ಅಂಬೇಡ್ಕರ್ ಪ್ರಪಂಚ ಕಂಡ ಶ್ರೇಷ್ಠ ಜ್ಞಾನಿ- ವೆಂಕಟೇಶ್ ಬೇವಿನಬೆಂಚಿ ಜಯ ಧ್ವಜ ನ್ಯೂಸ್ , ರಾಯಚೂರು, ಏ.16- ಅಂಬೇಡ್ಕರ್ ಅವರು ಜಗತ್ತಿನ ಎಲ್ಲಾ ರಾಷ್ಟ್ರಗಳು ಆರಾಧಿಸುವ ಶ್ರೇಷ್ಠ ಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಅಂಬೇಡ್ಕರ್ ಅವರನ್ನು ಜ್ಞಾನಿಯಾಗಿ, ಬುದ್ಧನ ಅನುಯಾಯಿಯಾಗಿ ನೋಡಬೇಕು, ಸಮಸಮಾಜ ಕಟ್ಟಲು ಶ್ರಮಿಸಿದ ದೇಶಭಕ್ತನಾಗಿ ನೋಡಬೇಕು ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ದೇಶಕ ವೆಂಕಟೇಶ ಬೇವಿನಬೆಂಚಿ ಹೇಳಿದರು. ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರ ಸಂಘಗಳ ಒಕ್ಕೂಟ ರಾಯಚೂರು ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ೧೩೫ ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಅವರು ಜಾತಿ ನಿರ್ಮೂಲನೆ ಮಾಡಲು ಶ್ರಮಿಸಿದ್ದಾರೆ,ಬಡವರ ನಾಯಕರಾಗಿದ್ದಾರೆ ಎಂಬುದು ಮಾತು ಎಷ್ಟು ನಿಜವೋ ಅಷ್ಟೆ ಈ ದೇಶದ ಹೊಸ ಭವಿಷ್ಯವನ್ನು ಕಟ್ಟಿದ್ದಾರೆ ಭಾರತೀಯರ ಹೊಸ ಬದುಕಿಗೆ ದಾರಿದೀಪವಾದ ಮಹಾನ್ ಚೇತನವಾಗಿದ್ದಾರೆ ಎಂದರು.
ಆಧುನಿಕ ಭಾರತವನ್ನು ನೋಡಬೇಕಾದರೆ ಅಂಬೇಡ್ಕರ್ ಅವರಿಂದಲೇ ನೋಡಬೇಕು, ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡರೆ ಅವರ ರಾಜಕೀಯ ಚಿಂತನೆಗಳು ಅರ್ಥವಾಗುತ್ತವೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಸ್ವಾತಂತ್ರ ಸಮಾನತೆ ಬ್ರಾತೃತ್ವ ಚಿಂತನೆಗಳು ಅಡಗಿದ್ದ ಕಾರಣಕ್ಕಾಗಿ ನಾವೆಲ್ಲ ಭಾರತೀಯರು ಸಂವಿಧಾನದ 19ನೇ ವಿಧಿಯೇ ಪ್ರಕಾರ ಎಲ್ಲರೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ. ನಮಗೆ ಅನ್ಯಾಯವಾದರೆ ನ್ಯಾಯಕ್ಕಾಗಿ ಧೈರ್ಯದಿಂದ ಕೋರ್ಟಗೆ ಹೋಗುವ ಅವಕಾಶ ನಮ್ಮ ಸಂವಿಧಾನ ನೀಡುತ್ತದೆ. ಪಶು ಪ್ರಾಣಿ, ಗಿಡಮರಗಳಿಗೂ ಬದುಕುವ ಹಕ್ಕು ಜೀವಿಸುವ ಹಕ್ಕುಗಳನ್ನು ನಮ್ಮ ಸಂವಿಧಾನ ಕೊಟ್ಟಿದೆ. ಆ ಕಾರಣಕ್ಕಾಗಿ ಇವತ್ತು ಅಂಬೇಡ್ಕರ್ ಅವರನ್ನು ನಾವು ನೆನಪು ಮಾಡಿಕೊಡಬೇಕಾಗುತ್ತದೆ ಎಂದು ತಿಳಿಸಿದರು.
ಭಾರತದಲ್ಲಿ ವಿಶೇಷವಾಗಿ ಮಹಿಳೆಯರ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತಿದ ಮೊದಲ ವ್ಯಕ್ತಿ ಅಂಬೇಡ್ಕರ್, ಮಹಿಳೆಯರಿಗೆ, ಆಸ್ತಿ ಹಕ್ಕು ವಿಚ್ಛೇದನ ಹಕ್ಕು, ಮರುಮದುವೆ ಮತ್ತು ಜೀವನನಾಂಶ ಅವಕಾಶ ಈ ಎಲ್ಲಾ ಹಕ್ಕುಗಳು ಸಿಕ್ಕಿರುವುದು ಅಂಬೇಡ್ಕರ್ ಅವರು ರಚಿಸಿದ ಹಿಂದೂ ಕೋಡ್ ಬಿಲ್ಲಿನ ಕಾರಣಕ್ಕಾಗಿ,ಮಹಿಳೆಯರು ಸಂಪೂರ್ಣ ಸ್ವಾತಂತ್ರ ಸಮಾನತೆಯನ್ನು ಪಡೆಯುವುದಕ್ಕೆ ಅವರು ತುಂಬಾನೇ ಶ್ರಮ ಪಟ್ಟಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರಾಯಚೂರು ಜಿಲ್ಲಾ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ
ವಿಭಾಗೀಯ ನಿಯಂತ್ರಣ ಅಧಿಕಾರಿ ಚಂದ್ರಶೇಖರ್ ಎಂ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಗತ್ತಿನ ಅತಿ ಹೆಚ್ಚು ದೇಶಗಳು ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಿರುತ್ತವೆ, ಇದಕ್ಕೆ ಕಾರಣ ಅವರು ಪ್ರಪಂಚ ಕಂಡ ದೊಡ್ಡ ಜ್ಞಾನಿ ಆಗಿದ್ದರು ಮತ್ತು ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನವನ್ನು ರಚಿಸಿದ ಕಾರಣಕ್ಕಾಗಿ ಮತ್ತು ಶೋಷಿತ ಸಮುದಾಯಗಳಿಗಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಅವರು ಜಗತ್ತಿನ ಸೂಪ್ರಸಿದ್ಧ ಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ , ಬಿ ಆರ್ ಶ್ರೀನಿವಾಸ್ ,ಮಹಮ್ಮದ್ ಅಬ್ದುಲ್ ಖಾದರ್ ,ಶ್ರೀ ಅಣ್ಣಪ್ಪ, ನಾಗರಾಜ್ ವಾರದ್ , ಕೆ ಎಲ್ ಚಂದ್ರಶೇಖರ್, ದೇವರಾಜ್ ಕೆ ,ಮಹಾಂತೇಶ್ ತಂಬ್ರಹಳ್ಳಿ ,ಸಿಂಗರಾಜು ,ಚಿತ್ತಾ ವಾಡಿಗಪ್ಪ, ಶ್ರೀಶೈಲಪ್ಪ, ಶಾಂತಮೂರ್ತಿ, ಜಂಬಣ್ಣ ಭಂಡಾರಿ, ಭಾವ ಸಾಬ್, ವೆಂಕಟೇಶ್ ,ಚೆನ್ನಕಾಸಿಂ ಇತರರು ಇದ್ದರು. ವೇದಿಕೆ ಕಾರ್ಯಕ್ರಮಕ್ಕಿಂತ ಮುಂಚೆ ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಯನ್ನು ಅದ್ದೂರಿಯಾಗಿ ಮಾಡಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ನೌಕರರು ಆಡಳಿತ ವರ್ಗದ ಸಿಬ್ಬಂದಿ ಭಾಗವಹಿಸಿದ್ದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುದ್ದುಕೃಷ್ಣ ಸ್ವಾಗತಿಸಿದರು, ಎಂ ಮಧು ಚಕ್ರವರ್ತಿ ನಿರೂಪಿಸಿದರು, ನಾಗೇಶ್ ಅವರು ವಂದಿಸಿದರು.



Comments
Post a Comment