ನವೋದಯ ಶಿಕ್ಷಣ ಸಂಸ್ಥೆ ಪದವಿ ಪ್ರದಾನ ಸಮಾರಂಭ: ವೈದ್ಯರಲ್ಲಿ ಮಾನವೀಯತೆ ಮುಖ್ಯ- ಕುಲಪತಿ ಡಾ.ಭಗವಾನ್ ಬಿ.ಸಿ. ಜಯ ಧ್ವಜ ನ್ಯೂಸ್, ರಾಯಚೂರು, ಮಾ.6- ವೈದ್ಯರಲ್ಲಿ ಮಾನವೀಯತೆ ಮುಖ್ಯವೆಂದು ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್ ಬಿ.ಸಿ. ಅಭಿಪ್ರಾಯ ಪಟ್ಟರು. ಅವರಿಂದು ನಗರದ ನವೋದಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಫಿಸಿಯೋಥೆರಪಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿದರು. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನದೆಡೆ ಸಾಗುತ್ತಿದ್ದೀರಿ ನೀವು ನಿಮ್ಮ ವೈದ್ಯ ವೃತ್ತಿಯಲ್ಲಿ ಕೇವಲ ಲಾಭ ಗಳಿಕೆಗೆ ಮನ್ನಣೆ ನೀಡದೆ ಸೇವಾ ಮನೋಭಾವದಿಂದ ಬಡ ರೋಗಿಗಳ ಆರೋಗ್ಯ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ನಮ್ಮ ದೇಶ ಯುವಕರಿಂದ ಕೂಡಿದ ದೇಶ ಶೇ.40ರಷ್ಟು ಯುವಕರಿದ್ದಾರೆ ಎಂದ ಅವರು ಅಬ್ದುಲ್ ಕಲಾಂರವರ ನುಡಿಯಂತೆ ಮಾನವೀಯತೆಯನ್ನು ಮೈಗೊಡಿಸಿಕೊಳ್ಳಬೇಕೆಂದರು. ಇಂದಿನ ಯುವಕರು ಮಾದಕ ವಸ್ತುಗಳಿಗೆ ಮಾರು ಹೋಗದೆ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸುದೃಢ ಪ್ರಜೆಗಳಾಗಬೇಕೆಂದರು. ವೈದ್ಯ ವೃತ್ತಿಯಲ್ಲಿ ಮಹಿಳೆಯರು ಶಸ್ತ್ರ ಚಿಕಿತ್ಸಕರಾಗುತ್ತಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಪಾರಮ್ಯ ಮೆರೆಯಲಿದ್ದು ನಾವು ಹೆಚ್ಚಿನ ಅಧ್ಯಯನ ಶೀಲರಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಜಗತ್ತಿನ ವೇಗಕ್ಕೆ ಸರಿಸಾಟಿಯಾಗಿ ಮುನ್ನೆಡೆಬೇಕೆಂದರು. ಜಗತ್ತು ಎಷ್ಟೆ ಆಧುನಿಕತೆಯಲ್ಲಿ ಮುಂದುವರೆದರೂ ಭಾರತದಲ್ಲಿ ದೈವತ್ವ , ಭಕ್ತಿಗೆ ಪ್ರಾಧಾನ್ಯತೆ ಹೆಚ್ಚು ವೈದ್ಯರಿಗೆ ಹೃದಯ ಬಡಿಯುವುದು ತಿಳಿಯುತ್ತದೆ ಆದರೆ ಏಕೆ ಬಡಿಯುತ್ತದೆ ಎಂಬುದು ಅರಿಯಲು ಆಗಿಲ್ಲ ಅದನ್ನೇ ದೈವಾನುಗ್ರಹವೆಂದು ಹೇಳಿದರು.
ರೋಗಿಗಳು ಗ್ರಾಹಕರು ಮತ್ತು ಕೊಳ್ಳುವ ವಸ್ತುಗಳಲ್ಲ ಆದ್ದರಿಂದ ವೈದ್ಯ ಪ್ರಪಂಚದಲ್ಲಿ ವ್ಯಾಪಾರಿ ಮನೋಭವ ಸಲ್ಲದು ಎಂದರು. ನವೋದಯ ಶಿಕ್ಷಣ ಸಂಸ್ಥೆ ಮೂಲಕ ಎಸ್.ಆರ್.ರೆಡ್ಡಿ ದೊಡ್ಡ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಸಾವಿರಾರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಶಿಕ್ಷಣ ನೀಡುತ್ತಿದ್ದು ಹೆಮ್ಮೆಯ ಸಂಗತಿಯಾಗಿದ್ದು ಅವರ ಬದ್ಧತೆ ಮತ್ತು ಕಾರ್ಯಸೂಚಿ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನವೋದಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಆರ್.ರೆಡ್ಡಿ, ವೈದ್ಯರಲ್ಲಿ ಮಾನವೀಯ ಮೌಲ್ಯಗಳು ಮುಖ್ಯವಾಗುತ್ತದೆ ನಿಮ್ಮ ಸ್ನೇಹಮಯಿ ನಡೆ ನುಡಿ ರೋಗಿಗಳಲ್ಲಿ ಅರ್ಧ ರೋಗ ವಾಸಿಮಾಡುತ್ತದೆ ಎಂದ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಇಷ್ಟು ಎತ್ತರಕ್ಕೆ ಬೆಳೆಯಲು ಕುಲಪತಿಗಳಾದ ಭಗವಾನ್ ರವರ ಕಾರ್ಯದಕ್ಷತೆ ಕಾರಣವೆಂದರು. ನವೋದಯ ಶಿಕ್ಷಣ ಸಂಸ್ಥೆ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ ಹಸಿರೀಕರಣ, ಕ್ಯಾಂಪಸ್ ನಲ್ಲಿ ಸೌರ ವಿದ್ಯುತ್ ಅಳವಡಿಕೆಗೆ ಮನ್ನಣೆ ನೀಡಿದೆ ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯ ನೀಡುತ್ತಾ ಮುನ್ನೆಡೆದಿದೆ ನಮ್ಮ ಪರಂಪರೆ ಹೀಗೆ ಸಾಗಲು ನಮ್ಮ ಸಂಸ್ಥೆಯ ಸಹೋದ್ಯೋಗಿಗಳು, ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವೆಂದರು. ವೈದ್ಯಕೀಯ ,ದಂತ ವೈದ್ಯಕೀಯ , ಫಿಸಿಯೋಥೆರಪಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ವೇದಿಕೆ ಮೇಲೆ ರೆಜಿಸ್ಟ್ರಾರ್ ಟಿ.ಶ್ರೀನಿವಾಸ್, ಡಾ.ಅಮೃತ ರೆಡ್ಡಿ, ಡಾ.ವಿಜಯ್ ಕುಮಾರ್,ಡಾ.ದೇವಾನಂದ್,ಡಾ. ಅರುಣ್,ಡಾ ಆನಂದ, ಡಾ.ಗಿರೀಶ್ ಕಟ್ಟಿ,ಡಾ.ಕೌಶಿಕ ರೆಡ್ಡಿ,ಡಾ.ದೊಡ್ಡಯ್ಯ, ಡಾ.ಮಲ್ಲಿಕಾರ್ಜುನ, ಡಾ.ಉಮಾಕಾಂತ್, ಡಾ.ಕಾಜೋಲ್ ಇನ್ನಿತರರು ಇದ್ದರು. ಡಾ.ದೊಡ್ಡಯ್ಯ ಸ್ವಾಗತಿಸಿದರು. ಡಾ. ಆನಂದ್ ಎಸ್.ಎಸ್ . ವಿದ್ಯಾರ್ಥಿಗಳ ಪಟ್ಟಿ ಪ್ರಕಟಿಸಿ ನಿರ್ವಹಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳು, ಸಿಬ್ಬಂದಿಗಳು, ಪಾಲಕರು ಉಪಸ್ಥಿತರಿದ್ದರು.





Comments
Post a Comment