ಸಿರವಾರ ಪ.ಪಂ ಸದಸ್ಯ ಕೃಷ್ಣ ನಾಯಕ್ ಹಾಗೂ ಕುಟುಂಬಸ್ಥರ ದುರ್ಮರಣಕ್ಕೆ ಸಚಿವ ಎನ್.ಎಸ್. ಬೋಸರಾಜು ತೀವ್ರ ಸಂತಾಪ
ಜಯಧ್ವಜ ನ್ಯೂಸ್ ರಾಯಚೂರು ಏಪ್ರಿಲ್ 17- ಯಾದಗಿರಿ ಜಿಲ್ಲೆಯ ಸುರಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿರವಾರ ಪಟ್ಟಣ ಪಂಚಾಯಿತಿಯ ಸದಸ್ಯರಾದ ಶ್ರೀ ಕೃಷ್ಣ ನಾಯಕ್ ಹಾಗೂ ಅವರ ಕುಟುಂಬದ ಆರು ಮಂದಿ ದುರ್ಮರಣವನ್ನಪ್ಪಿದ ಘಟನೆ ತೀವ್ರ ಆಘಾತ ಹಾಗೂ ಅತೀವ ನೋವು ತಂದಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್. ಬೋಸರಾಜು ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀ ಕೃಷ್ಣ ನಾಯಕ್ ಅವರು ಸುದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡು, ಜನಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದವರು. ಪಟ್ಟಣ ಪಂಚಾಯಿತಿ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುತ್ತಿದ್ದರು. ಇಂತಹ ಕ್ರಿಯಾಶೀಲ ಜನನಾಯಕ ಇಂದು ಭೀಕರ ಅಪಘಾತದಲ್ಲಿ ತಮ್ಮ ಪತ್ನಿ, ಪುತ್ರಿ, ಅಳಿಯ ಹಾಗೂ ಮುದ್ದು ಮೊಮ್ಮಕ್ಕಳೊಂದಿಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಅತ್ಯಂತ ಹೃದಯವಿದ್ರಾವಕ ಸಂಗತಿಯಾಗಿದೆ. ವಿಧಿಯ ಈ ಆಟ ನಿಜಕ್ಕೂ ಕ್ರೂರವಾದದ್ದು," ಎಂದು ಸಚಿವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಒಂದೇ ಕುಟುಂಬದ ಆರು ಮಂದಿಯನ್ನು ಬಲಿಪಡೆದ ಈ ಘೋರ ದುರಂತವು ಭರಿಸಲಾಗದ ನಷ್ಟವನ್ನು ಉಂಟುಮಾಡಿದೆ. ಮೃತರ ಆತ್ಮಗಳಿಗೆ ಚಿರಶಾಂತಿ ದೊರೆಯಲಿ. ಈ ಅತೀವ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ಅವರ ಕುಟುಂಬಸ್ಥರು ಮತ್ತು ಅಪಾರ ಬಂಧು-ಮಿತ್ರರಿಗೆ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ," ಎಂದು ಸಚಿವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Comments
Post a Comment