ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳಲ್ಲದವರದೇ ದರ್ಬಾರ್ ಆರೋಪ; ನಿಯಾಮಾವಳಿ ತಿದ್ದುಪಡಿಗೆ ಪಲುಗುಲ ನಾಗರಾಜರಿಂದ  ಸಚಿವರಿಗೆ ಪತ್ರ

ಜಯ ಧ್ವಜ ನ್ಯೂಸ್ ರಾಯಚೂರು, ಏ.15- ಇತ್ತೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯಗಳಿಗೆ ತಿಲಾಂಜಲಿ ಇಟ್ಟು ಸಾಹಿತಿಗಳಲ್ಲದವರದೇ ದರ್ಬಾರ್ ನಡೆಯುತ್ತಿದೆ ಎಂದು ಆರೋಪಿಸಿರುವ ಸಾಹಿತಿ ಪಲುಗುಲ ನಾಗರಾಜರವರು ಈ ಬಗ್ಗೆ  ಸಾಹಿತ್ಯ ಪರಿಷತ್ತಿನ ನಿಯಮಾವಳಿ  ತಿದ್ದುಪಡಿಗೈಯುವಂತೆ   ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೊದಲನೆಯದಾಗಿ ಚುನಾವಣೆ ನೀತಿ ಬದಲಾಗಬೇಕಿದೆ ತಾಲ್ಲೂಕು ಕಸಾಪ ಸದಸ್ಯರಿಂದಲೇ ಅಧ್ಯಕ್ಷರ ನೇಮಕ ಆಗಬೇಕು ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳು ಸೇರಿ ಜಿಲ್ಲಾ ಅಧ್ಯಕ್ಷರ ಆಯ್ಕೆ ಆಗಬೇಕು ನಂತರ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸೇರಿ ರಾಜ್ಯ ಕಸಾಪ ಅಧ್ಯಕ್ಷರ ಆಯ್ಕೆ ಆಗಬೇಕು ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ.


ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸುವವರು ಕನಿಷ್ಠ 8-10 ಕೃತಿಗಳನ್ನು ಹೊರ ತಂದಿರಬೇಕು ಹಾಗೂ ತಾಲ್ಲೂಕು ಸಮಿತಿ , ಜಿಲ್ಲಾ ಸಮಿತಿ ರಚನೆಯಲ್ಲಿ ಶೇಕಡಾ 80% ಪದಾಧಿಕಾರಿಗಳು ಸಾಹಿತಿಗಳೇ ಆಗಿರಬೇಕು ಮತ್ತು ಪದಾಧಿಕಾರಿಗಳು ಕನಿಷ್ಠ ಒಂದು ಕೃತಿಯನ್ನು ಆದರೂ ರಚಿಸಿರಬೇಕು.

ತಾಲ್ಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಸ್ಥಾನಕ್ಕೆ ಕನಿಷ್ಠ 5 ಕೃತಿಗಳನ್ನು ರಚಿಸಿರಬೇಕು ಮತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವವರು ಕನಿಷ್ಠ 10 ಕೃತಿಗಳನ್ನು ರಚಿಸಿರಬೇಕು ಆಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳು ಈಡೇರಿದಂತೆ ಆಗುತ್ತದೆ.

ಪ್ರಸ್ತುತ ಕಸಾಪ ದಲ್ಲಿ ಇರುವ ಜಿಲ್ಲಾ , ರಾಜ್ಯ ಅಧ್ಯಕ್ಷ ನೇರ ಚುನಾವಣೆ ವ್ಯವಸ್ಥೆ ಸಾಕಷ್ಟು ಗೊಂದಲ , ಸರ್ವಾಧಿಕಾರ ಧೋರಣೆ, ತಮಗೆ ಚುನಾವಣೆಯಲ್ಲಿ ಸಹಾಯ ಮಾಡಿದವರಿಗೆ ಸ್ಥಾನಗಳು, ತಮಗೆ ಬೇಕಿದ್ದವರಿಗೆ ಸಮ್ಮೇಳನ ಸರ್ವಾಧ್ಯಕ್ಷ ಅವಕಾಶಗಳು, ಕಾರ್ಯಕ್ರಮಗಳಿಗೆ ತಮ್ಮವರಿಗೇ ಉದ್ಘಾಟನೆ, ಮುಖ್ಯ ಅತಿಥಿ ಆಯ್ಕೆಗಳಿಗೆ ಕಡಿವಾಣ ಹಾಕಿದಂತಾಗುತ್ತದೆ.

ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೊಂದಿದವರಿಗೆ ಸಾಸಿವೆ ಕಾಳಿನ ಕಿಮ್ಮತ್ತು ಇಲ್ಲ, 5 ವರ್ಷಕ್ಕೆ ಒಮ್ಮೆ ಓಟು ಹಾಕುವ ಹಕ್ಕು ಬಿಟ್ಟರೆ ಬೇರೆ ಏನೂ ಇಲ್ಲ. ಇಲ್ಲಿ ಯಾವ ಸದಸ್ಯನು ಪರಿಷತ್ತು ಬಗ್ಗೆ ಚಕಾರ ಎತ್ತುವಂತಿಲ್ಲ ಒಂದು ವೇಳೆ ಬಹಿರಂಗ ಪ್ರಶ್ನೆ ಮಾಡಿದರೆ ಅಂತಹವರನ್ನು ಎಲ್ಲಾ ಕಾರ್ಯಕ್ರಮಗಳಿಂದ ದೂರ ಇಡುತ್ತಾರೆ. ತಾಲ್ಲೂಕು, ಜಿಲ್ಲಾ ಸಮಿತಿಗಳು ನಡೆಸುವ ಸಮ್ಮೇಳನದ ಲೆಕ್ಕಪತ್ರ ಕಡ್ಡಾಯವಾಗಿ ತಾಲ್ಲೂಕು, ಜಿಲ್ಲಾ ಸರ್ವ ಸದಸ್ಯರ ಸಭೆ ಕರೆದು ಮಂಡಿಸುವ ಕೆಲಸ ಆಗಬೇಕು ಇಲ್ಲವಾದರೆ ಸಮ್ಮೇಳನ ಹೆಸರಲ್ಲಿ ಸಾರ್ವಜನಿಕ, ಸಂಘ ಸಂಸ್ಥೆಗಳಿಂದ ಪಡೆಯುವ ಲಕ್ಷಾಂತರ ಹಣ ಏನಾಯಿತು ಎಂದು ತಿಳಿಯುವುದಿಲ್ಲ. ತಾಲ್ಲೂಕು ಸಮ್ಮೇಳನ ನಡೆದು 30 ದಿನಗಳಲ್ಲಿ ಸರ್ವ ಸದಸ್ಯರ ಸಭೆ ಕರೆದು ಲೆಕ್ಕಪತ್ರ ಕೊಡಬೇಕು, ಜಿಲ್ಲಾ ಸಮ್ಮೇಳನ ಜರುಗಿ 45 ದಿನಗಳಲ್ಲಿ ಸಮ್ಮೇಳನದ ಲೆಕ್ಕಪತ್ರ ಸರ್ವ ಸದಸ್ಯರ ಸಭೆ ಕರೆದು ನೀಡಬೇಕು. ಒಂದು ವೇಳೆ ಲೆಕ್ಕಪತ್ರ ನೀಡದೆ ಇದ್ದರೆ ತಾಲ್ಲೂಕು ಅಧ್ಯಕ್ಷ, ಜಿಲ್ಲಾ ಅಧ್ಯಕ್ಷರ ಪ್ರಾಥಮಿಕ ಸದಸ್ಯತ್ವ ರದ್ದು ಪಡಿಸುವ ನಿಯಮ ತರಬೇಕಿದೆ. ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಅವಧಿ ಮುಗಿಯುತ್ತಿದೆ ಬರುವ ಚುನಾವಣೆ ಒಳಗೆ ಪರಿಷತ್ತಿಗೆ ಹೊಸ ನೀತಿಗಳನ್ನು ರೂಪಿಸಲು ತಾವು ಆದೇಶ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog