ಜಿಲ್ಲಾಡಳಿತದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಜಯ ಧ್ವಜ ನ್ಯೂಸ್ , ರಾಯಚೂರು ಮಾ.1- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಯಚೂರು ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್ ಅವರು ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ರೇಣುಕಾಚಾರ್ಯರ ವಿಚಾರಧಾರೆಗಳು ಹಾಗೂ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಬಣಮಗಿಯ ಶ್ರೀ ರಾಚೋಟೇಶ್ವರ ಶಿವಾಚಾರ್ಯರು ಉಪನ್ಯಾಸ ನೀಡಿ, ಎಲ್ಲ ಧರ್ಮಗಳಿಗೆ ಆಶ್ರಯ ನೀಡಿದ ಧರ್ಮ ವೀರಶೈವ ಧರ್ಮವಾಗಿದೆ. ಮಕ್ಕಳಿಗೆ ಸಂಸ್ಕಾರ, ಲಿಂಗ ಪೂಜೆ ಕಲಿಸಬೇಕು. ಎಲ್ಲ ಧರ್ಮಗಳಿಂತ ವೀರಶೈವ ಧರ್ಮ ದೊಡ್ಡದಾಗಿದೆ. ಪಂಚ ಪೀಠಗಳನ್ನು ಸ್ಥಾಪಿಸಿ ಪಂಚ ಪೀಠಾಧಿಕಾರಿಗಳನ್ನು ನೇಮಿಸಿದರು. ರೇಣುಕಾಚಾರ್ಯರು ಕೇವಲ ಒಂದು ಸಮಾಜದವರನ್ನು ಪ್ರೀತಿಯಿಂದ ಕಾಣದೆ ಎಲ್ಲ ಸಮಾಜದವರನ್ನು ಪ್ರೀತಿ ವಿಶ್ವಾಸದಿಂದ ನೋಡಿದ್ದಾರೆ ಎಂದರು.
ಮೆರವಣಿಗೆಗೆ ಚಾಲನೆ: ಇದಕ್ಕೂ ಮುಂಚೆ, ನಗರದ ಹೈದ್ರಾಬಾದ್ ಬೈಪಾಸ್ ರಸ್ತೆ ಬಳಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ವೃತ್ತದಲ್ಲಿ, ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆಗೆ ರಾಯಚೂರು ನಗರ ಕ್ಷೇತ್ರದ ಶಾಸಕರಾದ ಡಾ.ಶಿವರಾಜ ಎಸ್.ಪಾಟೀಲ್ ಅವರು ಚಾಲನೆ ನೀಡಿದರು.
ಪೂಜ್ಯ ಶ್ರೀ ಶಾಂತಮಲ್ಲ ಶಿವಚಾರ್ಯ ಮಹಾಸ್ವಾಮಿಗಳು, ಶ್ರೀ ಅಭಿನವ ರಾಜೋಟಿ ವೀರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ವೀರ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ವಲಯ ಆಯುಕ್ತರಾದ ಮಲ್ಲಿಕಾರ್ಜುನ, ಸಮಾಜದ ಜಿಲ್ಲಾಧ್ಯಕ್ಷರಾದ ಶರಣು ಭೂಪಾಲ್ ನಾಡಗೌಡ, ಸಮಾಜದ ಮುಖಂಡರಾದ ವೀರಯ್ಯಸ್ವಾಮಿ, ಡಾ.ಮಂಜುನಾಥ ಸೇರಿದಂತೆ ಇತರರು ಇದ್ದರು.



Comments
Post a Comment