ಕಾಂಗ್ರೆಸ್ ಪಕ್ಷದ ಮಹಿಳಾ ಮೀಸಲಾತಿ ವಿರೋಧ ನೀತಿಯು ದೇಶದ ದುರಂತದ ಸಂಗತಿ- ರವೀಂದ್ರ ಜಲ್ದಾರ್ ಖಂಡನೆ.


ಜಯ ಧ್ವಜ ನ್ಯೂಸ್ , ರಾಯಚೂರು ,ಏ.18- ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿ ಎಂದಿಗೂ ಬದಲಾಗುವುದಿಲ್ಲ ಕಾಂಗ್ರೆಸ್ ಪಕ್ಷದ ಅಗ್ರ ನಾಯಕರಾದ  ಸೋನಿಯಾ ಗಾಂಧಿ ಮತ್ತು  ಪ್ರಿಯಾಂಕ ಗಾಂಧಿ ಅವರು ಸಹ ಮಹಿಳೆಯರಾಗಿದ್ದು ಮಹಿಳೆಯರಿಗಾಗಿ ಮೀಸಲಾತಿ ಕೊಡುವ ಮಹಾನ್ ಕ್ರಾಂತಿಕಾರಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದು ಅತ್ಯಂತ ದುರಂತದ ಸಂಗತಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ರವೀಂದ್ರ ಜಲ್ದಾರ್  ತೀವ್ರವಾಗಿ ಖಂಡಿಸಿದ್ದಾರೆ.

ಕಾಂಗ್ರೆಸ್ ಪಾರ್ಟಿ ಕೇವಲ ತನ್ನ ಕುಟುಂಬಕ್ಕೆ ಲಾಭವಾಗುವ ಯೋಜನೆಯನ್ನು ನೀತಿಯನ್ನು ಮಾತ್ರ ಸ್ವಾಗತ ಮಾಡುತ್ತದೆ ಎಂದು ಆರೋಪಿಸಿರುವ  ಅವರು ಮಹಿಳೆಯರ ಹಕ್ಕುಗಳ ಮೇಲೆ ಕೇವಲ ಭಾಷಣ ಮಾಡುವ ಕಾಂಗ್ರೆಸಿಗರು ಶೇ. 33% ಮಹಿಳಾ ಮೀಸಲಾತಿ ಬಿಲ್ ಮಂಡಿಸಿ ಮತಕ್ಕೆ ಹಾಕಿದಾಗ ಮಸೂದೆ ವಿರುದ್ಧ ಮತ ಚಲಾಯಿಸಿ  ಕೇಕೆ ಹಾಕುತ್ತಾ ಘೋಷಣೆ ಕೂಗತ್ತಾ ಸದನದಲ್ಲಿ ಯುದ್ಧ ಗೆದ್ದವರಂತೆ ನಡೆದುಕೊಂಡರು.ಆದರೆ ತಾವು ದೇಶದ ಮಹಿಳೆಯರ ಹಕ್ಕಿನ ವಿರುದ್ಧ ಸ್ವಾಭಿಮಾನದ ವಿರುದ್ಧ ಅವರ ಆತ್ಮಗೌರವದ ವಿರುದ್ಧ ಮತ ಹಾಕುತ್ತಿದ್ದೇವೆ ಎಂದು ಕಾಂಗ್ರೆಸ್' ನಾಯಕರಿಗೆ ಅನಿಸದೆ ಹೋದದ್ದು ನಿಜಕ್ಕೂ ದುರಂತ.  

ಮೂರು ದಶಕಗಳ ನಂತರವೂ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ಮನಸ್ಥಿತಿ  ಬದಲಾಗಿಲ್ಲ ಎನ್ನುವುದಕ್ಕೆ ಲೋಕಸಭೆ ಮತ್ತೊಮ್ಮೆ ಸಾಕ್ಷಿಯಾಯಿತು.1996ರಲ್ಲಿ ಹೆಚ್.ಡಿ. ದೇವೇಗೌಡ ಅವರ ನೇತೃತ್ವದ ಸಂಯುಕ್ತ ರಂಗ ಸರಕಾರವು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33% ರಷ್ಟು ಮೀಸಲಾತಿ ನೀಡುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡು ಸಂಸತ್ತಿನಲ್ಲಿ ಮಸೂದೆ ಮಂಡಿಸಿತ್ತು. ಅಂದು ಇದೇ ಕಾಂಗ್ರೆಸ್ ಮತ್ತು ಅವರ ಮಿತ್ರ ಶಕ್ತಿಗಳು ಆ ಪ್ರಯತ್ನವನ್ನು ವಿಫಲಗೊಳಿಸಿದ್ದವು.

ಇತಿಹಾಸದಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಮತ್ತು ಅವರ ಮಿತ್ರಪಕ್ಷಗಳು ಮಾಡಿದ ಅನ್ಯಾಯವನ್ನು  ಸರಿಪಡಿಸಲು, ಮಹಿಳೆಯರ ಸ್ಥಾನಮಾನ ಗೌರವವನ್ನು ಎತ್ತಿಹಿಡಿಯಲು ಗೌರವಾನ್ವಿತ ಪ್ರಧಾನಿಗಳಾದ  ನರೇಂದ್ರ ಮೋದಿ  ಇಟ್ಟಿದ್ದ ದಿಟ್ಟಹೆಜ್ಜೆಗೆ ಕಾಂಗ್ರೆಸ್ ಮತ್ತೆ ತನ್ನ ಕೈ ಅಡ್ಡಹಾಕಿದೆ.ಮಹಿಳಾ ಮೀಸಲು ಮಸೂದೆಯನ್ನು ಸೋಲಿಸಿದ ಕಾಂಗ್ರೆಸ್ ಕೂಟದ ಶಕ್ತಿಗಳನ್ನು ರಾಷ್ಟ್ರದ ನಾರಿಶಕ್ತಿ ಎಂದಿಗೂ ಕ್ಷಮಿಸುವುದಿಲ್ಲ. ಇದು ಮಾತೃಶಕ್ತಿಗೆ ಆಗಿರುವ ಅಪಮಾನ. ಈ ಮಸೂದೆ ಸೋಲಿಗೆ ಕಾರಣವಾದವರು ಖಂಡಿತ ಪಶ್ಚಾತಾಪ ಪಡುವ ದಿನ ಬರುತ್ತದೆ.

ದೇಶದ ಮಹಿಳಾಶಕ್ತಿಗೆ  ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮುಂದೊಂದು ದಿನ ಅಗ್ರಮನ್ನಣೆ ಸಿಕ್ಕೇ ಸಿಗುತ್ತದೆ ಎಂಬ ಆಶವಾದ ವ್ಯಕ್ತಪಡಿಸಿದ್ದಾರೆ.

Comments

Popular posts from this blog