ಮಾ.5 ರಿಂದ 7ರವರೆಗೆ ರಿಗೇಲ್-26 ಕಾರ್ಯಕ್ರಮ: ನವೋದಯ ಶಿಕ್ಷಣ ಸಂಸ್ಥೆ ಹಲವು ಕಾರ್ಯಗಳಲ್ಲಿ ಮೊದಲಿಗ - ಎಸ್.ಆರ್.ರೆಡ್ಡಿ. ಜಯ ಧ್ವಜ ನ್ಯೂಸ್ ರಾಯಚೂರು, ಮಾ.4- ಪ್ರತಿ ವರ್ಷದಂತೆ ಈ ವರ್ಷವು ಮಾ.5 ರಿಂದ 7 ರವರೆಗೆ ರಿಗೇಲ್-26 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನವೋದಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಎಸ್.ಆರ್.ರೆಡ್ಡಿ ಹೇಳಿದರು. ಅವರಿಂದು ನವೋದಯ ವೈದ್ಯಕೀಯ ಮಹಾವಿದ್ಯಾಲಯದ ಸೆಂಟ್ರಲ್ ಲೈಬ್ರರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನವೋದಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಹಾಗೂ ಸಾಂಸ್ಕೃತಿಕ ಸೊಬಗಿನ ರಿಗೇಲ್-26 ಕಾರ್ಯಕ್ರಮ ಮಾ.5 ರಂದು ಸಂಜೆ 6.30ಕ್ಕೆ ನವೋದಯ ಮೈದಾನದಲ್ಲಿ ಕೃಷಿ ವಿವಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಉದ್ಘಾಟಿಸಲಿದ್ದಾರೆ ಎಂದರು. ಮಾ.6ರಂದು ಬೆಳಿಗ್ಗೆ 10ಕ್ಕೆ ನವೋದಯ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್ ಬಿ.ಸಿ ಆಗಮಿಸಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಪದವಿಧರರಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಿದ್ದಾರೆ ಎಂದ ಅವರು ಸಂಜೆ ನಡೆಯುವ ಯುಫೋರಿಯಾ ಕಲ್ಚರಲ್ ಫೆಸ್ಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಆಗಮಿಸಲಿದ್ದಾರೆ ಎಂದರು.
ಮಾ.7 ರಂದು ಬೆಳಿಗ್ಗೆ 10.45ಕ್ಕೆ ನವೋದಯ ಸಭಾಂಗಣದಲ್ಲಿ ನಡೆಯುವ ಪದವಿ ಪ್ರದಾನ ಸಮಾರಂಭದಲ್ಲಿ ಫಾರ್ಮಸಿ, ನರ್ಸಿಂಗ್, ಶಿಕ್ಷಣ, ಇಂಜಿನಿಯರಿಂಗ್ ಇನ್ನಿತರ ಪದವಿಧರರಿಗೆ ಪ್ರಮಾಣ ಪತ್ರ ಪ್ರದಾನ ಸಮಾರಂಭದಲ್ಲಿ ಐಐಟಿ ಧಾರವಾಡ , ನಿರ್ದೇಶಕ ಪ್ರೋ.ವೆಂಕಪ್ಪಯ್ಯ ಆರ್.ದೇಸಾಯಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಸಂಜೆ ನಡೆಯುವ ವರ್ಣರಂಜಿತ ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಸಂಗೀತ ತಂಡವಾದ ಶೆಹರ ಬ್ಯಾಂಡ್ ನಿಂದ ಸಂಗೀತ ಸಂಜೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಹಲವು ಯೋಜನೆ ಕಾರ್ಯಗತಗೊಳಿಸಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮ್ಮ ಸಂಸ್ಥೆ ಮೊದಲಿಗವಾಗಿದೆ ಎಂದ ಅವರು ಈಗಾಗಲೆ ಸುಮಾರು 27 ಕೋಟಿ ರೂ ವೆಚ್ಚದಲ್ಲಿ ನವೋದಯ ಶಿಕ್ಷಣ ಸಂಸ್ಥೆಯ ಬೃಹತ್ ಕ್ರೀಡಾಂಗಣ ಸಮುಚ್ಚಯ ನಿರ್ಮಾಣ ಹಂತದಲ್ಲಿದ್ದು ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ ಅಳವಡಿಸಲಾಗುತ್ತದೆ ಎಂದರು. ಕ್ರೀಡೆ ಉತ್ತೇಜಿಸಲು ಈ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ಕೆಎಸ್ ಸಿಎ ಸಹ ಇಲ್ಲಿ ತಮ್ಮ ಪಂದ್ಯಾವಳಿಗಳನ್ನು ಆಯೋಜಿಸಲು ಸಹಕರಿಸಲು ಕೋರಿದೆ ಎಂದರು. ಇತ್ತೀಚೆಗೆ ಬಹುಕೋಟಿ ವೆಚ್ಚದ ಟೆಸ್ಲಾ 3 ಎಂಬ ಅತ್ಯಾಧುನಿಕ ಎಂಆರ್ ಐ ಯಂತ್ರವನ್ನು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಉದ್ಘಾಟಿಸಿದ್ದು ಬೇರೆಡೆಯಿರುವ ಶುಲ್ಕಕ್ಕಿಂತ ಕಡಿಮೆ ದರದಲ್ಲಿ ದರ ನಿಗದಿ ಮಾಡಲಾಗಿದೆ ಎಂದರು. ನಮ್ಮ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ಸುಮಾರು 13543 ಹಳೆ ವಿದ್ಯಾರ್ಥಿಗಳು ಜಗತ್ತಿನಾದ್ಯಂತ ನೆಲೆಸಿದ್ದಾರೆ ಎಂದರು. ಶಿಕ್ಷಣ ಸಂಸ್ಥೆಯಲ್ಲಿ ಡಿಜಿಟಲೀಕರಣಗೊಳ್ಳುತ್ತಿದ್ದು ರೋಗಿಗಳಿಂದ ಶುಲ್ಕ ಸಂದಾಯವು ನಗದು ರಹಿತವಾಗಲಿದೆ ಎಂದರು. ಶಿಕ್ಷಣ ಸಂಸ್ಥೆಯಿಂದ ಅನೇಕ ಸಂಶೋಧನಾ ಬರವಣಿಗೆ ಚಟುವಟಿಕೆ ಪ್ರಗತಿಯಲ್ಲಿವೆ ನೂರಾರು ಬರವಣಿಗೆಗೆಗಳು ಪೂರ್ಣಗೊಂಡಿವೆ ಎಂದರು. ಇದುವರೆಗೂ ಸುಮಾರು 39 ಸಾವಿರ ರೋಗಿಗಳಿಗೆ ಉಚಿತ ಆರೋಗ್ಯ ಕ್ಯಾಂಪ್ ಮೂಲಕ ಆರೋಗ್ಯ ಸೇವೆ ಒದಗಿಸಿದ್ದೇವೆಂದ ಅವರು ನವೋದಯ ಆಸ್ಪತ್ರೆಯಲ್ಲಿ ಬಡ ಮಹಿಳೆಯರಿಗೆ ಹೆರಿಗೆಯ ನಂತರ ಸಹಾಯ ಧನ ಹಾಗೂ ಮಡಿಲು ಕಿಟ್ ನೀಡಲಾಗುತ್ತಿದೆ ಎಂದರು .ಆಶಾಪುರ ರಸ್ತೆಯಲ್ಲಿ ಹಾಗೂ ಸಿಂಗನೋಡಿಯಲ್ಲಿ ವೈದ್ಯಕೀಯ ತಪಾಸಣೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು. ನಮ್ಮ ಸಂಸ್ಥೆಯ ಕ್ಯಾಂಪಸ್ ನಲ್ಲಿರುವ ಕಟ್ಟಡಗಳ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಫಲಕ ಅಳವಡಿಸಿದ್ದು ಸುಮಾರು 2 ಮ್ಯೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ ಇದು ನಮಗೆ ಹೆಮ್ಮೆಯ ವಿಷಯವಾಗಿದ್ದು ಬಹುಷಃ ಇದು ರಾಜ್ಯದಲ್ಲಿ ಪ್ರಥಮ ಖಾಸಗಿ ಸಂಸ್ಥೆಯ ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿ ನಡೆಯಾಗಿದೆ ಎಂದ ಅವರು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್ ಸಹ ಒದಗಿಸಲಾಗಿದೆ ಎಂದರು. ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಅನೇಕ ಪ್ರಶಸ್ತಿ, ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ರಾಜೀವ್ ಗಾಂಧಿ ಯುಜಿಸಿ ಅನುದಾನ ಸಹ ನಮ್ಮ ಸಂಸ್ಥೆಗೆ ಲಭಿಸಿದೆ ಎಂದರು. ನವೋದಯ 88.4 ಎಫ್ ಎಂ. ಬಾನುಲಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು. ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿಲ್ಲ ಬದಲಾಗಿ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗೂ ದೈಹಿಕ ಸದೃಢತೆ ಹೆಚ್ಚಿಸಲು ಆರ್ಥಿಕ ಹೊರೆಯಾಗದ ರೀತಿಯಲ್ಲಿ ಶುಲ್ಕ ನಿಗದಿ ಪಡಿಸಿದ್ದೇವೆಂದ ಅವರು ಕೆಲವರು ಇದನ್ನು ವಿರೋಧಿಸಿದ್ದು ಗಮನಕ್ಕಿದೆ ಎಂದರು. ಕೌಶಲ್ಯಾಭಿವೃದ್ಧಿಗಾಗಿ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದ ಅವರು ಸ್ಮಾರ್ಟ್ ತರಗತಿಗಳು ಪ್ರಾರಂಭಿಸಲಾಗುತ್ತಿದೆ ಎಂದರು. ಕೃತಕ ಬುದ್ಧಿಮತೆ ಆವಿಷ್ಕಾರಕ್ಕೆ ಸಂಸ್ಥೆ ಉತ್ತೇಜನ ನೀಡಲಿದೆ ಎಂದರು. ನಮ್ಮ ಕ್ಯಾಂಪಸ್ ನಲ್ಲಿ ಯಾವುದೇ ಮಾದಕ ವ್ಯಸನಕ್ಕೆ ಆಸ್ಪದ ನೀಡುವುದಿಲ್ಲ ಇಡಿ ಕ್ಯಾಂಪಸ್ ನಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿದೆ ಸೂಕ್ತ ರೀತಿಯಲ್ಲಿ ಭದ್ರತಾ ಸಿಬ್ಬಂದಿಗಳ ನಿಯೋಜನೆಯಿದೆ ಎಂದರು. ಸಂದರ್ಭದಲ್ಲಿ ರೆಜಿಸ್ಟ್ರಾರ್ ಟಿ. ಶ್ರೀನಿವಾಸರಾವ್ ಇನ್ನಿತರರು ಇದ್ದರು.



Comments
Post a Comment