ಮಹಾನಗರ ಪಾಲಿಕೆ ಕಚೇರಿಯಲ್ಲಿ ಗಣರಾಜ್ಯೋತ್ಸವ : ಆಯುಕ್ತರಾದ ಜುಬಿನ್ ಮೋಹಪಾತ್ರರಿಂದ ರಾಷ್ಟ್ರ ಧ್ವಜಾರೋಹಣ                                                    ಜಯ‌ಧ್ವಜ ನ್ಯೂಸ್  ,ರಾಯಚೂರು, ಜ. 26-

77 ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಳಗ್ಗೆ  ನಗರದ ಗಾಂಧಿ ವೃತ್ತದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಪೂಜೆ ಸಲ್ಲಿಸಿ  ನಂತರ 6-30 ಕ್ಕೆ ನಗರದ ಕ್ರೀಡಾಂಗಣದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿಗೆ ಪೂಜೆ ಸಲ್ಲಿಸಿ ಹೂ ಮಾಲೆ ಹಾಕಿದರು. ಮಹಾನಗರಪಾಲಿಕೆಯ ವಲಯ ಕಛೇರೀಗಳಲ್ಲಿ ಪಾಲಿಕೆ ಆಯುಕ್ತರಾದ  ಜುಬಿನ್ ಮೋಹಪಾತ್ರ  (ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಹಳೆಯ ನಗರಸಭೆ ಕಚೇರಿ) ಧ್ವಜಾರೋಹಣ ನೇರವೇರಿಸಿ  ಮಾತನಾಡಿ  ರಾಯಚೂರು ಮಹಾನಗರದ ಸಮಸ್ತ ಸಾರ್ವಜನಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಮಹತ್ವದ ದಿನ ಇದಾಗಿದೆ ಎಂದು ಹೇಳಿದರು.



ಭಾರತದ ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದ್ದು, ಆಡಳಿತಾಂಗ, ನ್ಯಾಯಾಂಗ, ಶಾಸನಾಂಗ ಸೇರಿದಂತೆ ಎಲ್ಲಾ ಪ್ರಾಧಿಕಾರಗಳು ಸಂವಿಧಾನದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು. ಸಂವಿಧಾನ ಶಿಲ್ಪಿಗಳ ಆದರ್ಶಗಳನ್ನು ಕೇವಲ ಸ್ಮರಣೆಗೆ ಸೀಮಿತಗೊಳಿಸದೆ, ಅವುಗಳನ್ನು ನಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಂವಿಧಾನ ರಚನಾ ಸಮಿತಿಯ ಮುಖ್ಯಸ್ಥರಾದ ಬಿ.ಎನ್. ರಾವ್ ಅವರು ಕರ್ನಾಟಕದ ಮಂಗಳೂರು ಮೂಲದವರಾಗಿದ್ದು, ಈ ವಿಷಯವನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದರು. ಸಂವಿಧಾನ ಕೇವಲ ಪುಸ್ತಕವಲ್ಲ, ಅದು ಭಾರತೀಯರ ಬದುಕಿನ ದಾರಿದೀಪವಾಗಿದೆ ಎಂದು ಹೇಳಿದರು.



ಸ್ವಾತಂತ್ರ್ಯ ನಂತರ ಕೇವಲ 76 ವರ್ಷಗಳಲ್ಲಿ ಭಾರತವು ಅಪಾರ ಪ್ರಗತಿಯನ್ನು ಸಾಧಿಸಿದ್ದು, ಇಂದು ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. ಚಂದ್ರಯಾನ ಹಾಗೂ ಮಂಗಳಯಾನ ಸೇರಿದಂತೆ ಹಲವು ಸಾಧನೆಗಳು ದೇಶದ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದರು. ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಒಂದು ವರ್ಷ ಪೂರೈಸಿದ್ದು, ಸಾರ್ವಜನಿಕರು, ಮಹಾನಗರಪಾಲಿಕೆ ಮತ್ತು ಮಾಧ್ಯಮಗಳ ಸಹಕಾರದಿಂದ ಸ್ವಚ್ಛ ನಗರ ನಿರ್ಮಾಣದತ್ತ ಪ್ರಗತಿ ಕಂಡಿದೆ. ಹಿಂದಿನ ವರ್ಷಗಳಲ್ಲಿ ದೇಶದ 820 ನಗರಗಳಲ್ಲಿ ರಾಯಚೂರು 819ನೇ ಸ್ಥಾನದಲ್ಲಿದ್ದರೂ, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ 100 ಅಥವಾ 50ನೇ ಸ್ಥಾನಕ್ಕೆ ತರುವುದೇ ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು. ರಾಯಚೂರು ಮಹಾನಗರವನ್ನು ಸ್ವಚ್ಛ, ಸುಂದರ ಹಾಗೂ ಹಸಿರು ನಗರವನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು ಮತ್ತು ಮಹಾನಗರಪಾಲಿಕೆಯ ವಿವಿದ ವಿಭಾಗದಲ್ಲಿ ಸಾಧನೆಗೈದ 25 ಸಿಬ್ಬಂದಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು ಹಾಗು ಮಹಾನಗರಪಾಲಿಕೆಯ ಕುಂದು ಕೊರತೆ ವಿಭಾಗ ಸಾರ್ವಜನಿಕ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಿ ಅತ್ಯುತ್ತಮ ಕೆಲಸ ನಿರ್ವಹಿಸುತಿರುವುದರಿಂದ  ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು.



ಈ ಸಂದರ್ಭದಲ್ಲಿ  ಪುರರಾಜ್ ಸಿಂಗ್ ಸೋಲಂಕಿ (ಭಾ.ಆ.ಸೆ),ಉಪ ಆಯುಕ್ತರು (ಕಂದಾಯ),  ಉಪ ಆಯುಕ್ತರು (ಆಡಳಿತ), ಉಪ ಆಯುಕ್ತರು (ಅಭಿವೃದ್ಧಿ), ಕೌನ್ಸಿಲ್ ಕಾರ್ಯದರ್ಶಿಗಳು, ವಲಯ ಆಯುಕ್ತರು, ಕಂದಾಯ ಅಧಿಕಾರಿಗಳು, ಮಹಾನಗರಪಾಲಿಕೆ ಸಿಬ್ಬಂದಿ, ನಿವೃತ್ತ ಸೇನಾ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments

Popular posts from this blog