ಒಳ ಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ರಾಯಚೂರು ಬಂದ್ ಯಶಸ್ವಿ: ಬಸ್ ಸ್ಟ್ಯಾಂಡ್ ಬಿಕೋ; ವ್ಯಾಪಾರ ವಹಿವಾಟು ಸ್ಥಗಿತ. ಜಯ ಧ್ವಜ ನ್ಯೂಸ್, ರಾಯಚೂರು ಮಾ.11- ಒಳ ಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ಒಳ ಮೀಸಲಾತಿ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ರಾಯಚೂರು ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೆಳಿಗ್ಗೆ ಅಂಬೇಡ್ಕರ್ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಹೋರಾಟಗಾರರು ಸರ್ಕಾರದ ನಡೆಯನ್ನು ಖಂಡಿಸಿದರು.
ದಲಿತರ ದಶಕಗಳ ಹೋರಾಟದ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಘೋಷಣೆಯಾಗಿದ್ದು ಅದನ್ನು ನ್ಯಾಯಯುತವಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದ ರೀತಿಯಲ್ಲಿ ಜಾರಿಗೊಳಿಸಬೇಕು ಒಳ ಮೀಸಲಾತಿ ಅನ್ವಯವೇ ಉದ್ಯೋಗದಲ್ಲಿ ನೇಮಕಾತಿಯಾಗಬೇಕೆಂದು ಒತ್ತಾಯಿಸಿದರು.
ಯಾರದೇ ಒತ್ತಾಯಕ್ಕೆ ಮಣಿಯದೆ ಒಳ ಮೀಸಲಾತಿ ಸಮರ್ಪಕವಾಗಿ ಜಾರಿಯಾಗಬೇಕೆಂದು ಆಗ್ರಹಿಸಲಾಯಿತು.
ಬಸ್ ಸಂಚಾರ ಸ್ಥಗಿತ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸುಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು ಹೋಟೆಲ್, ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು ಪೆಟ್ರೋಲ್ ಬಂಕ್ ಬೀಗ ಜಡೆಯಲಾಗಿತ್ತು.
ಆಸ್ಪತ್ರೆ , ಔಷಧಿ ಅಂಗಡಿಗಳು ಇನ್ನಿತರ ಜೀವನಾವಶ್ಯಕ ಸೌಲಭ್ಯ ಅಬಾಧಿತವಾಗಿತ್ತು ಪರೀಕ್ಷೆಗಳು ಪೂರ್ವ ನಿಗದಿಯಂತೆ ನೆರವೇರಿದವು. ಕೆಲವೆಡೆ ಟೈರ್ ಗೆ ಬೆಂಕಿ ಹಾಗೂ ಪ್ರತಿಕೃತಿ ದಹನ, ನಡೆದವು. ಒಟ್ಟಾರೆಯಾಗಿ ಇಂದಿನ ಒಳ ಮೀಸಲಾತಿ ಹೋರಾಟ ಬಂದ್ ಯಶಸ್ವಿಯಾಯಿತು.
ಐಕ್ಯ ಹೋರಾಟ ಸಮಿತಿ, ಮಾದಿಗ ದಂಡೋರಾ ಸೇರಿದಂತೆ ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು , ಸದಸ್ಯರು ಬಂದ್ ಗೆ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು .






Comments
Post a Comment