ಸ್ವರಾಜ್ಯದ ಸಿಂಹಗರ್ಜಕ - ಛತ್ರಪತಿ ಶಿವಾಜಿ ಮಹಾರಾಜರು


ಭಾರತ ಭೂಖಂಡವು ಅನೇಕ ವೀರರ, ಮಹನೀಯರ, ಧರ್ಮಪರರ ಜನ್ಮಭೂಮಿ. ಧೈರ್ಯ, ಧರ್ಮನಿಷ್ಠೆ, ಸ್ವಾಭಿಮಾನ ಮತ್ತು ಪ್ರಜಾಹಿತ ಚಿಂತನೆಗಳನ್ನು ಒಟ್ಟುಗೂಡಿಸಿಕೊಂಡ ಮಹಾನ್ ರಾಜರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ಜೀವನವೇ ಒಂದು ಆದರ್ಶ ಗಾಥೆ. ಶಿವಾಜಿ ಮಹಾರಾಜರು ಶತ್ರುಗಳ ಎದುರು ನಿಂತ ಧೈರ್ಯಶಾಲಿ ಯೋಧರು. ಇವರು 1630ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಶಿವನೇರಿ ಕೋಟೆಯಲ್ಲಿ  ಜನಿಸಿದರು. ಅವರ ತಂದೆ ಶಾಹಾಜಿ ಭೋಸಲೆ ಮತ್ತು ತಾಯಿ ಜಿಜಾಬಾಯಿ. ಬಾಲ್ಯದಿಂದಲೇ ಶಿವಾಜಿ ಕಷ್ಟ, ಸಹನಶೀಲ ಪರಿಸರದಲ್ಲಿ ಬೆಳೆದವರು. ಕೋಟೆಯ ಗಟ್ಟಿಯಾದ ಗೋಡೆಗಳ ನಡುವೆ ಹುಟ್ಟಿದ ಆ ಬಾಲಕನ ಮನಸ್ಸು ಕೂಡ ಅದೇ ರೀತಿ ದೃಢವಾಗಿತ್ತು. ಶಿವಾಜಿಯ ಬಾಲ್ಯ ಕೇವಲ ಬಾಲ್ಯವಲ್ಲ, ಅದು ಒಂದು ಮಹಾನ್ ನಾಯಕರ ರೂಪುಗೊಳ್ಳುವ ಪ್ರಕ್ರಿಯೆ. ತಾಯಿ ಸಂಸ್ಕಾರ, ಗುರುಗಳ ಮಾರ್ಗದರ್ಶನ, ಕಠಿಣ ಪರಿಸರ ಮತ್ತು ದೇಶಭಕ್ತಿಯ ಪ್ರೇರಣೆ – ಇವೆಲ್ಲವು ಸೇರಿ ಶಿವಾಜಿಯನ್ನು ಭವಿಷ್ಯದ ಮಹಾನ್ ರಾಜನನ್ನಾಗಿ ರೂಪಿಸಿತು.


ಶಿವಾಜಿಯ ವ್ಯಕ್ತಿತ್ವ ರೂಪುಗೊಳ್ಳಲು ತಾಯಿ ಜಿಜಾಬಾಯಿಯ ಪಾತ್ರ ಅಪಾರ. ಅವರು ರಾಮಾಯಣ, ಮಹಾಭಾರತದ ವೀರಗಾಥೆಗಳನ್ನು ಹೇಳಿ ದೇಶಭಕ್ತಿ ಮತ್ತು ಧರ್ಮನಿಷ್ಠೆಯ ಬೀಜ ಬಿತ್ತಿದವರು. ಜಿಜಾಬಾಯಿ ತಮ್ಮ ಮಗನಲ್ಲಿ “ಸ್ವರಾಜ್ಯ” ಎಂಬ ಕನಸನ್ನು ನೆಟ್ಟು ಬೆಳೆಸಿದರು. ಬಾಲ ಶಿವಾಜಿಯ ಹೃದಯದಲ್ಲಿ ದೇಶದ ಸ್ವಾತಂತ್ರ್ಯದ ಆಲೋಚನೆ ಇದೇ ಸಂದರ್ಭದಲ್ಲಿ ಮೂಡಿತು. ಶಿವಾಜಿಯ ಶಿಕ್ಷಣ ಮತ್ತು ಶಸ್ತ್ರಾಭ್ಯಾಸಕ್ಕೆ ದಾದಾಜಿ ಕೊಂಡದೇವರು ಪ್ರಮುಖ ಗುರುಗಳಾಗಿದ್ದರು. ಕುದುರೆ ಸವಾರಿ, ಕತ್ತಿಯುದ್ಧ, ಬಾಣವಿದ್ಯೆ ಮುಂತಾದ ಯುದ್ಧ ಕಲೆಗಳನ್ನು ಬಾಲ್ಯದಲ್ಲಿಯೇ ಕಲಿಸಿದರು. ಇದರಿಂದ ಶಿವಾಜಿಯ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಗಟ್ಟಿಯಾಯಿತು. ಬಾಲ್ಯದಲ್ಲಿಯೇ ಶಿವಾಜಿ ತಮ್ಮ ಸ್ನೇಹಿತರ ಜೊತೆ ಕೋಟೆಗಳನ್ನು ನಿರ್ಮಿಸುವ ಆಟ ಆಡುತ್ತಿದ್ದರು. ಈ ಆಟವೇ ಮುಂದೆ ಕೋಟೆ ಜಯಿಸುವ ಸಾಹಸಕ್ಕೆ ಪ್ರೇರಣೆ ನೀಡಿತು ಎಂದು ಹೇಳಲು ಹೆಮ್ಮೆ ಇದೆ. ಅವರು ಒಬ್ಬ ಸಹಜ ಹಾಗೂ ಸರಳ ನಾಯಕತ್ವದ ಜೊತೆಗೆ ಸ್ನೇಹಿತರನ್ನು ಒಗ್ಗೂಡಿಸಿ ಕಾರ್ಯನಿರ್ವಹಿಸುವ ಗುಣ ಬಾಲ್ಯದಲ್ಲೇ ಕಾಣಬಹುದಾಗಿದೆ. ಮುಘಲ್ ಮತ್ತು ಆದಿಲ್ಷಾಹಿ ಆಡಳಿತದ ಅನ್ಯಾಯವನ್ನು ನೋಡಿದ ಶಿವಾಜಿ ಬಾಲ್ಯದಲ್ಲೇ ಅದನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಪ್ರಜೆಯ ಸಂಕಷ್ಟವನ್ನು ಕಂಡು ಅವರ ಮನಸ್ಸಿನಲ್ಲಿ ಸ್ವರಾಜ್ಯದ ಸಂಕಲ್ಪ ಬಲವತ್ತಾಯಿತು.“ಹಿಂದವಿ ಸ್ವರಾಜ್ಯ” ಎಂಬ ಘೋಷಣೆ ಶಿವಾಜಿಯ ಸ್ವಾಭಿಮಾನದ ಸಂಕೇತವಾಗಿ, ವಿದೇಶಿ ಆಳ್ವಿಕೆಯನ್ನು ಎದುರಿಸಿ ಸ್ವತಂತ್ರ ರಾಜ್ಯ ಸ್ಥಾಪಿಸಿದ ಅವರು, ಭಾರತೀಯರ ಆತ್ಮಗೌರವವನ್ನು ಜಾಗೃತಗೊಳಿಸಿದರು. ಅವರ ಸ್ವರಾಜ್ಯ ಚಿಂತನೆ ಮುಂದಿನ ಸ್ವಾತಂತ್ರ್ಯ ಚಳವಳಿಗೂ ಸ್ಪೂರ್ತಿಯಾದುದು.

“ಸ್ವರಾಜ್ಯವೇ ನನ್ನ ಧರ್ಮ, ಪ್ರಜೆಯೇ ನನ್ನ ಕುಟುಂಬ” ಎಂಬ ಈ ತತ್ತ್ವವನ್ನು ಜೀವನದ ಮೂಲಕ ಸಾರಿದ ಮಹಾನ್ ನಾಯಕನು ಛತ್ರಪತಿ ಶಿವಾಜಿ ಮಹಾರಾಜರು. ಇವರ ಆಡಳಿತದಲ್ಲಿ ರೈತರಿಗೆ ರಕ್ಷಣೆ, ನ್ಯಾಯಯುತ ತೆರಿಗೆ ವ್ಯವಸ್ಥೆ ಮತ್ತು ಶಿಸ್ತಿನ ಆಡಳಿತವಿರುತ್ತಿತ್ತು. ಮಹಿಳೆಯರ ಗೌರವ ಕಾಪಾಡುವುದು, ಯುದ್ಧದಲ್ಲಿ ಸಿಕ್ಕವರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಇವೆಲ್ಲವು ಅವರ ಮಾನವೀಯ ಗುಣಗಳನ್ನು ತೋರಿಸುತ್ತವೆ. ಅವರು ಪ್ರಜೆಯನ್ನು ಕುಟುಂಬವೆಂದು ಕಂಡ ರಾಜ.ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ, ಶೌರ್ಯ, ಧರ್ಮನಿಷ್ಠೆ ಮತ್ತು ಪ್ರಜಾಹಿತದ ಸಂಕೇತವಾಗಿ ಬೆಳಗಿದ ಈ ಮಹಾಪುರುಷರ ಮಹಿಮೆ ಅನಂತ. ಇವರ ತಾಯಿ ಅವರ ಧಾರ್ಮಿಕ ಚಿಂತನೆ ಮತ್ತು ದೇಶಭಕ್ತಿಯ ಬೀಜಗಳು ಬಾಲಶಿವಾಜಿಯ ಮನಸ್ಸಿನಲ್ಲಿ ಸ್ವರಾಜ್ಯದ ಕನಸನ್ನು ಬೆಳೆಸಿದವು. ರಾಮಾಯಣ–ಮಹಾಭಾರತದ ವೀರಗಾಥೆಗಳು ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿದವು.


 1645ರಲ್ಲಿ ತೋರಣಗಡ ಕೋಟೆಯನ್ನು ಸ್ವಾಧೀನಪಡಿಸಿಕೊಂಡುದು ಶಿವಾಜಿಯ ಸ್ವರಾಜ್ಯ ಚಳವಳಿಯ ಮೊದಲ ಹೆಜ್ಜೆ. ಅಂದಿನ ಕಾಲದಲ್ಲಿ ಮುಘಲ್ ಮತ್ತು ಆದಿಲ್ಷಾಹಿ ಆಡಳಿತದ ದೌರ್ಜನ್ಯಗಳ ನಡುವೆ, ಯುವ ಶಿವಾಜಿ ಧೈರ್ಯದಿಂದ ಸ್ವತಂತ್ರ ರಾಜ್ಯದ ಕನಸಿಗೆ ರೂಪ ನೀಡಿದರು.1659ರಲ್ಲಿ ಅಫಝಲ್ ಖಾನ್‌ ಜೊತೆಗಿನ ಮುಖಾಮುಖಿಯಲ್ಲಿ ಶಿವಾಜಿ  ತೀಕ್ಷ್ಣ ಬುದ್ಧಿವಂತಿಕೆ ಮತ್ತು ಅಪಾರ ಧೈರ್ಯ ತೋರಿದವರು. ವಾಘ್‌ನಖ್ ಬಳಸಿ ಆತ್ಮರಕ್ಷಣೆ ಮಾಡಿಕೊಂಡು ಶತ್ರುವನ್ನು ಸೋಲಿಸಿದರು. ಈ ಘಟನೆ ಶಿವಾಜಿಯ ತಂತ್ರಜ್ಞಾನ ಮತ್ತು ಚಾತುರ್ಯದ ಉದಾಹರಣೆಯಾಗಿದೆ. ಮುಘಲ್ ಸಾಮ್ರಾಟ್ ಔರಂಗಜೇಬ್ ಅವರ ದರ್ಬಾರಿನಲ್ಲಿ ಆಗ್ರಾದಲ್ಲಿ ಬಂಧನಕ್ಕೊಳಗಾದರೂ, ಶಿವಾಜಿ ತನ್ನ ಕುಶಲತೆಯಿಂದ ತಮಗೆ ರಕ್ಷಣೆ ಮಾಡಿಕೊಂಡು ಪಾರಾದರು. ಹಣ್ಣುಗಳ ಬುಟ್ಟೆಯಲ್ಲಿ ಹೊರಬಂದ ಘಟನೆ ಇತಿಹಾಸದಲ್ಲೇ ಅದ್ಭುತವಾದ ಸಾಹಸ ಮತ್ತು ಪ್ರಶಂಸನೀಯ ಎಂದು  ಹೇಳಬಹುದು. 1674ರಲ್ಲಿ ರಾಯಗಡದಲ್ಲಿ ಶಿವಾಜಿಯ ರಾಜ್ಯಾಭಿಷೇಕ ನೆರವೇರಿತು. ಈ ಸಂದರ್ಭದಲ್ಲಿ “ಹಿಂದವಿ ಸ್ವರಾಜ್ಯ” ಎಂಬ ಘೋಷಣೆ ದೇಶದಾದ್ಯಂತ ಹೊಸ ಚೈತನ್ಯ ಮೂಡಿಸಿತು. ಪ್ರಜೆಗಳಿಗೆ ನ್ಯಾಯ, ಸಮಾನತೆ ಮತ್ತು ಭದ್ರತೆ ನೀಡುವ ಆಡಳಿತವನ್ನು ಕೂಡ ಅವರು ಸ್ಥಾಪಿಸಿದರು.ಶಿವಾಜಿಯ ಆಡಳಿತ ಧರ್ಮಾಧಾರಿತವಾಗಿದ್ದರೂ ಅದು ಸಹಿಷ್ಣುತೆಯಿಂದ ಕೂಡಿತ್ತು. ಎಲ್ಲಾ ಧರ್ಮದವರಿಗೂ ಸಮಾನ ಗೌರವ ನೀಡಿದರು. ದೇವಾಲಯಗಳಷ್ಟೇ ಅಲ್ಲ, ಮಸೀದಿಗಳಿಗೂ ರಕ್ಷಣೆ ನೀಡಿದ ಉದಾರ ಮನಸ್ಸು ಅವರದ್ದಾಗಿತ್ತು.“ರಾಜನ ಧರ್ಮ ಪ್ರಜೆಯ ರಕ್ಷಣೆ” ಎಂಬ ನಂಬಿಕೆಯನ್ನು ಅವರು ಜೀವನದಲ್ಲಿ ಅನುಸರಿಸಿದರು.ಶಿವಾಜಿಯ ಆಡಳಿತದಲ್ಲಿ ಮಹಿಳೆಯರ ಗೌರವಕ್ಕೆ ವಿಶೇಷ ಮಹತ್ವ. ಯುದ್ಧದಲ್ಲಿ ಸಿಕ್ಕ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸುವುದು ಅವರ ಆದರ್ಶ. ಇದು ಅವರ ಉನ್ನತ ನೈತಿಕತೆಯ ಸಂಕೇತವಾಗಿತ್ತು.ಬಾಲ್ಯದಲ್ಲೇ ಬಿತ್ತಿದ ಮೌಲ್ಯಗಳು ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಶಿವಾಜಿಯ ಬಾಲ್ಯ ಜೀವನ ನಮಗೆ ಧೈರ್ಯ, ಶಿಸ್ತು, ದೇಶಭಕ್ತಿ ಮತ್ತು ದೃಢನಿಶ್ಚಯದ ಪಾಠ ನೀಡುತ್ತದೆ. ಭಾರತದ ಮೊದಲ ಸಮರ್ಥ ನೌಕಾಪಡೆಯನ್ನು ನಿರ್ಮಿಸಿದ ರಾಜನು ಶಿವಾಜಿ ಮಹಾರಾಜರು ಎಂದು ಹೆಮ್ಮೆಯಿಂದ ಹೇಳಬಹುದು ಸಮುದ್ರ ಮಾರ್ಗದ ಶತ್ರುಗಳಿಂದ ರಕ್ಷಣೆಗಾಗಿ ಕಡಲಕೋಟೆಗಳನ್ನು ನಿರ್ಮಿಸಿದ್ದುದು  ಅವರ ದೂರದೃಷ್ಟಿಯ ಸಾಕ್ಷಿಯಾಗಿದೆ ಎಂದರೆ ತಪ್ಪಾಗಲಾರದು.        ಶಿವಾಜಿಯ ಆಡಳಿತದಲ್ಲಿ “ಅಷ್ಟಪ್ರಧಾನ ಮಂಡಳಿ” ಪ್ರಮುಖರಲ್ಲಿ ಪೇಶ್ವಾ, ಅಮಾತ್ಯ, ಮಂತ್ರಿ, ಸೇನಾಪತಿ ಮುಂತಾದ ಹುದ್ದೆಗಳು ರಾಜ್ಯಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದವು. ಪ್ರಜಾಹಿತವೇ ಅವರ ಆಡಳಿತದ ಮೂಲಭೂತ ಸಿದ್ಧಾಂತವಾಗಿತ್ತು.ಧೈರ್ಯ ಮತ್ತು ತಂತ್ರಜ್ಞಾನ, ಧರ್ಮನಿಷ್ಠೆ ಮತ್ತು ಸಹಿಷ್ಣುತೆ, ಪ್ರಜಾಹಿತ ಚಿಂತನೆ, ಮಹಿಳಾ ಗೌರವ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಪ್ರೇಮ ಇವೆಲ್ಲವೂ ಶಿವಾಜಿಯ ವಿಶಿಷ್ಟವಾದ ವ್ಯಕ್ತಿತ್ವವನ್ನು ಹೊಂದಿದ್ದವು. 

ಶಿವಾಜಿ ಕೇವಲ ಯೋಧನಲ್ಲ, ಒಬ್ಬ ದೃಷ್ಟಿವಂತ ನಾಯಕನಾಗಿದ್ದನು.  ಅವರ ಜೀವನದ ಪ್ರತಿಯೊಂದು ಘಟನೆಗಳು ಸ್ವಾಭಿಮಾನ, ಧೈರ್ಯ ಮತ್ತು ನ್ಯಾಯದ ಪಾಠವನ್ನು ಸಾರುತ್ತದೆ. ಕೊನೆಯದಾಗಿ ಹೇಳುವುದಾದರೆ ಬಾಲ್ಯದ ಸಂಸ್ಕಾರವೇ ಭವಿಷ್ಯದ ವ್ಯಕ್ತಿತ್ವದ ಅಡಿಪಾಯ.ಬದುಕಿನ ಉದ್ದವಲ್ಲ, ಅದರ ಉದ್ದೇಶವೇ ಮಹತ್ವ ಎಂಬಂತೆ, ಶಿವಾಜಿಯ ಬದುಕು ಸ್ವರಾಜ್ಯದ ಕನಸಿಗೆ ಅರ್ಪಿತವಾಗಿತ್ತು. ಅವರ ಮಹಿಮೆ ಇಂದಿಗೂ ಜೀವಂತವಾಗಿ ಅವರ ಜೀವನವು ಯುವಜನತೆಗೆ ಸ್ಪೂರ್ತಿದಾಯಕ ದೀಪಸ್ತಂಭವಾಗಿದೆ ಎಂದು ಹೇಳಲು ಗರ್ವ ಎನಿಸುತ್ತದೆ. ಛತ್ರಪತಿ ಶಿವಾಜಿ ಮಹಾರಾಜರು ಭಾರತೀಯ ಇತಿಹಾಸದ ಅಮರ ನಾಯಕ. ಅವರ ಆದರ್ಶಗಳು ಸದಾಕಾಲ ನಮ್ಮ ಹೃದಯದಲ್ಲಿ ಬೆಳಗುತ್ತಿರಲಿ ಎಂದು ಆಶಿಸುತ್ತೇನೆ.

ಜೈ ಭವಾನಿ…..! ಜೈ ಶಿವಾಜಿ…..!


- ಲೇಖಕರು: ಅಂಬಾಜಿ ರಾವು ಮೈದರ್ಕರ್,ರಾಯಚೂರು.

ಸಮಾಜ ಸೇವಕರು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಭಕ್ತ.

Comments

Popular posts from this blog