ಜಿಲ್ಲೆಯಲ್ಲಿ ಕುಡಿಯುವ  ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ- ಸಚಿವ ಡಾ.ಶರಣಪ್ರಕಾಶ್ ಪಾಟೀಲ್


ಜಯ ಧ್ವಜ ನ್ಯೂಸ್ ,ರಾಯಚೂರು ಏ.8- ಜಿಲ್ಲೆಯಲ್ಲಿ  ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ರಾಯಚೂರು ಜಿಲ್ಲಾ ಉಸ್ತುವಾರಿ , ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಸೂಚಿಸಿದರು.

ಅವರಿಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಮತ್ತು ಜಾನುವಾರುಗಳಿಗೆ ಮೇವಿನ ಲಭ್ಯತೆಯ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಜಿಲ್ಲೆಯ ಗ್ರಾಮ ಪಂಚಾಯತಿಗಳು, ನಗರ ಸ್ಥಳೀಯ ಸಂಸ್ಥೆಗಳು, ಬೇಸಿಗೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಹೆಚ್ಚಿನ ಒತ್ತು ನೀಡಬೇಕು. ಯಾವುದೇ ಅಡೆತಡೆ ಇಲ್ಲದೆ ನೀರು ಪೂರೈಸಲು ಗಮನ ಹರಿಸಬೇಕು. ಸ್ಥಳೀಯ ಸಮಸ್ಯೆಗಳನ್ನು ತಮ್ಮ ಹಂತದಲ್ಲಿ ಪರಿಹರಿಸಿ ಗ್ರಾಮ ಪಂಚಾಯತ್ಗಳು ಮತ್ತು ಸ್ಥಳೀಯ ಸಂಸ್ಥೆಗಳ ಅನುದಾನ ಬಳಸಿಕೊಂಡು ಕಾಮಗಾರಿ ನಡೆಸಬೇಕು. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಅವರು ತಿಳಿಸಿದರು.


ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿ ಮಾಡಿ, ಕೂಡಲೇ ಆಯಾ ಗ್ರಾಮಗಳಲ್ಲಿರುವ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿ ಕೊಳ್ಳುವುದು ಆಯಾ ತಾಲೂಕಿನ ತಹಶೀಲ್ದಾರ್, ತಾಲೂಕು ಪಂಚಾಯತ್ ಇಓ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಗಳದ್ದಾಗಿರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಯೊಂದು ತಾಲೂಕು ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿದ್ದರೆ, ಮತ್ತು ಸಮಸ್ಯೆಗಳನ್ನು ಬಗೆಹರಿಸಿರುವ ಬಗ್ಗೆ ಆಯಾ ಕ್ಷೇತ್ರದ ಶಾಸಕರ ಗಮನಕ್ಕೆ ತರಬೇಕು ಮತ್ತು ಪ್ರತಿಯೊಂದು ಮಾಹಿತಿಯನ್ನು ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ನೀಡಬೇಕು. ಪ್ರಸ್ತುತ ತುಂಗಭದ್ರಾ ಜಲಾಶಯದಲ್ಲಿ 17.26 ಟಿಎಂಸಿ ನೀರು ಸಂಗ್ರಹವಿದ್ದು, ಜೊತೆಗೆ 200 ಕ್ಯೂಸೆಕ್ ನೀರು ಒಳಹರಿವು ಇದ್ದು, ಸಿಂಧನೂರು ಮಾನ್ವಿ ಹಾಗೂ ರಾಯಚೂರು ತಾಲೂಕಿನ ಗ್ರಾಮಗಳಿಗೆ ಸಮರ್ಪಕ ನೀರು ಒದಗಿಸಬಹುದಾಗಿದೆ. ಜಲಾಶಯ ದಲ್ಲಿ ನೀರಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದರು.


ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ 153 ಕೆರೆಗಳಿದ್ದು, ಅದರಲ್ಲಿ 28 ಕೆರೆಗಳು ಶೇ.51ರಿಂದ 75 ರಷ್ಟು ತುಂಬಿವೆ. 42 ಕೆರೆಗಳು ಶೇ.50 ರಷ್ಟು ತುಂಬಿದ್ದು, 84 ಕೆರಗೆಲೂ ಇನ್ನೂ ಶೇ.25ರಷ್ಟು ಸಹ ತುಂಬಿಲ್ಲ. ಕೂಡಲೇ ಎಲ್ಲಾ ಕೆರೆಗಳನ್ನು ಶೇ.100ರಷ್ಟು ಭರ್ತಿ ಮಾಡಬೇಕು. ಕಳೆದ ಬಾರಿ ನೀರಿನ ಸಮಸ್ಯೆಯನ್ನು ನೀಗಿಸಲು ಬಾಡಿಗೆಗೆ ಪಡೆದಿದ್ದ ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳ ಬಾಡಿಗೆ ಪಾವತಿಸದಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಬಾಕಿ ಉಳಿದಿರುವ ಬಾಡಿಗೆ ಮೊತ್ತವನ್ನು ಆಯಾ ಬೋರ್‌ವೆಲ್ ಮತ್ತು ಟ್ಯಾಂಕರ್ ನೀಡಿದವರಿಗೆ ಪಾವತಿ ಮಾಡಬೇಕು ಮತ್ತು ಈ ಬಾರಿ ಜಿಲ್ಲೆಯಲ್ಲಿ 35 ಗ್ರಾಮ ಪಂಚಾಯತ್‌ಗಳ 53 ಗ್ರಾಮಗಳಲ್ಲಿ 62 ಬೋವೆಲ್ ಗಳನ್ನು ಬಾಡಿಗೆ ಪಡೆಯಲಾಗಿದ್ದು, ಅಗತ್ಯವಿದ್ದರೆ, ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದು ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿರುವ 782 ಆರ್ ಒ ಪ್ಲಾಂಟ್‌ಗಳಲ್ಲಿ 589 ಘಟಕಗಳು ಚಾಲ್ತಿಯಲ್ಲಿವೆ ಉಳಿದ ಪ್ಲಾಂಟ್‌ಗಳನ್ನು ಶೀಘ್ರವೇ ಆರಂಭಿಸಬೇಕು. ಪ್ರತಿಯೊಂದು ಪ್ಲಾಂಟ್ಗಳ ರಿಪೇರಿಗಾಗಿ 50 ಸಾವಿರದಂತೆ ವೆಚ್ಚ ಮಾಡಲು ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಅಗತ್ಯವಿದ್ದರೆ ಆಯಾ ಗ್ರಾಮ ಪಂಚಾಯತಿಯಿಂದ ವೆಚ್ಚ ಮಾಡಿ ಗ್ರಾಮಗಳಲ್ಲಿ ನೀರು ಶುದ್ದೀಕರಣ ಘಟಕಗಳನ್ನು ಆರಂಭಿಸಬೇಕು ಎಂದರು.

ಸಿಂಧನೂರು ನಗರಸಭೆ ವ್ಯಾಪ್ತಿಯಲ್ಲಿನ 31 ವಾರ್ಡ್ಗಳಲ್ಲಿ 8 ದಿನಕ್ಕೊಮ್ಮೆ ನೀರು ಸರಬರಾ ಜು ಮಾಡಲಾಗುತ್ತಿದ್ದು, ಮುದಗಲ್ ನಲ್ಲಿ 10 ದಿನಕ್ಕೊಮ್ಮೆ, ಹಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 8 ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಕೂಡಲೇ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಜನರಿಗೆ ಸಮರ್ಪಕವಾಗಿ ನೀರನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕಯಗೊಳ್ಳಬೇಕು ಎಂದರು.

ಇದೇ ವೇಳೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ರಾಯಚೂರು ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮೂಲದಿಂದ ಮಾತ್ರ ಕುಡಿಯುವ ನೀರನ್ನು ಪಡೆಯಬಹುದಾಗಿದ್ದು, ಕಳೆದ ಬಾರಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 14 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು ಅದಕ್ಕಾಗಿ 50 ಲಕ್ಷ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಈವರೆಗೆ ಕೇವಲ 6-7 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದ ಬಾಡಿಗೆ ಮೊತ್ತವನ್ನು ನೀಡಿಲ್ಲ. ಹಳ್ಳಿಗಳಿಗೆ ಹೇಗೆ ಮುಖ ಹೊತ್ತು ಹೋಗಬೇಕು. ಮೊದಲ ಆಧ್ಯತೆಯಾಗಿ ಟ್ಯಾಂಕರ್ ಮತ್ತು ಬೋರ್‌ವೆಲ್ ಬಾಡಿಗೆ ಪಡೆದವರಿಗೆ ಬಾಡಿಗೆ ಹಣವನ್ನು ಪಾವತಿ ಮಾಡಬೇಕು ಎಂದು ತಿಳಿಸಿದರು.

ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯ ಕುರಿತು ಮಾಹಿತಿ ನೀಡಲು ಸಾರ್ವಜನಿಕರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಆದರೆ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರುಗಳಿವೆ. ಸಾರ್ವಜನಿಕರು ಕುಡಿಯುವ ನೀರಿನ ಕುರಿತು ಮಾಹಿತಿ ನಿಡಿದಾಗ ಅದಕ್ಕೆ ಸಂಬಂಧಪಟ್ಟ ನೋಡೆಲ್ ಅಧಿಕಾರಿಗಳು ಮತ್ತು ಸಹಾಯವಾಣಿ ಸಿಬ್ಬಂದಿ ಸ್ಪಂಧಿಸಬೇಕು ಎಂದರು.

ಮಾನ್ವಿಶಾಸಕ ಹಂಪಯ್ಯ ನಾಯಕ ಅವರು ಮಾತನಾಡಿ, ಮಾನ್ವಿ ತಾಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಗೇಜ್ ಕಡಿಮೆಯಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಇದರಿಂದ ಕೆರೆ ತುಂಬಿಸಲು ಆಗುತ್ತಿಲ್ಲ ಎಂದರು.

ಜಿಲ್ಲೆಯಲ್ಲಿ ಜೆಜೆಎಂ ಯೋಜನೆಯಡಿಯಲ್ಲಿ ಒಟ್ಟು 1210 ಕಾಮಗಾರಿಗಳ ಗುರಿಯಿದ್ದು, ಅದರಲ್ಲಿ 1129 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ 81 ಕಾಮಗಾರಿಗಳು ಪ್ರಗತಿಯಲ್ಲಿವೆ. ಈವರೆಗೆ ಶೇ.51 ರಷ್ಟು ಆರ್ಥಿಕ ಪ್ರಗತಿ ಸಾಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ ಕಾಂದೂ, ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಜಿಲ್ಲಾ ಪಂಚಾಯತ ಯೋಜನೆ ಅಧಿಕಾರಿ ಶರಣಬಸವರಾಜ, ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಪ್ರಕಾಶ್, ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕು ತಹಶೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಸಭೆಯಲ್ಲಿದ್ದರು.

Comments

Popular posts from this blog