ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಪ್ರಚಾರ ಸಭೆ: ಡಾ.ಭಾನುಪ್ರಕಾಶ ಶರ್ಮಾ ಬ್ರಾಹ್ಮಣ ಮಹಾಸಭೆಯ ಯೋಗಿ ಆದಿತ್ಯನಾಥ ಇದ್ದಂತೆ - ಸಚ್ಚಿದಾನಂದ ಮೂರ್ತಿ. ಜಯ ಧ್ವಜ ನ್ಯೂಸ್ ರಾಯಚೂರು, ಏ.9- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಗೆ ಡಾ.ಭಾನುಪ್ರಾಕಾಶ ಶರ್ಮಾ ಯೋಗಿ ಆದಿತ್ಯನಾಥ್ ಇದ್ದಂತೆ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಅಭಿಪ್ರಾಯಪಟ್ಟರು. ಅವರಿಂದು ನಗರದ ಸಾವಿತ್ರಿ ಕಾಲೋನಿಯ ಜೋಡು ವೀರಾಂಜನೇಯ ದೇವಸ್ಥಾನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಅಧ್ಯಕ್ಷ ಹಾಗು ಜಿಲ್ಲಾ ಪ್ರತಿನಿಧಿ ಪರ ಪ್ರಾಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿ ವೇದಮೂರ್ತಿ ಡಾ.ಭಾನುಪ್ರಕಾಶ ಶರ್ಮಾ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು ಅವರು ಒಂದು ರೀತಿಯಲ್ಲಿ ಬ್ರಾಹ್ಮಣ ಮಹಾಸಭೆಗೆ ಯೋಗಿ ಆದಿತ್ಯನಾಥ್ ಇದ್ದಂತೆ ಎಂದು ಅಭಿಪ್ರಾಯ ಪಟ್ಟರು. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಒಬ್ಬ ಸನ್ಯಾಸಿಯಾಗಿದ್ದಾರೆ ಅವರು ಏನು ಆಡಳಿತ ಮಾಡುತ್ತಾರೆ ಎಂದು ಅನೇಕರು ಉಡಾಫೆಯಾಗಿ ಮಾತನಾಡಿದ್ದರು ಆದರೆ ಅವರು ಮುಂದಿನ ಪ್ರದಾನಿ ಎನ್ನುವಷ್ಟರ ಮಟ್ಟಿಗೆ ದಕ್ಷ ಆಡಳಿತಗಾರರಾಗಿದ್ದಾರೆ, ಇತ್ತೀಚೆಗೆ ಅಭೂತಪೂರ್ವವಾಗಿ ಕುಂಭ ಮೇಳ ಆಯೋಜಿಸಿ ವಿಶ್ವಮನ್ನಣೆ ಗಳಿಸಿದ್ದಾರೆ ವ್ಯಕ್ತಿಯ ವೇಷ ಭೂಷಣ ನೋಡಿ ಆತನ ವ್ಯಕ್ತಿತ್ವ ಅಳಿಯಬಾರದು ಆತನ ಕಾರ್ಯ ನೋಡಬೇಕು ಡಾ.ಭಾನುಪ್ರಕಾಶ ವೈದಿಕ ವೃತ್ತಿಯಲ್ಲಿದ್ದರೂ ಅವರು ಒಬ್ಬ ಜನಾನುರಾಗಿ ವ್ಯಕ್ತಿಯಾಗಿದ್ದಾರೆ ಹಿಂದಿನ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಉತ್ತಮ ವ್ಯಕ್ತಿಯನ್ನು ಸೂಚಿಸಿದ್ದಾರೆ ಡಾ.ಭಾನುಪ್ರಕಾಶ ಕರೋನಾ ಸಂದರ್ಭದಲ್ಲಿ ಸಾವಿರಾರು ಅನಾಥ ಶವಗಳಿಗೆ ಮುಕ್ತಿ ನೀಡಿದ್ದಾರೆ ಅವರ ಬಗ್ಗೆ ಪ್ರಾದಾನಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು. ನಾನು ಕಳೆದ ಚುನಾವಣೆಯಲ್ಲಿ ಅಶೋಕ್ ಹಾರನಹಳ್ಳಿ ವಿರುಧ್ಧ ಚುನಾವಣೆ ನಡೆಸಿದ್ದೆ ಅವರು ನನಗೆ ಸಹೋದರ ಸಂಬಂಧಿಯಾಗಬೇಕು ನನಗೆ ತಪ್ಪು ಕಲ್ಪನೆ ಆ ರೀತಿ ಮಾಡಿತ್ತು ನಂತರ ನನ್ನ ತಪ್ಪಿನ ಅರಿವಾಯಿತು ಅಶೋಕ್ ಹಾರನಹಳ್ಳಿ ಬಂದ ನಂತರ ಬ್ರಾಹ್ಮಣ ಮಹಾಸಭೆ ಕಛೇರಿ ಸುಣ್ಣ ಬಣ್ಣ ಕಂಡಿದೆ, ಮಾದರಿ ಸುವರ್ಣ ಮಹೋತ್ಸವ ಕಾರ್ಯಕ್ರಮ ನೇರವೇರಿದೆ, ಲಕ್ಷಾಂತರ ಜನರು ಸಾಕ್ಷಿಯಾಗಿದ್ದಾರೆ ಕೋಟ್ಯಾಂತರ ರೂ.ವೆಚ್ಚದಲ್ಲಿ ಸುವರ್ಣ ಭವನಕ್ಕೆ ಅಡಿಗಲ್ಲು ಹಾಕಲಾಗಿದೆ ಅಲ್ಲದೆ ಮಹಾಸಭೆ ಖಾತೆಯಲ್ಲಿ ಕೋಟ್ಯಾಂತರ ರೂ. ಠೇವಣಿಯಿಡುವ ಮೂಲಕ ಮಹಾಸಭೆಗೆ ಆರ್ಥಿಕ ಶಕ್ತಿ ತುಂಬಲಾಗಿದೆ ಎಂದರು.
ನಮ್ಮ ಶಕ್ತಿ ಸಂಘಟನೆ ಹೆಚ್ಚಬೇಕು ಸುಮಾರು 22 ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣರು ನಿರ್ಣಾಯಕರಾಗಿದ್ದಾರೆ . ಕಾಂತರಾಜ್ ವರದಿಯನ್ವಯ ನಮ್ಮ ಜನಸಂಖ್ಯೆ 12 ಲಕ್ಷವೆಂದು ನಮೂದಾಗಿದೆ ವಾಸ್ತವದಲ್ಲಿ ನಲವತ್ತು ಲಕ್ಷ ಮೇಲ್ಪಟ್ಟು ನಮ್ಮ ಜನ ಸಂಖ್ಯೆಯಿದೆ ಎಂದರು. ಈ ಬಾರಿ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಡಾ.ಭಾನುಪ್ರಕಾಶ ಹಾಗೂ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಎಬಿವಿಪಿ ಹಾಗೂ ಉತ್ತಮ ಮನೆತನದ ಹಿನ್ನೆಲೆಯಿರುವ ಉತ್ಸಾಹಿ ಯುವಕ ರಮೇಶ್ ಕುಲಕರ್ಣಿಯವರನ್ನು ಚುನಾಯಿತ ರನ್ನಾಗಿ ಮಾಡಿ ವಿರೋಧಿಗಳ ಸುಳ್ಳು ಆರೋಪಕ್ಕೆ ಕಿವಿಗೊಡದಿರಿ ಸನಾತನ ಧರ್ಮ ಉಳಿಯಬೇಕೆಂದರೆ ಬ್ರಾಹ್ಮಣತ್ವ ಉಳಿಯಬೇಕೆಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಜಗದೀಶ್ ಹುನಗುಂದ ಮಾತನಾಡಿ ರಾಜ್ಯಾದ್ಯಂತ ಬ್ರಾಹ್ಮಣರ ಸ್ಥಿತಿ ಗತಿ ಬಗ್ಗೆ ಸಚ್ಚಿದಾನಂದ ಮೂರ್ತಿ ಹಾಗು ಅಶೋಕ್ ಹಾರನಹಳ್ಳಿಯವರು ಅರಿತಿದ್ದಾರೆ ಮತದಾರು ಅವರ ಬಣದ ಅಭ್ಯರ್ಥಿಗೆ ಮತ ನೀಡಬೇಕೆಂದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಪವನ್ ಕುಮಾರ್ ಮಾತನಾಡಿ ನಾನು ಹುಟ್ಟಿದ್ದು ರಾಯಚೂರು ನಗರದ ಕೋಟೆ ಪ್ರದೇಶದಲ್ಲಿ ನಾನು ಇಲ್ಲಿನ ವಿಪ್ರರ ಸಂಘಟನೆ ಬಗ್ಗೆ ಹೆಮ್ಮೆ ಪಡುತ್ತೇನೆ ಯುವಕ ರಮೇಶ್ ರನ್ನು ಗೆಲ್ಲಿಸಿ ಎಂದರು. ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕಿ ವತ್ಸಲಾ ನಾಗೇಶ ಮಾತನಾಡಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮೂಲಕ ಸಚ್ಚಿದಾನಂದ ಮೂರ್ತಿ ಉತ್ತಮ ಕಾರ್ಯಮಾಡಿದ್ದಾರೆ ಕರೋನಾ ವೇಳೆ ಅನೇಕ ಸಮಾಜ ಮುಖಿ ಕಾರ್ಯ ಮಾಡಿದ್ದಾರೆ ಬಡ ಬ್ರಾಹ್ಮಣರಿಗೆ ಕಿಟ್ ವಿತರಿಸಿದ್ದಾರೆ ಎಂದ ಅವರು ಅದೇ ರೀತಿಯಲ್ಲಿ ಅಶೋಕ್ ಹಾರನಹಳ್ಳಿಯವರು ಸಹ ಬ್ರಾಹ್ಮಣರ ಏಳ್ಗೆಗೆ ಶ್ರಮ ವಹಿಸಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಾಜಿ ಸಂಚಾಲಕ ಡಿ.ಕೆ.ಮುರಳಿಧರ ಮಾತನಾಡಿ ಈ ಬಾರಿ ನಾನು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ನಿಲ್ಲುವ ಹಂಬಲ ವ್ಯಕ್ತಪಡಿಸಿದ್ದೆ ಆದರೆ ಯುವಕರು ಮುಂದೆ ಬರಬೇಕೆಂಬ ಸದುದ್ದೇಶದಿಂದ ರಮೇಶ್ ಕುಲಕರ್ಣಿಗೆ ಅವಕಾಶ ನೀಡಲಾಗಿದೆ ಈಗಾಗಲೆ ನಮ್ಮ ಅವಧಿಯಲ್ಲಿ ವಿದ್ಯಾನಿಧಿ ಮೂಲಕ ಬಡ ವಿಪ್ರ ಮಕ್ಕಳಿಗೆ ಆರ್ಥಿಕ ಸಹಾಯ, ಪ್ರತಿ ವರ್ಷ ವಿಪ್ರ ಶ್ರೀ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ ಯಾರ ಬಳಿ ಹಣಕ್ಕಾಗಿ ಅಂಗಲಾಚಿಲ್ಲವೆಂದ ಅವರು ನಗರದಲ್ಲಿ ಗಾಯಿತ್ರಿ ಭವನ ಸಜ್ಜಾ ಹಂತಕ್ಕೆ ಬಂದಿದೆ ಅದನ್ನು ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರದಿಂದ ಪೂರ್ಣಗೊಳಿಸಲಾಗುತ್ತದೆ ಎಂದರು. ನಿರ್ಗತಿಕ ವೃದ್ಧರಿಗೆ ವೃದ್ಧಾಶ್ರಮ, ಬಡ ವಯಸ್ಸಾದ ಮಹಿಳೆಯರಿಗೆ ಪಿಂಚಣಿ ಮುಂತಾದ ಯೋಜನೆ ರೂಪಿಸಲಾಗುತ್ತದೆ ಎಂದ ಅವರು ನಾವು ಮಠಬೇಧ ಮಾಡದೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ರಾಜಕಾರಣಿಗಳು ನಮ್ಮನ್ನು ಪರಿಗಣಿಸಬೇಕೆಂದರೆ ನಮ್ಮ ಬಳಿ ಮತ ಬ್ಯಾಂಕ್ ಗಟ್ಟಿಗೊಳ್ಳಬೇಕೆಂದರು.
ಜಿಲ್ಲಾ ಪ್ರತಿನಿಧಿ ಅಭ್ಯರ್ಥಿ ರಮೇಶ್ ಕುಲಕರ್ಣಿ ಮಾತನಾಡಿ ನನಗೆ ಒಂದು ಬಾರಿ ಅವಕಾಶ ನೀಡಿ ನಾನು ಆಯ್ಕೆಯಾದ ಶೀಘ್ರದಲ್ಲಿಯೇ ಸುಮಾರು 10 ಸಾವಿರ ಸದಸ್ಯತ್ವ, ಉದ್ಯೋಗ ಮೇಳ, ಗಾಯಿತ್ರಿ ಭವನ ಪೂರ್ಣಗೊಳಿಸುವುದು ಮುಂತಾದ ಯೋಜನೆ ಹಮ್ಮಿಕೊಂಡಿದ್ದೇನೆ ಎಂದರು.
ಪ್ರಾಣೇಶ್ ಮುತಾಲಿಕ್ ಸ್ವಾಗತಿಸಿದರು. ವಿನೋದ ಸಾಗರ್ ನಿರೂಪಿಸಿದರು. ಆನಂದ ಫಡ್ನಿಸ್ ವಂದಿಸಿದರು. ವೇಣುಗೋಪಾಲ್ ವರಪ್ ಪ್ರಾರ್ಥಿಸಿದರು. ವೇದಿಕೆ ಮೇಲೆ ಶಾಮಾಚಾರ್ ಗಾಣಧಾಳ್, ಡಾ.ರವಿ ಮುಜುಂದಾರ್, ಅರವಿಂದ್ ಕುಲಕರ್ಣಿ, ರಾಘವೇಂದ್ರ ಚೂಡಾಮಣಿ, ಸುಚಿತ್, ಶ್ರೀನಿವಾಸ್, ರಾಮರಾವ್ ಗಣೇಕಲ್,ಸುಧೀಂದ್ರ ಜಾಗಿರದಾರ್, ಪ್ರಹಲ್ಲಾದರಾವ್ ಕಲ್ಮಲಾ, ವಿಜಯರಾವ ಕುಲಕರ್ಣಿ, ಹನುಮೇಶ ಸರಾಫ್, ವೆಂಕಟೇಶ್ ಕೋಲಾರ್ ಇನ್ನಿತರರು ಇದ್ದರು.









Comments
Post a Comment