ರಾಯಚೂರು ಜಿಲ್ಲಾ ಉತ್ಸವ ಅಂಗವಾಗಿ ಮಹಿಳಾ ಕವಿಗೋಷ್ಠಿಯ ಉದ್ಘಾಟನೆ
: ಸ್ತ್ರೀ ಭೂಮಿಯ ಕಾವ್ಯ-ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ


ಜಯ ಧ್ವಜ ನ್ಯೂಸ್ ,ರಾಯಚೂರು ಫೆ.6-

ರಾಯಚೂರು ಉತ್ಸವದ ಅಂಗವಾಗಿ ಫೆ. 6ರಂದು ಮುಂಜಾನೆ 10:40ಕ್ಕೆ ಮಹಿಳಾ ಸಮಾಜದ ಆವರಣದಲ್ಲಿ ಆಯೋಜಿಸಲಾದ ಮಹಿಳಾ ಕವಿಗೋಷ್ಠಿಯನ್ನು ಹಿರಿಯ ಸಾಹಿತಿ ಲಕ್ಷ್ಮೀದೇವಿ ಶಾಸ್ತ್ರಿ ಉದ್ಘಾಟಿಸಿದರು.


ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಅವರು,

“ನಾನು ಒಬ್ಬಂಟಿ, ಸಾಮಾನ್ಯ ಸಾಹಿತಿ. ಆದರೂ ನನ್ನನ್ನು ಗುರುತಿಸಿ ಜಿಲ್ಲಾಡಳಿತವು ಉದ್ಘಾಟನೆಗೆ ಆಯ್ಕೆ ಮಾಡಿರುವುದು ನನಗೆ ಅಪಾರ ಸಂತಸ ತಂದಿದೆ” ಎಂದು ಭಾವುಕರಾಗಿ ಹೇಳಿದರು.


“ಮಗುವಿನ ಜನ್ಮದೊಂದಿಗೆ ಕವನವೂ ಹುಟ್ಟಿದೆ. ನಕ್ಷತ್ರಗಳು ಆಕಾಶದ ಕವಿತೆಗಳಾದರೆ, ಸ್ತ್ರೀ ಭೂಮಿಯ ಕಾವ್ಯ” ಎಂದು ಅವರು ಅಭಿಪ್ರಾಯಪಟ್ಟರು.

ಕವನ ಎಲ್ಲರಿಗೂ ಒಲಿಯುವುದಿಲ್ಲ. ಅದು ಒಲಿದರೆ ನಿದ್ರೆ ಕಸಿದುಕೊಳ್ಳುತ್ತದೆ, ಅಕ್ಟೋಪಸ್‌ನಂತೆ ಅಕ್ರಮಿಸುತ್ತದೆ. ಕಲಿಸಿದರೆ ಬರದ ಕವನ ಕನವರಿಕೆಯಲ್ಲೂ ಭಾವಗಳ ಮಂಥನ ನಡೆಸುತ್ತದೆ. ಕಾವ್ಯ ಸಮಾಜವನ್ನು ಸ್ಪಂದಿಸಬೇಕು. ಜಗತ್ತನ್ನು ಕವಿ ನೋಡುವ ದೃಷ್ಟಿಯೇ ಬೇರೆಯಾಗಿರುತ್ತದೆ ಎಂದು ತಿಳಿಸಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಭಾರತಿ ಕುಲಕರ್ಣಿ, ಡಾ. ಶಿವಲೀಲಾ ಬಸನಗೌಡ ಅವರು ಕವನ ವಾಚಿಸಿದರು.


“ಬಾರ್ ಮುಚ್ಚಿ ಎಲ್ಲೆಂದರಲ್ಲಿ ಅವರದೇ ದರ್ಬಾರ್” ಎಂಬ ಶೀರ್ಷಿಕೆಯ ಮೂಲಕ ಯೋಜನೆಗಳಿಂದ ಜನರಿಗೆ ಶಾಶ್ವತ ಪರಿಹಾರ ಸಿಗಬೇಕೆಂಬ ಆಶಯವನ್ನು ದೇವೇಂದ್ರಮ್ಮ ತಮ್ಮ ಕವನದಲ್ಲಿ ವ್ಯಕ್ತಪಡಿಸಿದರು.

ಜನಸೇವೆ ಮತ್ತು ಸರ್ಕಾರಿ ಸೇವೆಯಲ್ಲಿರುವ ಭ್ರಷ್ಟಾಚಾರವನ್ನು ಶಾಂತ ಒಳಗಿನಮನಿ ಅವರು ತಮ್ಮ ಕವನದಲ್ಲಿ ತೀಕ್ಷ್ಣವಾಗಿ ಚಿತ್ರಿಸಿದರು.

ವಿಜಯಲಕ್ಷ್ಮಿ ಪಾಟೀಲ್ ಅವರು ವಿಧವೆಯ ಸೌಭಾಗ್ಯ ಎಂಬ ವಿಷಯವನ್ನು ಕಾವ್ಯ ರೂಪದಲ್ಲಿ ಅಭಿವ್ಯಕ್ತಪಡಿಸಿದರು.

“ಜಾಗೃತರಾಗಿರಿ” ಎಂಬ ಕವನವನ್ನು ಬಸಮ್ಮ ಹಿರೇಮಠ ಅವರು ವಾಚಿಸಿ, ದುಡಿಯದೇ ಸುಖ ಬಯಸುವವರು ಹಾಗೂ ಕುತಂತ್ರ ಬುದ್ಧಿಯವರ ಬಗ್ಗೆ ಎಚ್ಚರಿಸಿದರು.

“ಬಂದೂಕು” ಎಂಬ ಕವನದಲ್ಲಿ ಚಂದ್ರಮತಿ ಸಿರಿವಾರ ಅವರು ಸ್ತ್ರೀಯರ ಸ್ವಾತಂತ್ರ್ಯ ಮತ್ತು ಹಿಂಸೆಯ ವಿರುದ್ಧದ ಭಾವನೆಯನ್ನು ವ್ಯಕ್ತಪಡಿಸಿದರು.

ಸುಧಾರಾಣಿ ಅವರು “ಕಾವಲು ದಾರಿ” ಕವನದ ಮೂಲಕ ಮಹಿಳೆಯರ ಬದುಕಿನ ಹೋರಾಟವನ್ನು ಎಳೆ ಎಳೆಯಾಗಿ ಚಿತ್ರಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಉಪನ್ಯಾಸಕಿ ಡಾ. ಅರುಣಾ ಹಿರೇಮಠ ಮಾತನಾಡಿ,

“ಪದಗಳ ಮೂಲಕ ಬದುಕನ್ನು ಅರ್ಥಮಾಡಿಕೊಳ್ಳುವ ಸೃಜನಶೀಲ ಕವಿಮಣಿಯರೇ, ಎಡೆದೊರೆ ನಾಡಿನ ಈ ಮಹಿಳಾ ಕವಿಗೋಷ್ಠಿ ಕೇವಲ ಸಾಹಿತ್ಯಿಕ ಸಮಾರಂಭವಲ್ಲ” ಎಂದು ಹೇಳಿದರು.ಆರ್ ಶಿವಮ್ಮ, ಸ್ವಪ್ನ ಜಾನ್, ಬಿ.ನಾಗಲಕ್ಷ್ಮಿ, ಚಂದ್ರಕಲಾ, ವಾಣಿ ಮಾಲಿಪಾಟೀಲ್, ಸೌಜನ್ಯ,ರಕ್ಷಿತಾ, ಪದ್ಮಾವತಿ, ಲಕ್ಷ್ಮಿ, ಭೀಮಮ್ಮ, ವಿಜಯಲಕ್ಷ್ಮಿ ಪಾಟೀಲ್, ಬಿ ಸುನಿತಾಗೌಡ, ಮಮತಾ ಕತ್ತಿ, ಅರುಣಾ, ಧರ್ಮವತಿ, ಸುಖಲತಾ, ರತ್ನ ರಾಯಚೂರಕರ್, ಸರಿತಾ,ಕವಿತಾ,ಶೀಲ್ಪಕಲಾ,ಸುಧಾರಾಣಿ ರಂಗನಾಥ್, ರೇಷ್ಮಾ, ಪಲ್ಲವಿ ಕೊಸಗಿ, ರೇಣುಕಾ ಎಸ್, ಗಂಗಾ ವಿದ್ಯಾಸಾಗರ್, ಇಂದಿರಾ ಕೆ, ಕಾವೇರಿ ಪೋತ್ನಾಳ್, ಭಾರತಿ ಹಾಗೂ ಯಶೋಧ ವೈ ಕೆ ತಮ್ಮ ಕವನ ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕಿ ಹಾಗೂ ಸಾಹಿತಿಗಳಾದ ಡಾ. ಪದ್ಮಜಾ ದೇಸಾಯಿ ವಹಿಸಿಕೊಂಡು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಡಾ. ಶಂಕುತಲ ಗೋಪಶೆಟ್ಟಿ, ಲಲಿತಾ ಬಸನಗೌಡ, ದಾನಮ್ಮ ಅವರು ಉಪಸ್ಥಿತರಿದ್ದರು.

ನಿರೂಪಣೆಯನ್ನು ಡಾ. ರೇಖಾ ಪಾಟೀಲ್ ಹಾಗೂ ಪ್ರತಿಭಾ ಗೋನಾಳ ನಿರ್ವಹಿಸಿದರು.

ಸ್ವಾಗತವನ್ನು ವೈಶಾಲಿ ಪಾಟೀಲ್, ವಂದನಾರ್ಪಣೆಯನ್ನು ಡಾ. ವಿಜಯಕುಮಾರಿ ನೆರವೇರಿಸಿದರು.

ಒಟ್ಟಾರೆ 43 ಜನ ಮಹಿಳಾ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚಿಸಿದರು. ಬಿಇಓ ಈರಣ್ಣ ಕೋಸಗಿ, ಇಂದಿರಾ ಹಾಗೂ ವಾರ್ತಾ ಇಲಾಖೆಯ ಗವಿಸಿದ್ದಪ್ಪ ಅವರು ಪ್ರಮಾಣ ಪತ್ರ ವಿತರಿಸಿದರು.

Comments

Popular posts from this blog