ಜಿಲ್ಲಾ ಉತ್ಸವ ಕಡೆಯ ದಿನ: ಕೃಷಿ ,ಆಹಾರ, ಗ್ಯಾರಂಟಿ, ಮತ್ಸ್ಯ ಮೇಳ, ಫಲ ಪುಷ್ಪ ಪ್ರದರ್ಶನ ವೀಕ್ಷಿಸಲು ಜನ ಜಂಗುಳಿ. ಜಯ ಧ್ವಜ ನ್ಯೂಸ್ , ರಾಯಚೂರು, ಫೆ.7- ಮೂರು ದಿನಗಳ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಇಂದು ತೆರೆ ಬೀಳಲಿದ್ದು ಉತ್ಸವದ ಕಡೆಯ ದಿನವಾದ ಇಂದು ಕೃಷಿ ವಿವಿ ಮುಖ್ಯ ವೇದಿಕೆ ಬಳಿ ಸ್ಥಾಪಿತವಾದ ಆಹಾರ ಮೇಳ, ಕೃಷಿ ಮೇಳ ಮತ್ಸ್ಯ ಮೇಳ, ಗ್ಯಾರಂಟಿ ಮೇಳ, ಫಲ ಪುಷ್ಪ ಪ್ರದರ್ಶನ ಸೇರಿದಂತೆ ಕರ ಕುಶಲ ಮತ್ತು ಬಟ್ಟೆ, ಇತರೆ ವಸ್ತುಗಳ ಖರೀದಿ ಭರಾಟೆಯಲ್ಲಿ ಜನತೆ ತೊಡಗಿದ್ದು ಕಂಡುಬಂದಿತು. ಕೃಷಿ ವಿವಿ ಆವರಣ ಜನರಿಂದ ಕಿಕ್ಕಿರಿದು ಜನ ಜಂಗುಳಿ ಏರ್ಪಟ್ಟಿತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮಗಳ ಜನರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾ ಉತ್ಸವಕ್ಕೆ ಸಾಕ್ಷಿಯಾದರು.
ವಿಶೇಷವಾಗಿ ಫಲ ಪುಷ್ಪ ಪ್ರದರ್ಶನದಲ್ಲಿ ರಾಯಚೂರು ಕೋಟೆ, ಹಟ್ಟಿ ಚಿನ್ನದ ಗಣಿ, ವಿಕ್ರಾಂತ ವಾಯು ಸೇನಾ ಹಡಗು, ಜ್ಞಾನ ಪೀಠ ಪುರಸ್ಕೃತರ ಭಾವಚಿತ್ರ , ಸಾಲುಮರದ ತಿಮ್ಮಕ್ಕ, ಪುನೀತ್ ರಾಜಕುಮಾರ್ ಮುಂತಾದ ಮಹನೀಯರ ಭಾವಚಿತ್ರ ಹಣ್ಣುಗಳಲ್ಲಿ ಮೂಡಿ ಬಂದಿತು.
ಮತ್ಸ್ಯ ಮೇಳದಲ್ಲಿ ವಿವಿಧ ಬಗೆಯ ಮೀನುಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ನೋಡಿ ಆನಂದ ಪಟ್ಟರು. ಆಹಾರ ಮೇಳದಲ್ಲಿ ನೂರಾರು ಮಳಿಗೆಗಳಲ್ಲಿ ವಿವಿಧ ಬಗೆಯ ಖಾದ್ಯಗಳು ಬಾಯಲ್ಲಿ ನೀರೂರಿಸಿದವು.
ಕೃಷಿ ಮೇಳದಲ್ಲಿ ಕೃಷಿ ಪರಿಕರಗಳು, ನೀರಾವರಿ ಮಾದರಿ, ಕೀಟನಾಶಕ, ಟ್ರ್ಯಾಕ್ಟರ್, ಟಿಲ್ಲರ್ ಮುಂತಾದ ಕೃಷಿ ಸಂಬಂಧಿತ ಮಳಿಗೆಗಳಲ್ಲಿ ರೈತರು ಸುಧಾರಿತ ಕೃಷಿ ತಂತ್ರಜ್ಞಾನದ ಮಾಹಿತಿ ಪಡೆದರು. ಮತ್ತೊಂದೆಡೆ ಸರ್ಕಾರದ ಪಂಚ ಗ್ಯಾರಂಟಿ ಮೇಳದಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ರಾಜ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ ಉದ್ಘಾಟಿಸಿದರು. ಪಂಚ ಗ್ಯಾರಂಟಿಗಳ ಕುರಿತು ಮಾತನಾಡಿದರು.
ಒಟ್ಟಾರೆ ಮೂರು ದಿನ ಉತ್ಸವದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.
ಸಾಯಿಂಕಾಲ ಮುಖ್ಯ ವೇದಿಕೆಯಲ್ಲಿ ಸಂಗೀತ, ನೃತ್ಯ, ಅಂತಾರಾಷ್ಟ್ರೀಯ ಖ್ಯಾತಿ ಗಾಯಕ ವಿಜಯಪ್ರಕಾಶರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಭಾಗಿಯಾಗಲಿದ್ದಾರೆ.






Comments
Post a Comment