ಎಸ್‌ಐಆರ್ ಮತದಾರರ ಪಟ್ಟಿಯನ್ನು ಪಾರದರ್ಶಕಗೊಳಿಸುವ ಉದ್ದೇಶ ಹೊಂದಿದೆ- ಜಿಲ್ಲಾಧಿಕಾರಿ ಪೂವಿತಾ ಎಸ್.


ಜಯ ಧ್ವಜ ನ್ಯೂಸ್. ರಾಯಚೂರು ಜೂ. 5- ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ವಿಶೇಷ ತೀವ್ರ ಪರಿಷ್ಕರಣೆ-2026 (ಎಸ್‌ಐಆರ್)ರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ, ದೋಷರಹಿತ ಹಾಗೂ ಪಾರದರ್ಶಕಗೊಳಿಸುವ ಉದ್ದೇಶ ಹೊಂದಿದೆ ಎಂದು ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು.ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯ ಅಂಗವಾಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು. ಈ ವೇಳೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗಳಿಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಸಂಗ್ರಹಿಸಿ ಪರಿಶೀಲಿಸಲಿದ್ದಾರೆ. ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ಮತದಾರರ ಪಟ್ಟಿಯ ಪರಿಷ್ಕರಣೆ, ತಿದ್ದುಪಡಿ ಹಾಗೂ ನವೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.


ಜಿಲ್ಲೆಯಲ್ಲಿ ಈಗಾಗಲೇ ಶೇ.85.90 ರಷ್ಟು ನೈಜ ಮತದಾರರನ್ನು ಗುರುತಿಸಿ, ಕುಟುಂಬಗಳ ಲಿಂಕೇಜ್‌ನೊಂದಿಗೆ ಹೊಂದಾಣಿಕೆ ಮಾಡಲಾಗಿದೆ. ವಿಶೇಷ ಪರಿಷ್ಕರಣೆ ಅಂಗವಾಗಿ ಜೂನ್ 20ರಿಂದ 29ರವರೆಗೆ ಪೂರ್ವಸಿದ್ಧತೆ, ತರಬೇತಿ ಮತ್ತು ಮುದ್ರಣ ಕಾರ್ಯಗಳು ನಡೆಯಲಿವೆ. ಜೂನ್ 30ರಿಂದ ಜುಲೈ 29ರವರೆಗೆ ಬಿ.ಎಲ್.ಒ.ಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ಹಾಗೂ ಪರಿಶೀಲನೆ ನಡೆಸಲಿದ್ದಾರೆ. ತದನಂತರ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಧ್ಯಮಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.

14,78,141 ಮತದಾರ ಗುರುತು: 2025ರ ಜಿಲ್ಲೆಯ ಮತದಾರರ ಪಟ್ಟಿಯ ಪ್ರಕಾರ ಒಟ್ಟು 17,22,279 ಅರ್ಹ ಮತದಾರರಿದ್ದು, ಈ ಪೈಕಿ ಈಗಾಗಲೇ 14,78,141 ಮತದಾರರನ್ನು ಗುರುತಿಸಿ ಶೇ.85.90ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಉಳಿದ ಮತದಾರರನ್ನು ಪತ್ತೆ ಮಾಡಲಾಗುತ್ತಿದೆ. ಇದರಲ್ಲಿ ಕೆಲವರು ಮೃತರಾಗಿರಬಹುದು, ಬೇರೆ ಕಡೆಗೆ ಕಾಯಂ ಆಗಿ ವಲಸೆ ಹೋಗಿರಬಹುದು, ಅಥವಾ ಮತಪಟ್ಟಿಯಲ್ಲಿ ಎರಡು ಬಾರಿ ಹೆಸರು ಸೇರ್ಪಡೆಯಾಗಿರಬಹುದು. ಆದರೆ ಯಾರನ್ನೂ ಏಕಾಏಕಿ ಪಟ್ಟಿಯಿಂದ ಕೈಬಿಡಲಾಗುವುದಿಲ್ಲ. ಪತ್ತೆಯಾಗದ ಈ  ಮತದಾರರಿಗೆ ನೋಟಿಸ್ ನೀಡಿ ಪರಿಶೀಲಿಸಲಾಗುವುದು. ಮೃತ ಪಟ್ಟ ಬಗ್ಗೆ ಅಧಿಕೃತ ಮರಣ ಪ್ರಮಾಣ ಪತ್ರ ಸಿಗುವವರೆಗೂ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕುವುದಿಲ್ಲ. ಮತದಾರರ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಮನೆ ಗಣತಿ ಸಹಕಾರಕ್ಕೆ ಕೋರಿಕೆ: ಈಗಾಗಲೇ ಮನೆ ಮನೆ ಸಮೀಕ್ಷೆ ಮುಗಿದಿದ್ದು, ಮುಂದಿನ ಹಂತವಾಗಿ ಪ್ರತಿಯೊಬ್ಬ ಮತದಾರರ ಮನೆ ಬಾಗಿಲಿಗೆ ಬಿಎಲ್‌ಒಗಳ ಮೂಲಕ ಅರ್ಧದಷ್ಟು ಮಾಹಿತಿ ಭರ್ತಿಯಾಗಿರುವ ಗಣತಿ ನಮೂನೆ ತಲುಪಿಸಲಾಗುವುದು. ಇದರಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ಸಂಬಂಧಿಕರ ಹೆಸರು ಹಾಗೂ ವಿಧಾನಸಭಾ ಕ್ಷೇತ್ರದ ವಿವರಗಳು ಇರಲಿವೆ. ಬಿಎಲ್‌ಒಗಳು ಮನೆಗಳಿಗೆ ಕನಿಷ್ಠ ಮೂರು ಬಾರಿ ಭೇಟಿ ನೀಡಿ, ಗಣತಿ ನಮೂನೆಗಳನ್ನು ತಲುಪಿಸಲು ಪ್ರಯತ್ನಿಸಲಿದ್ದಾರೆ. ನಂತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಮತದಾರರಿಂದ ದೃಢೀಕರಿಸಿಕೊಂಡು ಸಹಿ ಪಡೆದು ವಾಪಸ್ ತರಲಿದ್ದಾರೆ. ಸಾರ್ವಜನಿಕರು ಗಣತಿ ನಮೂನೆ ಸ್ವೀಕರಿಸಿ, ಪರಿಶೀಲಿಸಿ ಕಡ್ಡಾಯವಾಗಿ ಬಿಎಲ್‌ಒಗಳಿಗೆ ವಾಪಸ್ ನೀಡಬೇಕು. ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟು ಹೋಗುವ ಸಾಧ್ಯತೆ ಇರುವ ಕಾರಣ ಸಾರ್ವಜನಿಕರು ಈ ಬೃಹತ್ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕೋರಿದರು.

ಪ್ರಸ್ತುತ ರಾಯಚೂರು ಜಿಲ್ಲೆಯ 07 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,853 ಮತಗಟ್ಟೆಗಳಿದ್ದು, ಒಟ್ಟು 17,22,279 ಮತದಾರರಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ. ಗಣತಿ ನಮೂನೆ ಅರ್ಜಿಯನ್ನು ಸಾರ್ವಜನಿಕರು ಆದಷ್ಟು ಭೇಗನೆ ಭರ್ತಿ ಮಾಡಿ ಕೊಡಬೇಕು. ಮತ್ತು ಇವುಗಳಿಗೆ ಸಂಬಂಧಿಸಿದ ಯಾವುದೇ ದೂರು ಇದ್ದರೆ 1950 ಸಹಾಯವಾಣಿಗೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ. ಎಲ್ಲ ಮತದಾರರು, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಬಿಎಲ್‌ಒಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ಮತದಾರರ ಪಟ್ಟಿಯನ್ನು ಸಂಪೂರ್ಣ, ನಿಖರ ಮತ್ತು ಪಾರದರ್ಶಕಗೊಳಿಸಲು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ರಾಯಚೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ ಸೇರಿದಂತೆ ಚುನಾವಣಾ ಶಾಖೆಯ ಶಿರಸ್ತೇದಾರ್ ಋಷಿಕೇಶ ಇತರರು ಉಪಸ್ಥಿತರಿದ್ದರು.

Comments