ಕೌಶಲ್ಯ ತರಬೇತಿ, ಶಿಕ್ಷಣ ಗುಣಮಟ್ಟ, ಹೆಚ್ಚಳಕ್ಕೆ "ಕರ್ನಾಟಕ-ಕ್ವೆಸ್ಟ್"ಗೆ ಆದ್ಯತೆ ನೀಡಿದ ಬಜೆಟ್:
ರಾಜ್ಯದ ಯುವ ಸಮೂಹಕ್ಕೆ ಕೌಶಲ್ಯ ತರಬೇತಿಗೆ ಆದ್ಯತೆ - ಡಾ. ಶರಣಪ್ರಕಾಶ್ ಪಾಟೀಲ್
ಜಯ ಧ್ವಜ ನ್ಯೂಸ್ , ರಾಯಚೂರು, ಮಾ. 6- ರಾಜ್ಯದಲ್ಲಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳು, ಐಟಿಐಗಳ, ಜಿಟಿಟಿಸಿ ಮೂಲಕ ಯುವ ಸಮದಾಯಕ್ಕೆ ಹೆಚ್ಚಿನ ಕೌಶಲ್ಯ ತರಬೇತಿ ಒದಗಿಸಲು ಬಜೆಟ್ ನಲ್ಲಿ ಕೆ-ಕ್ವೆಸ್ಟ್ ಯೋಜನೆ ಘೋಷಿಸಿರುವುದು ಗಮನಾರ್ಹ ಸಂಗತಿ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 17ನೇ ಬಜೆಟ್ ಮಂಡಿಸಿದ ನಂತರ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಬಜೆಟ್ ನಲ್ಲಿ ಯುವ ಸಮುದಾಯಕ್ಕೆ ಆದ್ಯತೆ ನೀಡಲಾಗಿದೆ. ಇದು ಸ್ವಾಗತಾರ್ಹ ಕ್ರಮ ಎಂದರು.
ಎಡಿಬಿ ಸಹಭಾಗಿತ್ವದಲ್ಲಿ ಒಟ್ಟು 1,386 ಕೋಟಿ ರೂ.ಗಳ ವೆಚ್ಚದಲ್ಲಿ ಐದು ವರ್ಷಗಳ ಅವಧಿಯ ಯೋಜನೆಯನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ಇದರಿಂದ ಗುಣಮಟ್ಟದ ಹಾಗೂ ಕೌಶಲ್ಯಭರಿತ ತರಬೇತಿ, ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ನಮ್ಮ ನಾಡಿನ ಶಕ್ತಿ ಅಡಗಿರುವುದು ಯುವ ಶಕ್ತಿಯಲ್ಲಿ. ಯುವ ಸಮುದಾಯಕ್ಕೆ "ಅವಕಾಶ"ಗಳ ವೇದಿಕೆಯನ್ನು ಕಲ್ಪಿಸಲು ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಐಟಿಐ ವಿದ್ಯಾರ್ಥಿನಿಯರಿಗೆ ಉದ್ಯೋಗಾವಕಾಶ ಜೊತೆಗೆ ಬೋಧನಾ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದು ಡಾ. ಪಾಟೀಲ್ ತಿಳಿಸಿದರು.
ಕರ್ನಾಟಕ ಕೌಶಲ್ಯ ಬುದ್ಧಿಮತ್ತೆ ಮತ್ತು ಕಾರ್ಯತಂತ್ರ ಘಟಕ:
ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಅಡಿಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜೊತೆಗೂಡಿ ಕರ್ನಾಟಕ ಕೌಶಲ್ಯ ಬುದ್ಧಿಮತ್ತೆ ಮತ್ತು ಕಾರ್ಯತಂತ್ರ ಘಟಕವನ್ನು ಸ್ಥಾಪಿಸಲಾಗುವುದು. ಆಯ್ದ ದೇಶಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆಯ ಮೂಲಕ ಜಾಗತಿಕ ಕೌಶಲ್ಯ ಮೈತ್ರಿಕೂಟಗಳನ್ನು ಆರಂಭಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಯುವ ಸಮೂಹಕ್ಕೆ ಪಾತ್ರವಲ್ಲದೇ, ರೈತ ಮಹಿಳೆಯರಿಗೆ ಕೂಡ ಕೃಷಿ ಕೌಶಲ್ಯಾಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಇದು ವಿಶೇಷವಾಗಿದೆ ಎಂದು ತಿಳಿಸಿದರು.
ಕಲಬುರಗಿ, ಮೈಸೂರಿನಲ್ಲಿ ಯೂತ್ ಇಂಪ್ಯಾಕ್ಟ್ ಕೇಂದ್ರ ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ 16 ಕೋಟಿ ರೂ. ವೆಚ್ಚದಲ್ಲಿ ಷ್ನೈಡರ್ ಎಲೆಕ್ಟ್ರಿಕ ಯೂತ್ ಇಂಪ್ಯಾಕ್ಟ್ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರತಿ ವರ್ಷ ಒಟ್ಟಾರೆ 2,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಉದ್ಯೋಗವಕಾಶ ಕಲ್ಪಿಸಲು ನೆರವಾಗಲಿದೆ ಎಂದರು.
ಯುವನಿಧಿ ಯೋಜನೆಯಡಿ ಇಲ್ಲಿಯವರೆಗೆ ಒಟ್ಟು 3,08,267 ಅರ್ಹ ಫಲಾನುಭವಿಗಳಿಗೆ 913 ಕೋಟಿ ರೂ. ಮೊತ್ತದ ನಿರುದ್ಯೋಗ ಭತ್ಯೆಯನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ನಾವು ನೀಡುತ್ತಿರುವ ಆದ್ಯತೆಗೆ ಇದು ಸಾಕ್ಷಿಯಾಗಿದೆ ಎಂದರು.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಪಿಎಂ ಸೇತು ಯೋಜನೆ ಅಡಿಯಲ್ಲಿ ಕೇಂದ್ರ, ರಾಜ್ಯ ಮತ್ತು ಉದ್ದಿಮೆಗಳ ಸಹಭಾಗಿತ್ವದಲ್ಲಿ ಮಾದರಿಯಲ್ಲಿ ಕ್ಲಸ್ಟರ್‌ಗಳನ್ನಾಗಿ ಉನ್ನತೀಕರಿಸಲಾಗುವುದು. 2026-27ನೇ ಸಾಲಿನಲ್ಲಿ ಎರಡು ಕ್ಲಸ್ಟರ್ ಗಳನ್ನು 241 ಕೋಟಿ ರೂ. ಘಟಕ ಆರಂಭಿಸಲು ಉದ್ದೇಶಿಸಿರುವುದು ಉತ್ತಮ ಎಂದು ಡಾ. ಪಾಟೀಲ್ ವಿವರಿಸಿದರು.
ಉದ್ಯೋಗ ಅವಕಾಶಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಅದನ್ನು ಅನುಷ್ಠಾನಗೊಳಿಸಲಾಗಿದೆ. ಒಟ್ಟಾರೆಯಾಗಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಬಜೆಟ್‌ನಲ್ಲಿ ಹೆಚ್ಚುವರಿ "ನಿಧಿ" ದೊರೆತಿರುವುದು ಸ್ವಾಗತಾರ್ಹ ಎಂದು ಬಜೆಟ್‌ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.


Comments
Post a Comment