ಸೆಕ್ಷನ್ 4(1)ಎ, 4(1)ಬಿ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವಂತೆ ಸೂಚನೆ - ವೆಂಕಟ್ ಸಿಂಗ್ 


ಜಯಧ್ವಜ ನ್ಯೂಸ್  ,ರಾಯಚೂರು, ಏ.18- ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್ ಸಿಂಗ್ ಹೇಳಿದರು.

ಅವರಿಂದು ಕಲಬುರ್ಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಹಿತಿ‌ ಹಕ್ಕು ಕಾರ್ಯಾಗಾರ ನಂತರ  ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂದಿಲ್ಲಿ ಜಿಲ್ಲೆಯ  ಜಿಲ್ಲಾ, ತಾಲೂಕು, ಗ್ರಾಮೀಣ ಹಂತದ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗರ ನಡೆಸಲಾಗಿದ್ದು, ಮಾಹಿತಿ ಹಕ್ಕು ಕಾಯ್ದೆಯ‌ ಮೂಲ ಆಶಯವೇ ಉತ್ತರದಾಯಿತ್ವ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದಾಗಿದೆ.


ಹೀಗಾಗಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ತಮ್ಮ ಕಚೇರಿ ಮಾಹಿತಿಯನ್ನು ಸ್ವಯಂ ಪ್ರೇರಿತರಾಗಿ ಕಾಯ್ದೆಯ ಸೆಕ್ಷನ್ 4(1)ಎ, 4(1)ಬಿ ರಂತೆ ಇಲಾಖೆಯ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿದಲ್ಲಿ ಕಚೇರಿಗೆ ಬರುವ ಅರ್ಜಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಲಾಗಿದೆ ಎಂದರು.

ಕಲಬುರಗಿ ವಿಭಾಗದ ಪ್ರತಿ ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಾಗಾರ ಆಯೋಜಿಸಿ ಅಧಿಕಾರಿಗಳಲ್ಲಿ ಕಾಯ್ದೆ ಮಹತ್ವ ಮತ್ತು ಉದ್ದೇಶ ಹಾಗೂ ತ್ವರಿತ ವಿಲೇವಾರಿ ಕುರಿತು ಅರಿವು ಮೂಡಿಸಲಾಗುತ್ತಿದೆ. ಇಂದಿನ ಕಾರ್ಯಾಗರದಲ್ಲಿ ನೂರಾರು ಸಂಖ್ಯೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದು, ಅವರಲ್ಲಿ ಕಾಯ್ದೆ ಕುರಿತು, ಅರ್ಜಿ ವಿಲೇವಾರಿಯಲ್ಲಿರುವ ಹಲವು ಗೊಂದಲಗಳಿಗೆ ಇಂದಿಲ್ಲಿ ಸಂವಾದ ನಡೆಸಿ ಪರಿಹಾರ ನೀಡಲಾಗಿದೆ ಎಂದರಲ್ಲದೆ ಗೈರಾದ‌ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದೆ ಎಂದರು.

ಅಡಳಿತದಲ್ಲಿ ಪಾರದರ್ಶಕತೆ, ಜನರಿಗೆ ಉತ್ತರದಾಯಿತ್ವ ಇರಬೇಕೆಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ತರಲಾಗಿದೆ. ಆದರೆ ಕೆಲವರು ಯಾವುದೇ ಸಾರ್ವಜನಿಕ ಹಿತದೃಷ್ಠಿ ಇಲ್ಲದೆ ಆರ್.ಟಿ.ಐ ಹೆಸರಿನಲ್ಲಿ ಅನಗತ್ಯ ಅಧಿಕಾರಿಗಳಿಗೆ ತೊಂದರೆ ಮಾಡುತ್ತಿದ್ದು ಅಯೋಗದ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳಲ್ಲಿ ರಾಜ್ಯದಾದ್ಯಂತ ಸುಮಾರು 26 ಜನರನ್ನು ಆರ್.ಟಿ.ಐ ನಡಿ ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಲಾಗಿದೆ. ಇದರಲ್ಲಿ ಕಲಬುರಗಿ ವಿಭಾಗದಲ್ಲಿ ಸುಮಾರು 8-10 ಜನ ಅರ್ಜಿದಾರರು ಇದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಡಾ. ರಿಚರ್ಡ ವಿನ್ಸೆಂಟ್ ಡಿಸೋಜಾ,ಡಾ. ಮಹೇಶ ವಾಲ್ವೇಕರ ಇದ್ದರು.

Comments

Popular posts from this blog