ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆಯದಿರುವುದಕ್ಕೆ ಮಹಿಳಾ ಮೀಸಲಾತಿ ಮಸೂದೆ ಸೋಲು- ಡಾ.ರಝಾಕ್ ಉಸ್ತಾದ್ 

ಜಯ ಧ್ವಜ ನ್ಯೂಸ್ , ರಾಯಚೂರು , ಏ.18- ಕೇಂದ್ರ ಸರಕಾರ ವಿಶೇಷ ಅಧಿವೇಶನದ ಮೂಲಕ ಮಹಿಳಾ ಮೀಸಲಾತಿ ಹೆಸರಿನಲ್ಲಿ ಮಂಡಿಸಲಾದ ಮೂರು ಮಸೂದೆಗಳಿಗೆ ಅಗತ್ಯ ಬಹುಮತ ಪಡೆಯದೇ ಸೋಲಾಗಿದೆ, ಯಾವುದೇ ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಬೇಕು ಎಂದು ಗೊತ್ತಿದ್ದರೂ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಸೂದೆ ಮಂಡಿಸಿರುವದು ಇವರ ಬದ್ದತೆಯ ಪ್ರಶ್ನೆಯಾಗಿದೆ. ಇದು ಮಹಿಳಾ ಮೀಸಲಾತಿ ವಿರುದ್ದ ನಡೆದ ಬೆಳವಣಿಗೆಯಲ್ಲ, ಕೇಂದ್ರ ಸರಕಾರದ ನಿರಂಕುಶ ಆಡಳಿತಕ್ಕೆ ಆಗಿರುವ ಸೋಲು ಎಂದು ಕೆಪಸಿಸಿ ಮಾದ್ಯಮ ವಿಭಾಗ ರಾಜ್ಯ ವಕ್ತಾರರಾದ ಡಾ.ರಝಾಕ ಉಸ್ತಾದ ದೂರಿದ್ದಾರೆ.

ಬಿಜೆಪಿ ಪಕ್ಷಕ್ಕೆ ಮಹಿಳಾ ಮೀಸಲಾತಿ ಜಾರಿಗೊಳಿಸುವ ಯಾವುದೇ ಇಚ್ಚೆ ಇಲ್ಲ, ಯಾಕೆಂದರೆ 2023ರ ಮಹಿಳಾ ಮೀಸಲಾತಿ ಕಾಯ್ದೆ ರಾಷ್ಟ್ರಪತಿಗಳ ಅಂಕಿತವಾಗಿ ಮೂರು ವರ್ಷಗಳಾದರೂ ಗೆಜೆಟ್ ಅಧಿಸೂಚನೆ ಹೊರಡಿಸದೇ ಇರುವದು ಮಹಿಳಾ ಮೀಸಲಾತಿಯ ಬಗ್ಗೆ ಇವರಿಗೆ ಇರುವ ಕಾಳಜಿ ಎದ್ದು ಕಾಣುತ್ತದೆ. ಎಪ್ರಿಲ್ 16, 2026ಕ್ಕೆ ಮಹಿಳಾ ಮೀಸಲಾತಿ ಮಸೂದೆ 2023ಕ್ಕೆ ಅಧಿಸೂಚನೆ ಹೊರಡಿಸುವದು ಎಂದರೆ ಮೂರು ವರ್ಷ ಯಾವ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಇದ್ದರೂ ಎನ್ನುವದು ದೇಶದ ಜನರಿಗೆ ಇವರು ಹೇಳಬೇಕು. ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಮಂಡಿಸುವಾಗ ಕಾಯ್ದೆ ಜಾರಿಯಲ್ಲಿದೆಯೇ ಎಂದು ನೋಡಲು ಹೋಗಿ ಈಗ ಅಧಿಸೂಚನೆ ಮಾಡಿದ್ದು ಇವರ ಬೇಜವಾಭ್ದಾರಿತನ ಮತ್ತು ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

2023ರ ಮಹಿಳಾ ಮೀಸಲಾತಿ ವಿಧೆಯಕ ಶೇ33 ರಷ್ಟು ಮಹಿಳಾ ಮೀಸಲಾತಿಯೊಂದಿಗೆ 2026ರ ಜನಗಣತಿ ನಂತರ ಕ್ಷೇತ್ರಗಳ ಪುನರವಿಂಗಡಣೆಯೊಂದಿಗೆ 2029 ರಿಂದ ಜಾರಿಗೊಳಿಸಲು ಅಧಿಸೂಚಿಸಲಾಗಿದೆ, ಆದರೆ ಏಕಾ ಏಕಿ 2011ರ ಜನಗಣತಿ ಮೇಲೆ ಮಹಿಳಾ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕ ಹಾಗೂ ಕ್ಷೇತ್ರಗಳ ಪುನರ್ವಿಂಗಡಣೆ ವಿಧೇಯಕ ಮಂಡಿಸಿ ಎಲ್ಲವೂ ಸೇರಿ ಮಹಿಳಾ ಮೀಸಲಾತಿ ವಿಧೇಯಕ ಎಂದುದೇಶದ ಜನರಿಗೆ  ತೋರಿಸಲು ಪ್ರಯತ್ನ ಪಟ್ಟು ಕೈಸುಟ್ಟುಕೊಂಡ ಕೇಂದ್ರದ ಬಿಜೆಪಿ ಸರಕಾರ ಮಹಿಳಾ ಮೀಸಲಾತಿಯ ಬಗ್ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ, ಅದು 2029ರಿಂದ ಜಾರಿಯಾಗಲೇಬೇಕು, ಆದರೆ ಲೋಕಸಭಾ ಸೀಟುಗಳನ್ನು ಹೆಚ್ಚಿಸಿ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಲು ಹೊರಟ ಕೇಂದ್ರ ಸರಕಾರದ ಪ್ರಯತ್ನಕ್ಕೆ ಸೋಲಾಗಿದೆ ವಿನಹ ಮಹಿಳಾ ಮೀಸಲಾತಿಗೆ ಅಲ್ಲ ಎನ್ನುವದು ಎಲ್ಲರೂ ತಿಳಿದುಕೊಳ್ಳಬೇಕು. 

ಎಲ್ಲವನ್ನೂ ರಾಜಕೀಯ ಲೆಕ್ಕಾಚಾರದಲ್ಲಿಯೇ ಕೆಲಸ ಮಾಡುವ ಬಿಜೆಪಿ, 2024ರ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು 2023ರಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸುವ ವಿಧೇಯಕ ಮಂಡಿಸಿದ್ದರು, ಇವರಿಗೆ ಕಾಳಜಿ ಇದ್ದರೆ 2011ರ ಜನಗಣತಿಯಲ್ಲಿಯೇ ಮಹಿಳಾ ಮೀಸಲಾತಿ ಜಾರಿಗೊಳಿಸುತ್ತೇವೆ ಎಂದು ಅವತ್ತೇ ಹೇಳಬೇಕಿತ್ತು, ಅನಗತ್ಯವಾಗಿ ಶತಮಾನದಿಂದ ಜಾರಿಯಲ್ಲಿದ್ದ ಜನಗಣತಿ ಪದ್ದತಿಯನ್ನು 2021ರಲ್ಲಿ ಮಾಡದೇ ತಡೆಹಿಡಿದು ದೇಶದ ಬೆಳವಣಿಗೆಗೆ ಮಾರಕ ನಿರ್ಣಯ ಕೈಗೊಂಡು, 2026-27ರಲ್ಲಿ ಜನಗಣತಿ ನಡೆಯುತ್ತಿರುವ ಸಂದರ್ಭದಲ್ಲಿ 2011ರ ಜನಗಣತಿಯ ಮೇರೆಗೆ ಕ್ಷೇತ್ರಗಳ ಪುನರ್ವಿಂಗಡಣೆ ಮಾಡುತ್ತೇವೆ ಎಂದು ಹೇಳುವದು  ದುರಾಡಳಿತದ ಮುಂದುವರೆದ ಭಾಗವಾಗಿ ಕೇಂದ್ರ ಸರಕಾರ ಕೆಲಸ ಮಾಡುವಂತಿದೆ. ಈಗಲೂ 543 ಲೋಕಸಭಾ ಸ್ಥಾನಗಳಿಗೆ ಮಹಿಳಾ ಮೀಸಲಾತಿ ಜಾರಿಗೊಳಿಸಬಹುದಾಗಿದೆ, ಆದರೆ 850 ಸೀಟುಗಳನ್ನು ಮಾಡುತ್ತೇವೆ ಎಂದು ಅದಕ್ಕೆ ಮಹಿಳಾ ಮೀಸಲಾತಿಯ ಹಿಂದೆ ನಿಂತು ಜಾರಿಗೊಳಿಸಲು ಪ್ರಯತ್ನ ಮಾಡುವದು ಇವರ ಅಪ್ರಬುದ್ದ ನಡೆಯಾಗಿದೆ.

ಮಹಿಳಾ ಮೀಸಲಾತಿ ವಿಧೇಯಕಕ್ಕೆ ಸೋಲಾಗಿದೆ ಎಂದು, ಅದಕ್ಕೆ ವಿರೋಧ ಪಕ್ಷಗಳು ಕಾರಣ ಎಂದು ಹೇಳುವದು ಹಾಸ್ಯಾಸ್ಪದವಾಗಿದೆ, 2023ರ ಮಹಿಳಾ ಮೀಸಲಾತಿ ಕಾಯ್ದೆಯಂತೆ 2029 ರಿಂದ ಮಹಿಳಾ ಮೀಸಲಾತಿ ಜಾರಿಯಾಗಲೇಬೇಕು, ಜನರಿಂದ ಸತ್ಯ ಮುಚ್ಚಿಡುವ ಪ್ರಯತ್ನ ಕೇಂದ್ರ ಸರಕಾರ ಮಾಡುತ್ತಿದೆ.ದೇಶದ ವಿರೋಧ ಪಕ್ಷಗಳು ಪ್ರಜಾಪ್ರಭುತ್ವ ವಿರೋಧಿ, ಅಸಮರ್ಪಕ ಕ್ಷೇತ್ರಗಳ ಪುನರ್ವಿಂಗಡಣಾ ಪ್ರಕ್ರಿಯೆ ವಿರೋಧ ಮಾಡಿದ್ದಾರೆ ವಿನ: ಮಹಿಳಾ ಮೀಸಲಾತಿ ಅಲ್ಲ ಎನ್ನುವದೇ ಸತ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Comments

Popular posts from this blog