ಉರಿ ಬಿಸಿಲಿನ ತೀವ್ರತೆ ಹೆಚ್ಚಳದಿಂದ ರಾಯಚೂರು ಜನತೆ ತತ್ತರ : ಟ್ರಾಫಿಕ್ ಸಿಗ್ನಲ್ ಗಳಲ್ಲಿ ನೆರಳು ಪರದೆ ಅಳವಡಿಸಲು ಅಂಬಾಜಿರಾವ್ ಒತ್ತಾಯ.
ಜಯ ಧ್ವಜ ನ್ಯೂಸ್ ,ರಾಯಚೂರ,18-
ಉರಿ ಬಿಸಿಲಿನ ತೀವ್ರತೆ ತಗ್ಗಿಸಲು ಮಹಾನಗರ ಪಾಲಿಕೆ ಕ್ರಮ ವಹಿಸಬೇಕೆಂದು ಸಮಾಜ ಸೇವಕ ಅಂಬಾಜಿರಾವ್ ಮೈದರ್ ಕೋರ್ ಒತ್ತಾಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಯಚೂರ ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿರುವುದು ಸಾರ್ವಜನಿಕ ಜೀವನವನ್ನು ಸಂಕಷ್ಟಕರವಾಗಿಸಿದೆ. ನಗರದಲ್ಲಿನ ರಸ್ತೆಗಳಲ್ಲಿ ಸಂಚಾರ ಮಾಡುವ ಜನರಿಗೆ, ವಿಶೇಷವಾಗಿ ನಡೆದು ಹೋಗುವವರು, ದ್ವಿಚಕ್ರ ವಾಹನ ಚಾಲಕರು ಹಾಗೂ ಆಟೋ ಪ್ರಯಾಣಿಕರಿಗೆ ಉರಿ ಬಿಸಿಲು ಮತ್ತು ಬಿಸಿ ಗಾಳಿಯಿಂದ ತೀವ್ರ ತೊಂದರೆ ಉಂಟಾಗುತ್ತಿದೆ. ಜನರು ಹೊರಗೆ ತಿರುಗಾಡುವುದು ಬೆಂಕಿಯ ನಡುವೆ ಸಾಗುವಂತ ಅನುಭವವಾಗುತ್ತಿದೆ.
ಈ ತೀವ್ರ ಪರಿಸ್ಥಿತಿಯನ್ನು ಗಮನಿಸಿದರೂ, ಮಹಾನಗರ ಪಾಲಿಕೆಯ ಸಂಬಂಧಿತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿರುವ ಅವರು ನಗರದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಲು ಮುಖ್ಯ ರಸ್ತೆಗಳಲ್ಲಿ ಹಾಗೂ ವಾರ್ಡ್‌ಗಳ ಒಳರಸ್ತೆಗಳಲ್ಲಿ ನೀರಿನ ಟ್ಯಾಂಕ್‌ಗಳ ಮೂಲಕ ನಿಯಮಿತವಾಗಿ ನೀರು ಸಿಂಪಡಿಸುವಂತಹ ಮೂಲಭೂತ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದ್ದರೂ, ಈ ದಿಕ್ಕಿನಲ್ಲಿ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಜೊತೆಗೆ, ನಗರದಲ್ಲಿನ ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನ ಚಾಲಕರು ಸಿಗ್ನಲ್‌ಗಾಗಿ ನಿಲ್ಲುವ ಸ್ಥಳಗಳಲ್ಲಿ ನೆರಳು ಸೌಲಭ್ಯಗಳ ಕೊರತೆಯೂ ತೀವ್ರವಾಗಿ ಕಂಡು ಬರುತ್ತಿದೆ. ಉರಿ ಬಿಸಿಲಿನ ಮಧ್ಯೆ ಸಿಗ್ನಲ್‌ನಲ್ಲಿ ನಿಂತಿರುವ ವಾಹನ ಸವಾರರು ನೇರ ಸೂರ್ಯತಾಪಕ್ಕೆ ಒಳಗಾಗುತ್ತಿದ್ದು, ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಆದ್ದರಿಂದ, ಪ್ರಮುಖ ಸಿಗ್ನಲ್‌ಗಳಲ್ಲಿ ವಾಹನ ಚಾಲಕರಿಗೆ ನೆರಳು ಬೀಳುವಂತೆ ಸುರಕ್ಷತಾ ಪರದೆಗಳನ್ನು ಅಳವಡಿಸುವುದು ಅತ್ಯಾವಶ್ಯಕವಾಗಿದೆ.
ಈಗಲಾದರೂ ಮಹಾನಗರ ಪಾಲಿಕೆ ಎಚ್ಚರಗೊಂಡು, ಇಂದಿನಿಂದ ಜೂನ್ ಅಂತ್ಯದವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಸಮಯದಲ್ಲಿ ನಗರದಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಎಲ್ಲಾ ವಾರ್ಡ್‌ಗಳ ರಸ್ತೆಗಳಲ್ಲಿ ನೀರು ಸಿಂಪಡಿಸುವ ಕಾರ್ಯವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಸಾರ್ವಜನಿಕರ ಪರವಾಗಿ ಮನವಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ, ಎಲ್ಲಾ ಪ್ರಮುಖ ಸಿಗ್ನಲ್‌ಗಳಲ್ಲಿ ತಕ್ಷಣವೇ ನೆರಳು ಪರದೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಲಾಗುತ್ತದೆ.
ಸಾರ್ವಜನಿಕರ ಆರೋಗ್ಯ ಮತ್ತು ಹಿತಾಸಕ್ತಿಯನ್ನು ಪರಿಗಣಿಸಿ, ಮಾನವೀಯ ದೃಷ್ಟಿಕೋನದಿಂದ ಮಾನ್ಯ ಆಯುಕ್ತರು ತಕ್ಷಣವೇ ಸಂಬಂಧಿತ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ, ಸಾರ್ವಜನಿಕರ ಆಕ್ರೋಶ ಮತ್ತು ಅಸಮಾಧಾನವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments
Post a Comment