ತೇಜಸ್ ಕಾರ್ಯಾಗಾರಕ್ಕೆ ಚಾಲನೆ: ಉದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ಮುಂದೆ ಬನ್ನಿ- ಸಚಿವ ಎನ್.ಎಸ್.ಬೋಸರಾಜು
ಜಯ ಧ್ವಜ ನ್ಯೂಸ್ ,ರಾಯಚೂರು ಏ.2- ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕೈಗಾರಿಕೆಗಳ ಸ್ಥಾಪನೆಗೆ ಸಹಕಾರ ನೀಡುತ್ತಿದ್ದು, ಆಸಕ್ತರು ಉದ್ಯಮಿಗಳು ಕೈಗಾರಿಕಾ ಸ್ಥಾಪನೆಗೆ ಮುಂದೆ ಬರಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಹೇಳಿದರು.
ಅವರಿಂದು ನಗರದ ಕೃಷಿ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಭಾರತ ಸರ್ಕಾರ ಉದ್ಯಮ ಮತ್ತು ಅಂತರಿಕ ವ್ಯಾಪಾರ ಉತ್ತೇಜನ ಇಲಾಖೆ, ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಹಾಗೂ ಜಿಲ್ಲಾಡಳಿತ ರಾಯಚೂರು ಇವರು ಸಂಯುಕ್ತಾಶ್ರಯದಲ್ಲಿ ತೇಜಸ್ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಒಳ್ಳೆಯ ವಾತಾವರಣ ಇದೆ. ಜಿಲ್ಲೆಯಲ್ಲಿ ಎರಡು ನದಿ, ವಿದ್ಯುತ್ ಉತ್ಪಾದನೆ, ಹತ್ತಿ, ಭತ್ತ ಹೆಚ್ಚಾಗಿ ದೊರೆಯುತ್ತದೆ. ಭಾರತ್ ಮಾಲಾ ರಸ್ತೆಯು ಸಹ ಇದೆ. ಈ ಭಾಗದಲ್ಲಿ ಕೈಗಾರಿಕಾ ಸ್ಥಾಪನೆಗೆ ಯಾರು ಅರ್ಜಿ ಹಾಕುವುದಿಲ್ಲ. ಸ್ಥಳೀಯರು ಕೈಗಾರಿಕೆ ಸ್ಥಾಪಿಸಲು ಮುಂದೆ ಬರಬೇಕೆಂದರು.
ದೇಶದಲ್ಲಿ ಮೊದಲ ಬಾರಿಗೆ ರಾಯಚೂರು ಜಿಲ್ಲೆಯಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ನಡೆಸಿ, ಸಲಹೆ-ಸೂಚನೆಗಳನ್ನು ಪಡೆಯಬೇಕು. ಕೃಷಿಗೆ ಸಂಬಂಧಿಸಿದ ಆನೇಕ ಕೈಗಾರಿಕೆಗಳನ್ನು ಸ್ಥಾಪಿಸಲು ಶ್ರಮಿಸಬೇಕು. ಇಲ್ಲಿ ಎಲ್ಲಾ ರೀತಿಯ ಕಚ್ಚಾ ವಸ್ತುಗಳ ದೊರೆಯುತ್ತವೆ. ಸೈನ್ಸ್ ಸಿಟಿ ಪ್ರಾರಂಭಿಸಲು ಭೂಮಿಯನ್ನು ಕೇಳಲಾಗಿದ್ದು, ಈಗಾಗಲೇ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಬೆಂಗಳೂರಿನಲ್ಲಿ ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದರು.
ಕರ್ನಾಟಕವು ತಲಾ ಆದಾಯದಲ್ಲಿ ದೇಶದಲ್ಲೇ ಮೊದಲನೆಯ ಸ್ಥಾನವನ್ನು ಪಡೆದಿದೆ. ರಾಯಚೂರು ಜಿಲ್ಲೆಯಲ್ಲಿ ಆದಷ್ಟು ಬೇಗನೆ ವಿಮಾನ ನಿಲ್ದಾಣ ಕಾಮಗಾರಿಯು ಪೂರ್ಣಗೊಳ್ಳಲಿದೆ. ಅಲ್ಲದೆ ರೈಲ್ವೆ ಸಂಪರ್ಕ ಕಾಮಗಾರಿ ಯೋಜನೆಯು ನಡೆಯುತ್ತದೆ ಎಂದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಮಾತನಾಡಿ, ಸ್ಟಾರ್ಟ್ ಅಪ್ ಇಂಡಿಯಾ ಎಂದರೆ ಕೇವಲ ದೊಡ್ಡ, ದೊಡ್ಡ ಸಿಟಿ ಎಂಬ ಕಲ್ಪನೆ ಕೆಲವರು ಭಾವಿಸಿದ್ದಾರೆ. ಸ್ಟಾರ್ಟ್ ಆಪ್ ಕುರಿತು ತರಬೇತಿಯನ್ನು ಪಡೆಯಲು ಸಿಟಿಗಳಿಗೆ ಹೋಗಿ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ತರಬೇತಿಯನ್ನು ಪಡೆಯುತ್ತಾರೆ. ಆದರೆ ರಾಯಚೂರಿನಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತರು ಚೆನ್ನಾಗಿ ತರಬೇತಿಯಲ್ಲಿ ತಿಳಿದುಕೊಳ್ಳಬೇಕು. ತರಬೇತಿ ನೀಡಲು ದೆಹಲಿಯಿಂದ ವಿಶೇಷ ತಂಡವು ಬಂದಿದೆ. ಅವರು ನೀಡುವ ಸಲಹೆಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಮುಂದೆ ವಿದ್ಯಾರ್ಥಿಗಳು ಯಾರ ಕೈಕೆಳಗೆ ಕೆಲಸ ಮಾಡದೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕೆಂದರು.
ಪ್ರಾಸ್ತಾವಿಕವಾಗಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಮಹಮ್ಮದ್ ಯೂಸುಫ್ ಅವರು ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ರಾಯಚೂರಿನಲ್ಲಿ ಆಯೋಜಿಸಲಾಗುತ್ತಿದ್ದು, ಇದು ಭಾರತದ ಉದ್ಯಮಶೀಲತೆಯನ್ನು ತಳಮಟ್ಟಕ್ಕೆ ತಲುಪಿಸುವ ಪ್ರಯತ್ನದಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಅಪಾರ ಉದ್ಯಮಶೀಲ ಸಾಮರ್ಥ್ಯವನ್ನು ಹೊಂದಿದೆ. ಯುವಕರು, ಮಹಿಳೆಯರು ಮತ್ತು ಮೊದಲ ಬಾರಿಗೆ ಉದ್ಯಮ ಆರಂಭಿಸುವವರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಬಲಿಷ್ಠ ಸ್ಟಾರ್ಟ್ ಆಪ್ ಪರಿಸರವನ್ನು ನಿರ್ಮಿಸಲು ಜಿಲ್ಲಾಡಳಿತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.ಈ ಕಾರ್ಯಾಗಾರವು ಆಸಕ್ತ ಉದ್ಯಮಿಗಳು, ವಿದ್ಯಾರ್ಥಿಗಳು, ನವೋದ್ಯಮಿಗಳು, ಕೈಗಾರಿಕಾ ತಜ್ಞರು ಮತ್ತು ಪರಿಸರ ಸಹಭಾಗಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ನೆಟ್ವರ್ಕಿಂಗ್ಗೆ ಅವಕಾಶ ಕಲ್ಪಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಐಐಐಟಿ ರಾಯಚೂರು ನಿರ್ದೇಶಕರಾದ ಪ್ರೋ.ಹರೀಶ್ ಕುಮಾರ್ ಸರ್ದಾನಾ, ಶಿಲ್ಪಾ ಮೆಡಿಕೇರ್ ಲಿಮಿಟೆಡ್ ಅಧ್ಯಕ್ಷರಾದ ವಿಷ್ಣುಕಾಂತ ಭುತಡ, ರಾಸಾಯನಿಕ ತಯಾರಿಕ ಸಂಘದ ಅಧ್ಯಕ್ಷರಾದ ಡಾ.ರಮೇಶ, ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ, ಜಿಲ್ಲಾ ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷರಾದ ಎಸ್. ಕಮಲ್ ಕುಮಾರ, ಕಾಟನ್ ಮಿಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ವಿ. ಲಕ್ಷ್ಮೀಕಾಂತರೆಡ್ಡಿ, ಡಿಪಿಐಐಟಿ ಸ್ಟಾರ್ಟ್ಅಪ್ ಇಂಡಿಯಾ ಅಸೋಸಿಯೇಟ್‌ಗಳಾದ ರೋಹನ್ ಸಚ್‌ದೇವ, ರವಿ, ಇಶ್ದೀಪ್ ಸಿಂಗ್, ಆಕಾಂಕ್ಷೆ ಗುಪ್ತ, ಭರತ್ ಚಂದ್ರ ಬಿ.ಕೆ., ಸಿ ಎಂ ಪಾಟೀಲ್ ಸೇರಿದಂತೆ ಇತರರು ಇದ್ದರು.




Comments
Post a Comment