ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಆದ್ಯತೆಯಿಲ್ಲ: ಜಿಲ್ಲೆಯ ಶಾಸಕರಲ್ಲಿ ಇಚ್ಚಾಶಕ್ತಿ ಕೊರತೆ- ಮಾಲಿಪಾಟೀಲ. ಜಯ ಧ್ವಜ ನ್ಯೂಸ್, ರಾಯಚೂರು, ಮಾ. 13- ರಾಜ್ಯ ಬಜೆಟ್ ನಲ್ಲಿ ಕೃಷಿಗೆ ಆದ್ಯತೆ ನೀಡಲಾಗಿಲ್ಲವೆಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕೃಷಿಗೆ ಪ್ರಾಧಾನ್ಯತೆ ನೀಡಲಾಗಿಲ್ಲವೆಂದರು. ಜಿಲ್ಲೆಯಲ್ಲಿ ರೈತರ ಸಂಕಷ್ಟಕ್ಕೆ ಯಾರು ಸ್ಪಂದಿಸುತ್ತಿಲ್ಲವೆಂದ ಅವರು ಫೇಕ್ ಜಿಪಿಎಸ್ ಸರ್ವೆಯಿಂದ ರೈತರು ಬೆಳೆದ ಬೆಳೆ ಹಾಗೂ ನೊಂದಣಿಯಾದ ಬೆಳೆ ತದ್ವಿರುದ್ಧವಾಗಿದೆ ಎಂದು ದೂರಿದರು.
ಖರೀದಿ ಕೇಂದ್ರಗಳು ತೆರೆದಿಲ್ಲ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅನೇಕ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ ರೈತರ ಸಂಕಷ್ಟ ಆಲಿಸುವವರು ಯಾರು ಎಂದರು.ತುಂಗಭದ್ರಾ ಗೇಟ್ ಅಳವಡಿಕೆ ಕಾರ್ಯ ಒಂದೆಡೆಯಾದರೆ ಮತ್ತೊಂದೆಡೆ ಕಾಲುವೆಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಕೆಲವು ಕಡೆ ಕಾಲುವೆ ಶಿಥಿಲಾವಸ್ಥೆಯಲ್ಲಿದ್ದು ಕೊನೆ ಭಾಗಕ್ಕೆ ನೀರು ಬರುವುದಾದರೂ ಹೇಗೆ ಎಂದರು. ಕುಡಿಯುವ ನೀರಿಗಾಗಿ ಟಿಎಲ್ ಬಿಸಿಗೆ ನೀರು ಹರಿಸಲಾಗುತ್ತಿದೆ ಆದರೆ ಕಾಲುವೆ ಪರಿಸರದಲ್ಲಿ ನೂರಾರು ಕಾರ್ಖಾನೆಗಳ ವಿಷಾನೀಲ, ತ್ಯಾಜ್ಯದಿಂದ ನೀರು ಕಲುಷಿತಗೊಳ್ಳುವ ಆತಂಕವಿದ್ದು ಪರಿಸರ ಹಾನಿ ಮಾಡುವ ಕಂಪನಿಗಳನ್ನು ಮುಚ್ಚಬೇಕು ಎಂದರು. ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯವಾದ ಶುದ್ಧ ಕುಡಿಯುವ ನೀರು ಕೊಡದ ಸ್ಥಿತಿಯಲ್ಲಿ ಸರ್ಕಾರವಿದೆ ಎಂದರು. ನೀರಾವರಿ ಮಂತ್ರಿಗಳು ಈ ಭಾಗದ ನೀರಾವರಿ ಬಗ್ಗೆ ಕಾಳಜಿ ತೋರುತ್ತಿಲ್ಲವೆಂದರು. ಕೊಪ್ಪಳದಲ್ಲಿ ಬಲ್ಡೋಟಾ ವಿಸ್ತರಣೆ ಒಪ್ಪಿಗೆ ನೀಡಿದ್ದು ಇದರಿಂದ ಮತ್ತಷ್ಟು ಪರಿಸರ ಹಾನಿಗೆ ಆಸ್ಪದ ನೀಡಿದಂತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಶಂಕರಗೌಡ, ಪ್ರಭಾಕರ ಪಾಟೀಲ್, ಬೂದಯ್ಯ ಸ್ವಾಮಿ, ಇನ್ನಿತರರು ಇದ್ದರು.


Comments
Post a Comment