ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಅದ್ದೂರಿ ಚಾಲನೆ: ನಾಡಿನ ವೈಭವ, ಇತಿಹಾಸ ಯುವಪೀಳಿಗೆಗೆ ಪರಿಚಯಿಸಲು ಉತ್ಸವಗಳು ಪೂರಕ - ಸಚಿವ ಡಾ. ಶರಣಪ್ರಕಾಶ್ ಪಾಟೀಲ್. ಸಂಜಿತ ಹೆಗಡೆ ಸಂಗೀತ ಸುನಾಮಿ
ಜಯ ಧ್ವಜ ನ್ಯೂಸ್ ,ರಾಯಚೂರು ಫೆ.5 - ವೈವಿಧ್ಯಮಯ ಇತಿಹಾಸ, ವೈಭವ, ಕಲೆ, ಸಂಸ್ಕೃತಿಯನ್ನು ಹೊಂದಿರುವ ಈ ನಾಡಿನ ಹಿರಿಮೆಯನ್ನು ಯುವಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾ ಉತ್ಸವಗಳು ಪೂರಕವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫೆ.5ರಂದು ರಾಯಚೂರಿನ ಕೃಷಿ ವಿ.ವಿ. ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಆಶಯ ಮತ್ತು ಅಪೇಕ್ಷೆಯಂತೆ ಇದೀಗ 22 ವರ್ಷಗಳ ಬಳಿಕ ರಾಯಚೂರು ಜಿಲ್ಲೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ರಾಯಚೂರು ಜಿಲ್ಲೆ ತನ್ನದೇ ಆದ ಇತಿಹಾಸ, ಪರಂಪರೆ, ವೈಭವವನ್ನು ಹೊಂದಿದ್ದು, ಅದೇ ವೈಭವವನ್ನು ಮರುಕಳಿಸುವಂತೆ ಮಾಡುವಲ್ಲಿ ಉತ್ಸವ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಇಡೀ ರಾಜ್ಯಕ್ಕೆ ಅನ್ನ, ವಿದ್ಯುತ್ ನೀಡುವ ಈ ನಾಡು, ತನ್ನದೆ ಆದ ಕಲೆ, ಸಾಹಿತ್ಯ ಹಾಗೂ ವೈಶಿಷ್ಟ್ಯ ಹೊಂದಿದೆ ಎಂದರು.
ಈ ಭಾಗದ ಸಂಗೀತ, ನೃತ್ಯ, ಗಾಯನ ಸೇರಿದಂತೆ ಹಲವಾರು ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಈ ಉತ್ಸವ ಒಂದು ವೇದಿಕೆಯನ್ನು ಕಲ್ಪಿಸುವ ಮೂಲಕ ಅವಕಾಶ ಒದಗಿಸಿಕೊಟ್ಟಿದೆ. ಉತ್ಸವ ನಡೆಯುವ ಮೂರೂ ದಿನಗಳು ಕೂಡ ವೈವಿಧ್ಯಮಯ ಸಾಂಸ್ಕೃತಿಕ ಕಲೆಗಳು ಜನರನ್ನು ರಂಜಿಸಲಿವೆ. ಜನರಲ್ಲಿ ನಾಡಿನ ಕಲೆ, ಇತಿಹಾಸ, ಸಂಸ್ಕೃತಿಯನ್ನು ಪರಿಚಯಿಸುವಂತಹ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ.
ಎಲ್ಲರೂ ಕೂಡ ಸಂಭ್ರಮದಿಂದ ರಾಯಚೂರು ಜಿಲ್ಲಾ ಉತ್ಸವವನ್ನು ಆಸ್ವಾದಿಸಬೇಕು ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಇದೇ ವೇಳೆ ಮನವಿ ಮಾಡಿದರು.
ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಭೋಸರಾಜ್ ಮಾತನಾಡಿ, ರಾಯಚೂರು ಜಿಲ್ಲಾ ಉತ್ಸವವನ್ನು ಆಚರಿಸಲು ಈ ಹಿಂದೆಯೂ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಜಿಲ್ಲೆಯ ಸಾಹಿತಿಗಳು, ಕಲಾವಿದರು, ಮಾಧ್ಯಮದವರು ಸೇರಿದಂತೆ ಹಲವರ ಒತ್ತಾಸೆಯಂತೆ ಇದೀಗ ಉತ್ಸವವನ್ನು ಆಚರಿಸಲಾಗುತ್ತಿದೆ.
ರಾಯಚೂರು ಜಿಲ್ಲೆಯ ಇತಿಹಾಸ, ಪರಂಪರೆಯನ್ನು ಯುವಪೀಳಿಗೆಗೆ ಪರಿಚಯಿಸಬೇಕಿದೆ. ಈ ಭಾಗದ ಸೋನಾಮಸೂರಿ ಅಕ್ಕಿ, ಪ್ರಸಿದ್ಧ ಹತ್ತಿ ವಿದೇಶಗಳಲ್ಲೂ ರಾಯಚೂರು ಜಿಲ್ಲೆಯನ್ನು ಪ್ರಸಿದ್ಧಗೊಳಿಸಿವೆ. ಈ ಭಾಗದಲ್ಲಿ ಕೃಷ್ಣ, ತುಂಗಭದ್ರಾ ನದಿಗಳು ಹರಿದಿದ್ದು, ಕೃಷಿಗೆ ಹೆಚ್ಚಿನ ಒತ್ತು ನೀಡುವ ಜಿಲ್ಲೆ ನಮ್ಮದಾಗಿದೆ. ಹಟ್ಟಿ ಚಿನ್ನದ ಗಣಿ ಮೂಲಕ ಈ ನಾಡಿಗೆ ಚಿನ್ನವನ್ನು ನೀಡುತ್ತಿರುವ ಜಿಲ್ಲೆ ರಾಯಚೂರು. ನಮ್ಮ ಸರ್ಕಾರ ಈ ಭಾಗದ ಶೈಕ್ಷಣಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಅನೇಕ ಕ್ರಮಗಳನ್ನು ಕೈಗೊಂಡಿದೆ. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು 371 ಜೆ ಕಲಂ ತಿದ್ದುಪಡಿಗೊಳಿಸುವ ಮೂಲಕ ಈ ಭಾಗದ ಯುವ ಪೀಳಿಗೆಗೆ ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣ, ನೇಮಕಾತಿಗಳಲ್ಲಿ ವಿಶೇಷ ಮೀಸಲಾತಿ ಒದಗಿಸಿದ್ದು, ಇದಕ್ಕಾಗಿ ಶ್ರಮಿಸಿದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಮನಮೋಹನ್‌ಸಿಂಗ್ ಮುಂತಾದವರನ್ನು ಈ ವೇಳೆ ಸ್ಮರಿಸಬೇಕಿದೆ. ಈ ಭಾಗದ ನೀರಾವರಿ, ಕೈಗಾರಿಕೆ ಮುಂತಾದ ಕ್ಷೇತ್ರಗಳ ಅಭಿವೃದ್ಧಿಗೆ ಎಲ್ಲ ಜನಪ್ರತಿನಿಧಿಗಳು ಒಟ್ಟುಗೂಡಿ ಶ್ರಮಿಸುತ್ತಿದ್ದೇವೆ. ಮೂರು ದಿನಗಳ ಈ ಉತ್ಸವವನ್ನು ಈ ಭಾಗದ ಎಲ್ಲರೂ ಮನೆ ಮನೆಯಲ್ಲಿ ಹಬ್ಬದಂತೆ ಆಚರಿಸೋಣ ಎಂದು ಸಚಿವ ಭೋಸರಾಜ್ ಹೇಳಿದರು.
ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ನಾವೆಲ್ಲರೂ ಒತ್ತಡದಲ್ಲಿ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಒತ್ತಡವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ಜಿಲ್ಲಾ ಉತ್ಸವಗಳು ಅಗತ್ಯವಾಗಿವೆ.
ರಾಯಚೂರು ಜಿಲ್ಲೆ ಕರ್ನಾಟಕದ ಅರ್ಧ ಪ್ರದೇಶಕ್ಕೆ ವಿದ್ಯುತ್ ನೀಡುತ್ತದೆ, ಇಡೀ ನಾಡಿಗೆ ಚಿನ್ನ ನೀಡುತ್ತದೆ. ರಾಯಚೂರು ಶರಣರು, ಸಂತರ ನಾಡು, ಇಲ್ಲಿ ಎಲ್ಲ ಜಾತಿ, ಧರ್ಮ ಸಮುದಾಯದವರು ಭಾತೃತ್ವ ಭಾವನೆಯೊಂದಿಗೆ ಬಾಳುತ್ತಿದ್ದೇವೆ. ಈ ಭಾಗದ ಕಲಾವಿದರಿಗೆ ಅನೇಕ ವರ್ಷಗಳಿಂದ ತಮ್ಮ ಕಲೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ರಾಯಚೂರು ಜಿಲ್ಲಾ ಉತ್ಸವ ಆಚರಣೆ ಮೂಲಕ ಇಂತಹ ಕಲಾವಿದರಿಗೆ ತಮ್ಮ ಕಲೆ, ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ ಎಂದರು.
ವಿಧಾನಪರಿಷತ್ ಸದಸ್ಯ ಎ. ವಸಂತಕುಮಾರ್ ಮಾತನಾಡಿ ಜಿಲ್ಲೆ ಹಿಂದುಳಿದಿಲ್ಲ ಇದು ಸಮೃಧ್ಧ ನಾಡಾಗಿದೆ ಚಿನ್ನದ ಬೀಡು, ಹತ್ತಿ ಕಣಜ ರಾಜ್ಯಕ್ಕೆ ಮಾದರಿ ಜಿಲ್ಲೆಯಾಗಿದೆ ಎಂದರು. ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರು ಹಾಗೂ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ಜಿಲ್ಲಾ ಉತ್ಸವ ಆಯೋಜನೆ ಅರ್ಥಪೂರ್ಣವಾಗಿದೆ ಎಂದರು. ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ ರಾಜ್ಯಕ್ಕೆ ವಿದ್ಯುತ್ , ಚಿನ್ನ , ಅನ್ನ ನೀಡುವ ಪ್ರದೇಶವಾಗಿದೆ ಎಂದರು.
ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾ ಉತ್ಸವಕ್ಕೆ ಸಹಕರಿಸಿದ ಎಲ್ಲರನ್ನು ಶ್ಲಾಘಿಸಿದರು. ಶ್ರೇಷ್ಠ ಕೃಷಿಕರು ಹಾಗೂ ಕೃಷಿ ಮಹಿಳೆಯರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಪಾಮಯ್ಯ ಮುರಾರಿ, ತಾಲ್ಲೂಕು ಅಧ್ಯಕ್ಷ ಪವನ್ ಕಿಶೋರ್ ಪಾಟೀಲ್, ಕೃಷಿ ವಿವಿ ಕುಲಪತಿ ಡಾ. ಎಂ. ಹನುಮಂತಪ್ಪ,
ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಜಿಲ್ಲಾಧಿಕಾರಿ ಕೆ. ನಿತೀಶ್, ಜಿ.ಪಂ. ಸಿಇಒ ಈಶ್ವರ್ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ, ರಾಯಚೂರು ಮಹಾನಗರಪಾಲಿಕೆ ಆಯುಕ್ತ ಜುಬೀನ್ ಮೊಹಾಪಾತ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು. ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಅಧ್ಯಕ್ಷ ವಿಷ್ಣುಕಾಂತ ಭುತಡ, ರೈಸ್ ಮಿಲ್ ಅಸೋಸಿಯೇಷನ್ ಅಧ್ಯಕ್ಷೆ ಸಾವಿತ್ರಿ ಪುರುಷೋತ್ತಮ ಮುಂತಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಮಹಾಲಕ್ಷ್ಮಿ ಹಾಗೂ ಪ್ರತಿಭಾ ಗೋನಾಳ ತಂಡ ನಾಡಗೀತೆ ಹಾಡಿದರು.
ಉತ್ಸಾಹದ ಅಲೆ ಎಬ್ಬಿಸಿದ ಸಂಜಿತ್ ಹೆಗಡೆ ಸಂಗೀತ : ಉಧ್ಘಾಟನೆ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಕ್ಸಟಸಿ, ಸವಾರಿ ತಂಡದಿಂದ ಸಂಗೀತ ಹಾಗೂ ನೃತ್ಯ ನಡೆಯಿತು.
ತದನಂತರ ನಡೆದ ಸಂಜಿತ್ ಹೆಗಡೆ ಸಂಗೀತ ಉತ್ಸಾಹದ ಅಲೆ ಎಬ್ಬಿಸಿತು. ಯುವಕ ಯುವತಿಯರು ಸಂಗೀತದ ಸುನಾಮಿಯಲ್ಲಿ ಮಿಂದೆದ್ದರು.











Comments
Post a Comment