟ್ ಕಂಪನಿಗಳ ಕೈಯಲ್ಲಿವೆ. ಅಂಬಾನಿ ಒಬ್ಬರೇ ಹತ್ತು ಹಲವು ಮಾಧ್ಯಮಗಳನ್ನು ನಿರ್ವಹಿಸಿದ್ದಾರೆ ಎಂದರು.ಈ ರೀತಿ ಕಾರ್ಪೊರೇಟ್ ಕೈ ಗೊಂಬೆಯಾದ ಮಾಧ್ಯಮ ಗೌರವ ಉಳಿಸಿಕೊಳ್ಳುವಲ್ಲು ಸಾಧ್ಯವಾಗದ ಆತಂಕದಲ್ಲಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸರ್ಕಾರದ ಸರಿ, ತಪ್ಪುಗಳ ಬಗ್ಗೆ ಪರಾಮರ್ಶಿಸುವ ಮತ್ತು ಎಚ್ಚರಿಸುವ ಕ್ಷೇತ್ರವಾಗಿದೆ.ಸಮಾಜದ ಸ್ವಸ್ಥ ಕಾಪಾಡುವಲ್ಲಿ ಪತ್ರಿಕೋದ್ಯಮ ಪಾತ್ರ ಅತ್ಯಂತ ಮಹತ್ವವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪತ್ರಕರ್ತರಿಗೆ ಮಾಶಾಸನ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದರು.ರಾಜ್ಯ ಸರ್ಕಾರದಿಂದ ಪತ್ರಕರ್ತರಿಗೆ ದೊರೆಯಬೇಕಾದ ಎಲ್ಲಾ ಸವಲತ್ತು ಒದಗಿಸಲಾಗುತ್ತದೆ.
ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್ ಅವರು ಮಾತನಾಡುತ್ತಾ, ರಾಯಚೂರು ರಿಪೋರ್ಟರ್ ಗಿಲ್ಡ್ ಭವನ ನಿರ್ಮಾಣಕ್ಕೆ ಸಚಿವ ಎನ್ ಎಸ್ ಬೋಸರಾಜು ಸ್ಥಳ ಮಂಜೂರು ಮಾಡಿದ್ದರು. ಅವರು ಸದಾ ರಿಪೋರ್ಟರ್ಸ್ ಗಿಲ್ಡ್ ಬೆಂಬಲಿಸಿದ್ದಾರೆ ಎಂದರು.
ಗಿಲ್ಡ್ ನಿರ್ಮಾಣದ ಹಿಂದೆ ಜಿಲ್ಲೆಯ ಎಲ್ಲಾ ಜನಪ್ರತಿನಿದಿನಗಳ ಕೊಡುಗೆ ಅಪಾರವಿದೆ ಎಂದು ಅವರು ಪತ್ರಕರ್ತರ ಸಂಕಷ್ಟ ಪರಿಸ್ಥಿತಿಯಲ್ಲಿ ಗಿಲ್ಡ್ ವತಿಯಿಂದ ಸಹಾಯಧನ ನೀಡುವ ಉದ್ದೇಶದಿಂದ ಪತ್ರಕರ್ತರ ತುರ್ತು ನಿಧಿಯನ್ನು ಜಾರಿಗೆ ತರಲಾಗಿದೆ ಎಂದರು.
25ನೇ ಬೆಳ್ಳಿ ಸಂಭ್ರಮ ಆಚರಣೆಯಲ್ಲಿ ಇರುವ ರಾಯಚೂರು ರಿಪೋರ್ಟರ್ ಗಿಲ್ಡ್ ಈಗ ಹೆಮ್ಮರವಾಗಿ ಬೆಳೆದು ಬಂದಿದೆ ಎಂದರು.
ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರುಪತ್ರಕರ್ತರ ತುರ್ತುನಿಧಿಗೆ ಚಾಲನೆ ಹಾಗೂ ರಾಯಚೂರು ರಿಪೋರ್ಟಸ್ ಗಿಲ್ಡ್ ವೆಬ್ ಸೈಟ್ ಲೋಕಾರ್ಪಣೆಗೊಳಿಸಿ ಮಾತನಾಡಿ, ಶಾಸಕಾಂಗ ಕಾರ್ಯಾಂಗ
ನ್ಯಾಯಾಂಗದ ನಂತರ ನಾಲ್ಕನೇ ಅಂಗವಾದ ಪತ್ರಿಕೋದ್ಯಮದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಜನರಿಗೆ ಸತ್ಯಾ ಸತ್ಯತೆಯನ್ನು ಬಿತರಿಸಬೇಕು ಹೊರತು ಸುಳ್ಳು ಪ್ರಕಟಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ತನ್ನ ಪವಿತ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ.
ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಜರ್ನಲಿಸಂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ನೂತನವಾಗಿ ಬರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಅಗತ್ಯವಿದೆ. ದೇಶ ಮತ್ತು ರಾಜ್ಯದಲ್ಲಿ ಮುದ್ರಣ ಮತ್ತು ವಿದ್ಯುಮಾನ ಮಾಧ್ಯಮಗಳು ಅತ್ಯಂತ
ಬಲಿಷ್ಠವಾಗಿದೆ. ಈ ನಾಲ್ಕು ಅಂಗ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ರಿಪೋರ್ಟ್ರಸ್ ಗಿಲ್ಡ್ ಗೆ ತಮ್ಮ ಅನುದಾನದಿಂದ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಆರ್ ಆರ್ ಜಿ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ಮಾತನಾಡಿ ರಿಪೋರ್ಟ್ರಸ್ ಗಿಲ್ಡ್ ಪ್ರತಿ ವರ್ಷ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಮ್ಮಿಕೊಂಡು ವಿವಿಧ ಕಾರ್ಯಕ್ರಮ ರೂಪಿಸುತ್ತದೆ ಪತ್ರಕರ್ತರಿಗೆ ಕ್ರೀಡಾಕೂಟ ಇನ್ನಿತರ ಸಾಮಾಜಿಕ ಕಾರ್ಯಕ್ರಮ ಆಯೋಗಿಸುತ್ತಿದ್ಧು ಈ ಬಾರಿ ಪತ್ರಕರ್ತರು ತುರ್ತು ನಿಧಿ ಸಂಗ್ರಹ ಯೋಜನೆ ಹಾಗೂ ವೆಬ್ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಅಲ್ಲದೆ ಪತ್ರಿಕೆ ವಿತರಕರಿಗೆ ಉಚಿತ ಜರ್ಕಿನ್
ನೀಡುತ್ತಿದೆ ಮುಂಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ್ ಅವರು ಪ್ರಸ್ತಾವಿಕ ಮಾತನಾಡಿ, ರಾಯಚೂರು ರಿಪೋಟರ್ ಗಿಲ್ಡ್ ಬೆಳೆದು ಬಂದ ದಾರಿ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ವೇದಿಕೆ ಮೇಲೆ ಜಿಲ್ಲಾಧಿಕಾರಿ ನಿತೀಶ್ ಕೆ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ ಕುಮಾರಸ್ವಾಮಿ, ಹಿರಿಯ ಪತ್ರಕರ್ತರಾದ ಡಿ.ಕೆ.ಕಿಶನ್ ರಾವ್, ವಿಜಯ್ ವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ಜಗನ್ನಾಥ ಆರ್ ದೇಸಾಯಿ, ಮಹಾನಗರ ಪಾಲಿಕೆ ಮಾಜಿ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಿಗಿರಿ, ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರು ಸಂಘದ ಅಧ್ಯಕ್ಷ ಹಾಗೂ ರಾಯಚೂರು ಸಂಜೆ ಪತ್ರಿಕೆ ಸಂಪಾದಕಾದ ಚನ್ನಬಸವ ಬಾಗಲವಾಡ, ಖಾನ್ ಸಾಬ್ ಮೋಮಿನ್ , ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಜೀವಮಾನ ಸಾಧನೆಗೆ ಪ್ರಜಾ ಪ್ರಸಿದ್ಧ ಹಿರಿಯ ವರದಿಗಾರರಾದ ರಘುನಾಥ ರೆಡ್ಡಿ ಮನ್ಸಲಾಪೂರು ರವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು. ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಹಿರಿಯ ಪ್ರಜಾವಾಣಿ ವರದಿಗಾರರಾದ ಚಂದ್ರಕಾಂತ ಮಸಾನಿ, ಪ್ರಜಾಪ್ರಸಿದ್ಧ ವರದಿಗಾರ ಬಿ.ರಾಜು, ಅಮೋಘ ಚಾನೆಲ್ ಶ್ರೀನಿವಾಸ ಕೆ ರವರಿಗೆ ಪ್ರಶಸ್ತಿ ಪ್ರಧಾನ ನೆರವೇರಿತು. ಸತ್ಯವತಿ ದೇಶಪಾಂಡೆ, ವೈಷ್ಣವಿ ಪ್ರಾರ್ಥಿಸಿದರು. ಸಣ್ಣ ಈರಣ್ಣ ನಿರೂಪಿಸಿದರು. ವಿಶ್ವನಾಥ್ ಸಾಹುಕಾರ್ ವಂದಿಸಿದರು. ಸಂಪಾದಕರು, ಹಿರಿಯ ಕಿರಿಯ ಪತ್ರಕರ್ತರು, , ಛಾಯಾಗ್ರಾಹಕರು, ವಿವಿಧ ಸಂಘಟನೆಗಳು ಮುಖಂಡರು,ಮಹಿಳೆಯರು ಸಾರ್ವಜನಿಕರು ಭಾಗವಹಿಸಿದ್ದರು.













Comments
Post a Comment