ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ ಕವಿಗೋಷ್ಠಿ 

: ಕಾವ್ಯವು ಮಾನವೀಯ ಮೌಲ್ಯ ಮತ್ತು ಸೌಹಾರ್ದತೆಯನ್ನು ಬೆಳೆಸುವ ಬಲಿಷ್ಠ ಅಸ್ತ್ರವಾಗಿದೆ -  ರಂಗಣ್ಣ ಪಾಟೀಲ್ ಅಳ್ಳುಂಡಿ


ಜಯ ಧ್ವಜ ನ್ಯೂಸ್ ,ರಾಯಚೂರು ಫೆ.5 -ಕಾವ್ಯವು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಮತ್ತು ಸೌಹಾರ್ದತೆಯನ್ನು ಬೆಳೆಸುವ ಬಲಿಷ್ಠ ಅಸ್ತ್ರವಾಗಿದೆ ಎಂದು ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಹೇಳಿದರು.

ಅವರು ಇಂದು  ನಗರದ ಮಹಿಳಾ ಸಮಾಜ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ರಾಯಚೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ-2026ರ ಪ್ರಯುಕ್ತ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.


ರಾಯಚೂರು ಜಿಲ್ಲೆಯ ಕಾವ್ಯ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಿರಿಯರು ಮತ್ತು ಕಿರಿಯರು ತಮ್ಮ ತಮ್ಮ ಕಾವ್ಯ ಸೃಜನಶೀಲತೆಯ ಮೂಲಕ ರಾಜ್ಯದ ಗಮನ ಸೆಳೆಯುತ್ತಿರುವುದು ನಮಗೆಲ್ಲ ಅಪಾರ ಸಂತೋಷ ನೀಡುತ್ತಿದೆ. ಓದುಗರು ಮತ್ತು ಬರಹಗಾರರು ಸದಾ ಸಮಾಜದ ಒಳಿತನ್ನು ಬಯಸುವ ಸಹೃದಯಿಗಳಾಗಿರಬೇಕು. ಕವಿತೆ ಪ್ರಾಮಾಣಿಕ ಮನಸ್ಸಿನ ಅಭಿವ್ಯಕ್ತಿಯಾಗಿದ್ದು, ಕವಿ ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಸ್ಪಂದಿಸಿ ತನ್ನ ಅನುಭವಗಳನ್ನು ಹೃದಯಸ್ಪರ್ಶಿಯಾಗಿ ವ್ಯಕ್ತಪಡಿಸಬೇಕಾಗಿದೆ ಎಂದರು.


ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇದರ ಅಂಗವಾಗಿ ನಿನ್ನೆ ಮಕ್ಕಳ ಹಬ್ಬವನ್ನು ಅತ್ಯಂತ ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ರಾಯಚೂರು ಉತ್ಸವವು ಜನಮನದಲ್ಲಿ ಸಂತೋಷದ ಹಬ್ಬವಾಗಿ ಮೂಡಿಬಂದಿದ್ದು ಇದರ ಭಾಗವಾಗಿ ಕವಿ ಗೋಷ್ಠಿಯನ್ನು ಉದ್ಘಾಟಿಸಲಾಗಿದೆ.


ಕವಿ ಗೋಷ್ಠಿಗಾಗಿ ಜಿಲ್ಲಾಡಳಿತದ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಕವಿಗಳನ್ನು ಆಹ್ವಾನಿಸಲಾಗಿದ್ದು, ಇದಕ್ಕೆ ಸ್ಪಂದಿಸಿ ನೂರಾರು ಕವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ಕವಿಗಳನ್ನು ಹಿರಿಯ ಸಾಹಿತಿಗಳು, ಯುವ ಕವಿಗಳು, ಮಹಿಳಾ ಕವಿಗಳು ಹಾಗೂ ತುರ್ತು ಕವಿಗಳು ಎಂದು ವಿಂಗಡಣೆ ಮಾಡಿ, ನಾಲ್ಕು ಪ್ರತ್ಯೇಕ ಕವಿ ಗೋಷ್ಠಿಗಳನ್ನು ಆಯೋಜಿಸುವ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಕೂಡ ಜಿಲ್ಲಾಡಳಿತದ ಸಹಕಾರದೊಂದಿಗೆ ಕವಿಗಳಿಗೆ ಪ್ರೋತ್ಸಾಹ ನೀಡುತ್ತಾ ಪೂರಕವಾಗಿ ನಿಂತಿದೆ‌. ಈ ಕವಿ ಗೋಷ್ಠಿಯಲ್ಲಿ ಸುಮಾರು 75 ಕವಿಗಳು ತಮ್ಮ ಕಾವ್ಯ ವಾಚನ ಮಾಡುವ  ಮೂಲಕ ಎಡೆದೊರೆ ನಾಡು ರಾಯಚೂರು ಉತ್ಸವ ಸಾಹಿತ್ಯಿಕವಾಗಿ ಮತ್ತೊಂದು ಎತ್ತರವನ್ನು ತಲುಪಿಸುವ ಕಾರ್ಯ ಮಾಡಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು ಹಾಗೂ ಕವಿ ಅನುವಾದಕರಾದ ಚಿದಾನಂದ ಸಾಲಿ ಅವರು ಕಾರ್ಯಕ್ರಮದ ಕುರಿತು ಮಾತನಾಡಿ, ಗದ್ಯದಲ್ಲಿ ಬರೆದಿದ್ದನ್ನು,  ಕತ್ತರಿಸಿ, ಪದಗಳನ್ನು ಜೋಡಿಸುತ್ತಾ ಹೋದರೆ ಅದು ಕವಿತೆ ಆಗುತ್ತದೆ ಎಂಬ ತಪ್ಪು ಗ್ರಹಿಕೆ ಕೆಲವರಲ್ಲಿದೆ. ಆದರೆ, ಗದ್ಯಕ್ಕೂ ಪದ್ಯಕ್ಕೂ ಇರುವ ಮುಖ್ಯ ವ್ಯತ್ಯಾಸವೆ ಕಾವ್ಯದ ಗುಣವಾಗಿದೆ. ಒಂದು ದೊಡ್ಡ ಜೀವನ ತತ್ವವನ್ನು ಸರಳವಾದ ಸಾಲುಗಳಲ್ಲಿ ಹೇಳುವವನೆ ನೀಜವಾದ ಕವಿ. ಅತ್ಯಂತ ಸಂಕೀರ್ಣ ಭಾಷೆ ಬಳಸಿ, ತಾನು ಹೇಳಬೇಕೆಂದುಕೊಂಡಿದ್ದನ್ನು ಕೇಳುವವರಿಗೆ ಕವನಗಳ ಮೂಲಕ ಹೇಳುವವನೆ ಕವಿ. ಜನ ಸಮೂಹದ ಧ್ವನಿ ಅಂತಲೂ ಕವಿಯನ್ನು ಕರೆಯುತ್ತಾರೆ. ಕವಿ, ಕವಿತೆಯ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗುತ್ತಾನೆ. ಅದಕ್ಕಾಗಿ ಕವಿಯನ್ನು ಸಮಾಜದ ಅಘೋಷಿತ ಶಾಸಕ ಅಂತಲೂ ಕರೆಯಲಾಗುತ್ತದೆ. ಜನ ಸಮೂಹದ ಸಮಸ್ಯೆಗಳಿಗೆ, ಜನರ ಸಂಕಟಗಳಿಗೆ ಕನ್ನಡಿ ಹಿಡಿಯುವಂತಹ ಕೆಲಸ ಕವಿ ಮಾಡುತ್ತಾನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಲಿಂಗಸುಗೂರಿನ ಸಾಹಿತಿಗಳಾದ ಗಿರಿರಾಜ ಹೊಸಮನಿ ಅವರು ಮಾತನಾಡಿದರು.

ಕವಿಗಳಾದ ಪಂಪಾಪತಿ ಶಾಸ್ತ್ರೀ, ಮಲ್ಲಣ್ಣ ಹರವಾಳ, ಮಹಾದೇವ ಎಸ್. ಪಾಟೀಲ್, ಖಾನ್ ಸಾಬ್ ಮೋಮಿನ್, ಜೆ.ಎಂ.ಶರಣಯ್ಯ ಸ್ವಾಮಿ, ಡಾ.ಹುಸೇನಪ್ಪ ಅಮರಾಪುರ, ಡಾ.ಸತೀಶ್ ಕುಮಾರ್ ಎಸ್., ಅನಿಲರಾಜ್ ಜೆ., ಮಹಾಂತೇಶ ಹೀರಾ, ಕೆ. ಸತ್ಯನಾರಾಯಣ, ಬಶೀರ್ ಅಹ್ಮದ್ ಹೊಸಮನಿ, ಡಾ.ವೆಂಕಟೇಶ ನವಲಿ, ಡಾ.ಎಸ್.ಜಿ.ಪಾಟೀಲ, ಅಮರಗುಂಡಪ್ಪ ಹೂಗಾರ, ದೇವರಾಜ್ ಎಸ್. ಬಪ್ಪೂರ, ಮುಜೀಬ್ ಮಾನ್ವಿ, ಚಂದ್ರಶೇಖರ ನಾಡಗೌಡ, ಡಾ.ಶಾಮಸುಂದರ ಪಟವಾರಿ, ಎಂ.ರಾಮಚಂದ್ರರಾವ್, ದೇವನಪಲ್ಲಿ ಶ್ರೀನಿವಾಸ್, ದುರುಗಪ್ಪ ಗುಡದೂರು, ಬಸವರಾಜ ಜಂಗಮರಹಳ್ಳಿ, ರುದ್ರಪ್ಪ ಎಸ್ ತಳವಾರ, ವೆಂಕಟೇಶ ಗುಡೂರ, ಶಿಕ್ಷಕ ಮಹೇಶ, ಮಲ್ಲಿಕಾರ್ಜುನ ನಾಯಕ, ಲಕ್ಷ್ಮಣ ಬಾರಿಕೇರ, ಮುರಳೀಕೃಷ್ಣ, ದೇವೇಂದ್ರ ಹುಡಾ, ಮಹಾಂತೇಶ ಗವಿಗಟ್ಟ, ಎಸ್.ಶಿವಮೂರ್ತಿ, ಗೋಪಿನಾಥ ದೇಸಾಯಿ, ಪ್ರಸನ್ನ ಪಟವಾರಿ, ಮುರುಗೇಶ ಕುಂಬಾರ, ಪಿ.ವೆಂಕಟೇಶ ಬಾಗಲವಾಡ, ಶ್ರೀಧರರಾವ್ ದೇಸಾಯಿ, ಸಣ್ಣ ಯಲ್ಲಪ್ಪ, ಮಂಜುನಾಥ ಗುತ್ತೇದಾರ, ರಾಘವೇಂದ್ರ ವಿ.ಹೆಚ್., ರಘುನಾಥರೆಡ್ಡಿ ಮನ್ನಲಾಪುರ, ಶಂಕರರಾವ್ ಉಭಾಳೆ, ಡಾ.ತಿಮ್ಮಯ್ಯ ಶೆಟ್ಟಿ ಇಲ್ಲೂರ, ಸಿದ್ದಣ್ಣ ನಿಲೋಗಿ, ಸಿದ್ಧಾರ್ಥ ವಲ್ಲಭ, ಮಹಾಂತಸ್ವಾಮಿ ಉಪ್ರಾಳ, ನೀಲಕಂಠಯ್ಯ ಮಳಿಮಠ ಗಲಗ, ಇಮಾಮುದ್ದೀನ್ ಮಾಡಗಿರಿ, ಕೆ.ಮಲ್ಲಿಕಾರ್ಜುನ ಕವಿತಾಳ, ಜಿ.ಶರಣ ಬಸವರಾಜ್, ಶರಣಪ್ಪ ಗಬ್ಬೂರು, ವೀರೇಶ್ ಗೋನವಾರ, ಚಂದ್ರಶೇಖರ ಮದ್ಲಾಪುರ, ಮಹಾದೇವ ಹಳ್ಳಿ, ಶಿವಪ್ಪ ಪಾಟೀಲ ಜಾನೇಕಲ್, ಮಂಜುನಾಥ ಸಾಹುಕಾರಮನಿ, ಸಿ.ಹನುಮಂತರಾಯ ಹಾಗೂ ಮತ್ತಿತರರು ಈ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಈರಣ್ಣ ಬಿರಾದಾರ, ಹಿರಿಯ ಸಾಹಿತಿಗಳಾದ ಬಿ.ಜಿ ಹುಲಿ, ರಾಯಚೂರು ತಾಲ್ಲೂಕು ಕಸಾಪ ಅಧ್ಯಕ್ಷರಾದ ಡಾ. ಬಿ.ವಿಜಯರಾಜೇಂದ್ರ, ಸಿಂಧನೂರು ತಾಲ್ಲೂಕು ಕಸಾಪ ಅಧ್ಯಕ್ಷರಾದ ಹೆಚ್.ಎಫ್. ಮಸ್ಕಿ, ಚುನಾವಣಾ ವಿಭಾಗದ ತಹಶಿಲ್ದಾರ ಪರಶುರಾಮ ಸೇರಿದಂತೆ ಕವಿಗಳು, ಕವನ ಆಸಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.                    ಪ್ರತಿಭಾ ಗೋನಾಳ ನಾಡಗೀತೆ ಪ್ರಸ್ತುತ ಪಡಿಸಿದರು. ಅಣ್ಣಪ್ಪ ಮೇಟಿಗೌಡ ಕಾರ್ಯಕ್ರಮದ ನಿರೂಪಿಸಿದರು. ರಾವುತ್‌ರಾವ್ ಬರೂರ  ಸ್ವಾಗತಿಸಿದರು. ನಾಗಪ್ಪ ಹೊರಪ್ಯಾಟಿ ಕಾರ್ಯಕ್ರಮ ನಿರ್ವಹಣೆ ಮಾಡಿದರೆ, ವಿಜಯಲಕ್ಷ್ಮಿ ಅಸ್ಕಿಹಾಳ ಅವರು ಕೊನೆಯಲ್ಲಿ ವಂದಿಸಿದರು.

Comments

Popular posts from this blog