ಅಭಯ ಹಸ್ತ- ಧರ್ಮ ರತ್ನಾಕರ ಶ್ರೀ ನರಸಿಂಗರಾವ್ ದೇಶಪಾಂಡೆ
ಹಿರಿಯ ವ್ಯಕ್ತಿಯ, ಯಶಸ್ವೀ ಪುರುಷನ ಜೀವನ ಕಥನವನ್ನು ನೈಜವಾಗಿ ದಾಖಲಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ದಾಖಲಿಸುವವರು ಹತ್ತಿರದ ಸಂಬoಧಿಗಳೇ ಆಗಿದ್ದರೆ, ಅದು ಬಹು ಸವಾಲಿನ ಕಾರ್ಯವೇ ಹೌದು. ಕೇವಲ ಜೀವನದ ವಿವರಗಳನ್ನು ನೀಡಿದರೆ, ನೀರಸವಾಗುತ್ತದೆ. ಈ ಅಪಾಯವನ್ನು ತಪ್ಪಿಸಲು ವೈಭವೀಕರಿಸಿದರೆ, ನೈಜ ಚಿತ್ರಣಕ್ಕೆ ಎರವಾಗುತ್ತದೆ. ಆದ್ದರಿಂದ ಉತ್ಪ್ರೇಕ್ಷಿತವಾಗದಂತೆ ಒಟ್ಟು ಜೀವನವನ್ನು ಒರೆಹಚ್ಚಿ, ಪರಿಶೀಲಿಸಿ ಅನಾವರಣಗೊಳಿಸಲು ತಾಳ್ಮೆಯೂ, ವಾಸ್ತವಿಕ ಪ್ರಜ್ಞೆಯೂ ಅವಶ್ಯಕವಾಗುತ್ತದೆ.
ಈ ನಿಟ್ಟಿನಲ್ಲಿ ಶ್ರೀ ನರಸಿಂಗರಾವ್ ದೇಶಪಾಂಡೆ ಮುದ್ಗಲ್ ಇವರ ಜೀವನದ ವಿವರಗಳನ್ನು ಅವರ ಕಿರಿಯ ಸಹೋದರ ಶ್ರೀ ಶ್ರೀನಿವಾಸ ದೇಶಪಾಂಡೆಯವರ ಅಭಯ ಹಸ್ತ ಎನ್ನುವ ಕೃತಿ ವಾಸ್ತವಿಕ ಅರಿವನ್ನು ಇಟ್ಟುಕೊಂಡು ಎಲ್ಲಿಯೂ ಹದ ತಪ್ಪದಂತೆ ಎಚ್ಚರ ವಹಿಸಿ ಈ ಸುಂದರ ಕೃತಿಯಲ್ಲಿ ದಾಖಲಿಸಿದ್ದಾರೆ. ಧರ್ಮೋ ರಕ್ಷತಿ ರಕ್ಷಿತ: ಎನ್ನುವ ಆರ್ಷವಾಕ್ಯವನ್ನು ತಮ್ಮ ಜೀವನದ ಧ್ಯೇಯವಾಕ್ಯವನ್ನಾಗಿ ಮಾಡಿಕೊಂಡು, ಅದರಂತೆ ಬಾಳಿನುದ್ದಕ್ಕೂ ಪರಿಪಾಲಿಸಿಕೊಂಡು ಬರುತ್ತಿರುವ ನರಸಿಂಗರಾವ್ ಅವರ ಮೌಲ್ಯನಿಷ್ಠೆಯು ಈ ಕೃತಿಯಲ್ಲಿ ಚೆನ್ನಾಗಿ ವ್ಯಕ್ತವಾಗಿದೆ. ಅವರ ಸೋದರ ಪ್ರೀತಿ, ಪರೋಪಕಾರ ಗುಣ, ಔದಾರ್ಯ, ಗುರು-ಹಿರಿಯರಲ್ಲಿ ಗೌರವ, ಸಹನೆ ಈ ಎಲ್ಲ ಗುಣಗಳನ್ನು ಅವರ ಜೀವನ ಹಲವಾರು ಪ್ರಸಂಗಗಳ ಮೂಲಕ ಶ್ರೀನಿವಾಸ ಅವರು ಓದುಗರಿಗೆ ಕಟ್ಟಿಕೊಡುತ್ತಾರೆ. ಪ್ರಾರಂಭದಲ್ಲಿ ಲೇಖಕರು ತಾನು ಈ ಪುಸ್ತಕವನ್ನು ಯಾವ ಕಾರಣಕ್ಕಾಗಿ ಬರೆದೆ ಎಂಬುದನ್ನು ಮನೋಜ್ಞವಾಗಿ ತಿಳಿಸುತ್ತ, ಒದುಗನಿಗೆ ಆಸಕ್ತಿಯನ್ನು ಹುಟ್ಟಿಸುತ್ತಾರೆ. ಅವರು ಬರೆಯುತ್ತಾರೆ- ವಾಚಕ ಮಹಾಶಯರು ಈ ಪುಸ್ತಕವನ್ನು ಏಕೆ ಓದಬೇಕು? ಇದು ಒಂದು ಕಾಲದ ಕೂಡು ಕುಟುಂಬದ ಕಥೆ. ಹಿರಿಯಣ್ಣನಾದವನು ತಂದೆಯ ಜೊತೆಗೂಡಿ ಮನೆತನವ ಮುನ್ನಡೆಸಿದ ಕಥೆ. ಸತ್ಯಕ್ಕೆ ಹತ್ತಿರವಾದ ಕಥೆ. ಇನ್ನೊಬ್ಬರಿಗೆ ಮಾದರಿಯಾದೀತು ಎಂಬ ಸದಾಶಯವನ್ನು ಹೊತ್ತ ಕಥೆ.-
ಈ ಮಾತುಗಳು ಪುಸ್ತಕದ ಕುರಿತ ಕುತೂಹಲವನ್ನು ಹೆಚ್ಚಿಸುತ್ತವೆ. ಓದಲು ಪ್ರೇರೇಪಿಸುತ್ತವೆ. ಕೃತಿಯು ಕೊನೆಯವರೆಗೂ ಓದಿಸಿಕೊಳ್ಳುವುದಲ್ಲದೆ ಎಲ್ಲಿಯೂ ನಿರಾಸೆಯನ್ನು ಉಂಟು ಮಾಡುವುದಿಲ್ಲ. ನರಸಿಂಗರಾಯರು ಲೌಕಿಕ ವಿದ್ಯೆಯನ್ನು ಪಡೆದು, ಹಲವರಂತೆ ಸರ್ಕಾರಿ ಉದ್ಯೋಗಕ್ಕೆ ಸೇರಿ, ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು ನಿಜ. ಆದರೆ ಅವರ ಜೀವನದೃಷ್ಟಿಕೋನ ವಿಭಿನ್ನವಾಗಿತ್ತು. ತಂದೆಯಿಂದ ಬಳುವಳಿಯಾಗಿ ಬಂದ ಸಜ್ಜನಿಕೆ, ಸಂಸ್ಕಾರ; ತಾವು ಗಳಿಸಿಕೊಂಡ ಸಚ್ಚಾರಿತ್ರö್ಯ ಅವರನ್ನು ಎತ್ತರದ ಸ್ಥಾನದಲ್ಲಿ ಕೂಡಿಸಿದವು. ಕಿರಿಯ ಸಹೋದರರ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಏರ್ಪಾಡು ಮಾಡಿ ತಮಗೆ ಬರುತ್ತಿದ್ದ ೯೦ ರೂ, ಮಾಸಿಕ ವೇತನದಲ್ಲಿ ರೂ, ೫೦ ನ್ನು ಅವರ ವಿದ್ಯಾಭ್ಯಾಸಕ್ಕಾಗಿ ಕಳಿಸುತ್ತಿದ್ದರು. ಒಬ್ಬ ಸಹೋದರರನ್ನು ಬಳ್ಳಾರಿಯಲ್ಲಿ ವೈದ್ಯಕೀಯ ಕಲಿಯಲು, ಮಗದೊಬ್ಬ ಸಹೋದರರಿಗೆ ಎಂ.ಎಸ್ಸಿ ಅಧ್ಯಯನಕ್ಕೆ ಸಕಲ ಅನುಕೂಲತೆಗಳನ್ನು ಒದಗಿಸಿ ಭಾತೃಪ್ರೇಮವನ್ನು ಮೆರೆದ ಪ್ರಸಂಗಗಳು ಹೃದ್ಯವಾಗಿ ಈ ಕೃತಿಯಲ್ಲಿ ಮೂಡಿವೆ. ರಾಮಾಯಣವು ತೆರೆದಿಡುವ ಕೌಟುಂಬಿಕ ಮೌಲ್ಯವು ಪ್ರತ್ಯಕ್ಷವಾಗಿ ದೇಶಪಾಂಡೆಯವರ ಕುಟುಂಬದಲ್ಲಿ ಕಾಣಿಸುತ್ತದೆ ಎಂದರೆ ಅದು ಅತಿಶಯೋಕ್ತಿಯ ಮಾತಲ್ಲ. ಅವರ ಎಲ್ಲ ಕಿರಿಯ ಸಹೋದರರು ಇವತ್ತು ಉನ್ನತ ಸ್ಥಾನಗಳಲ್ಲಿ ನೆಲೆನಿಂತು, ಅದಕ್ಕೆ ತಮ್ಮ ಈ ಹಿರಿಯ ಸಹೋದರನ ಪ್ರೋತ್ಸಾಹ ಹಾಗೂ ಬೆನ್ನಿಗಾಸರೆಯಾಗಿರುವ ಸನ್ನಿವೇಶಗಳನ್ನು ಜ್ಞಾಪಿಸಿಕೊಳ್ಳುವ ಪರಿ ನಿಜಕ್ಕೂ ಆದರ್ಶಪ್ರಾಯವಾಗಿದೆ.
ಕುಟುಂಬದ ಸದಸ್ಯರೊಂದಿಗೆ ಅಷ್ಟೆಯಲ್ಲ, ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೊಡನೆಯೂ ಸೌಹಾರ್ದತೆಯಿಂದ ವರ್ತಿಸುವ ಅವರ ಮಾನವೀಯ ಗುಣ ಆಪ್ಯಾಯಮಾನವಾಗಿ ಈ ಕೃತಿಯಲ್ಲಿ ವ್ಯಕ್ತವಾಗಿದೆ.
ಮುದಗಲ್ಲಿನಲ್ಲಿ ತಮ್ಮ ಸಹೋದರರ ಮತ್ತು ಇನ್ನಿತರ ಸಜ್ಜನ ಬಂಧುಗಳ ಸಹಕಾರದಿಂದ ಪೂಜ್ಯರಾದ ಶ್ರೀ ವಿದ್ಯಾಮಾನ್ಯತೀರ್ಥರು, ಶ್ರೀ ವಿಶ್ವಪ್ರಿಯತೀರ್ಥರು ಮತ್ತು ಶ್ರೀವಿದ್ಯಾಧೀಶತೀರ್ಥರು ಹೀಗೆ ಯತಿತ್ರಯರ ಚಾತುರ್ಮಾಸ್ಯವನ್ನು ಏರ್ಪಡಿಸಿದ್ದು ಅವರ ಧಾರ್ಮಿಕ ಜೀವನದ ವಿಶೇಷ ಘಟ್ಟ ಎಂದು ಈ ಕೃತಿಯಿಂದ ತಿಳಿಯುತ್ತದೆ. ಅವರ ಆಧ್ಯಾತ್ಮಿಕ ಬದುಕಿಗೆ ವೇಗೋತ್ಕರ್ಷವನ್ನು ನೀಡಿತು ಎಂದು ಕೃತಿಕಾರರು ಬರೆಯುತ್ತಾರೆ. ತಪಸ್ವಿಗಳಾದ, ಪ್ರಾತಃಸ್ಮರಣೀಯರಾದ ಶ್ರೀ ವಿದ್ಯಾಮಾನ್ಯತೀರ್ಥರು ಮುದಗಲ್ಲಿನ ಚಾತುರ್ಮಾಸ್ಯವನ್ನು ತಮ್ಮಜೀವನದ ಶುದ್ಧ ಚಾತುರ್ಮಾಸ್ಯವೆಂದು ಶಿಷ್ಯರಾದ ಶ್ರೀ ವಿಶ್ವೇಶತೀರ್ಥರಿಗೆ ಬಣ್ಣಿಸಿದ್ದು ಒಬ್ಬ ಹಿರಿಯ ಯತಿಯ ಪರಮಾನುಗ್ರಹವೆಂದು ದೇಶಪಾಂಡೆಯವರು ಜ್ಞಾಪಿಸಿಕೊಳ್ಳುತ್ತಾರೆ.
ನಂತರದ ಅವರ ಜೀವನವು ಧರ‍್ಮಿಕ, ಸಾಮಾಜಿಕ ನೆಲೆಯಲ್ಲಿ ರೂಪುಗೊಂಡುದರ ಬಗೆಗೆ ಹಲವು ಪ್ರಸಂಗಗಳನ್ನು ದಾಖಲಿಸುತ್ತಾರೆ. ಯತಿಗಳ, ವಿದ್ವಾಂಸರ ಸಂಪರ್ಕ, ಅತಿಥಿ ಸತ್ಕಾರ, ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ, ಬಡ ಹೆಣ್ಣುಮಕ್ಕಳ ಮದುವೆ ಇತ್ಯಾದಿಗಳಿಗೆ ಸಹಾಯ-ಈ ಎಲ್ಲ ಕೈಂಕರ್ಯಗಳನ್ನು ನಿರ್ಲಿಪ್ತತೆಯಿಂದ, ಕೆರೆಯ ನೀರನ್ನು ಕೆರೆಗೆ ಚೆಲ್ಲಬೇಕು ಎನ್ನುವ ಮನೋಭಾವದಿಂದ ನಡೆಸಿದ ಒಂದು ಸಾರ್ಥಕ ಬದುಕಿನ ಚಿತ್ರಣವು ಸೊಗಸಾಗಿ ಚಿತ್ರಿತವಾಗಿದೆ. ಅವರ ಮನೆಯ ಹೆಸರು ‘ವಿಶ್ವಪ್ರಿಯ’ ವಾಗಿರುವುದು ಸಂತರು, ಯತಿಗಳ ಮೇಲಿನ ಅವರ ಭಕ್ತಿಯ ದ್ಯೋತಕವಾಗಿದೆ.
ಅವರ ತಂದೆಯವರ ಸಾತ್ವಿಕ ಗುಣ, ದೊಡ್ಡ ಕುಟುಂಬವನ್ನು ನಿಭಾಯಿಸಿದ ರೀತಿ; ಮಕ್ಕಳ ಕೂಡು ಕುಟುಂಬಕ್ಕೆ ಯಾವ ಬಗೆಯಲ್ಲಿ ಪ್ರೇರಣೆಯಾಯಿತು, ಅವರ ಮುಂದಿನ ಜೀವನಕ್ಕೆ ಹೇಗೆ ಮಾರ್ಗದರ್ಶಿಯಾಯಿತು ಎಂಬ ಅಂಶವನ್ನೂ ನಾವು ಇಲ್ಲಿ ಕಾಣುತ್ತೇವೆ. ತಂದೆಯ ಬದುಕಿನ ಪಾಠವೇ ಮಕ್ಕಳು ತಮ್ಮ ಬದುಕು ಕಟ್ಟಿಕೊಳ್ಳಲು ಕಾರಣವಾದದ್ದು ಚೇತೋಹಾರಿಯಾಗಿದೆ. ತಂದೆಯ ಸಾವು, ಟಿ.ವಿ.ಯಲ್ಲಿ ಬರುತ್ತಿರುವ ರಾಮಾಯಣದ ಪುಷ್ಪಕವಿಮಾನದ ಸನ್ನಿವೇಶದೊಂದಿಗೆ ಮಿಳಿತಗೊಳಿಸಿದ ಪ್ರಸಂಗವು ಶರಣರ ಸಾವನ್ನು ಮರಣದಲ್ಲಿ ಕಾಣು ಎನ್ನುವ ಮಾತನ್ನು ನೆನಪಿಸುತ್ತದೆ. ದೇಶಪಾಂಡೆಯವರೂ ಕ್ಯಾನ್ಸರ್ ನಿಂದ ಮುಕ್ತರಾದದ್ದು ದೇವರಲ್ಲಿನ ಅಚಲ ನಂಬಿಕೆ ಹಾಗೂ ಸತ್ಕರ್ಮಗಳೇ ಕಾರಣ ಎಂದು ಕೃತಿಯ ಲೇಖಕರು ಸಾರುತ್ತಾರೆ. ಅವರು ಮೃತ್ಯವನ್ನು ಜಯಿಸಿದ ಪರಿಯು ಯಲ್ಲಿಯೂ ಪಾಂಪಸ್ ಆಗದಂತೆ ನಿರೂಪಿತವಾಗಿದೆ.
ನರಸಿಂಗರಾವ ಅವರ ಧರ್ಮಪತ್ನಿಯ ಕುರಿತು ಅಂದರೆ ತಮ್ಮ ಅತ್ತಿಗೆಯ ಬಗ್ಗೆ ಲೇಖಕರು ಒಂದು ಅಧ್ಯಾಯವನ್ನು ಮೀಸಲಿಟ್ಟಿದ್ದಾರೆ. ಅದು ಸಹಜವೂ ಹೌದು. ದಾನ ಧರ್ಮಗಳಲ್ಲಿ ಒಂದು ಕೈ ಮೇಲು ಎನ್ನುವಷ್ಟು ದೇಶಪಾಂಡೆಯವರ ಎಲ್ಲ ಸತ್ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿರುವ ವಿಷಯ, ಬಂದ ಅತಿಥಿ ಅಭ್ಯಾಗತರನ್ನು ಸತ್ಕರಿಸುವದರಲ್ಲಿ, ಕುಟುಂಬದ ಸದಸ್ಯರನ್ನು ನೋಡಿಕೊಳ್ಳುವುದರಲ್ಲಿ ಅವರ ವಹಿಸಿದ ಪಾತ್ರವು ಮನೋಜ್ಞವಾಗಿ ಮೂಡಿದೆ. ಕೃತಿಯು ಪೂರ್ಣಗೊಳ್ಳುವ ಸಮಯದಲ್ಲಿಯೇ ಅತ್ತಿಗೆಯವರು ದೈವಾಧೀನರಾದ ವಿಷಯವನ್ನು ಬರೆಯುವ ಪ್ರಸಂಗ ಬಂದೊದಗಿರುವುದು ದುರದೃಷ್ಟಕರ ಎಂಬ ಮಾತು ಮನತಾಗುತ್ತದೆ.
ಪುಸ್ತಕದ ಕೊನೆಯಲ್ಲಿ ಮಕ್ಕಳು ಮೊಮ್ಮಕ್ಕಳಾದಿಯಾಗಿ ಕುಟುಂಬದ ಎಲ್ಲ ಸದಸ್ಯರು ದೇಶಪಾಂಡೆಯವರ ಬಗ್ಗೆ ತಮ್ಮ ಅಂತರಾಳದ ಅನಿಸಿಕೆಗಳನ್ನು ಮುಕ್ತವಾಗಿ ಅಷ್ಟೇ ಸಹಜವಾಗಿ ಹಂಚಿಕೊಂಡಿದ್ದಾರೆ. ಕುಟುಂಬದ ಒಬ್ಬ ಹಿರಿಯ ವ್ಯಕ್ತಿ ಇವತ್ತಿನ ಪೀಳಿಗೆಯ ಮಕ್ಕಳಿಗೆ ಹೇಗೆ ಸಂಸ್ಕಾರ ಕೊಡಬಲ್ಲ, ಪರಂಪರೆಯ ನಿತ್ಯ ನೂತನ ಮೌಲ್ಯಗಳನ್ನು ಹೇಗೆ ದಾಟಿಸಬಲ್ಲ, ಜಾಗತೀಕರಣದ ಈ ಹೊತ್ತಿನಲ್ಲಿ ಕೌಟುಂಬಿಕ ಮೌಲ್ಯ ನಮ್ಮ ಉತ್ಕರ್ಷಕ್ಕೆ ಹೇಗೆ ಕಾರಣವಾಗುತ್ತದೆ ಎಂಬ ವಿಷಯವನ್ನು ಈ ಭಾಗದಿಂದ ನಾವು ಅರಿಯುತ್ತೇವೆ.
ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ನಾಡಿನ ಖ್ಯಾತ ಲೇಖಕರಾದ, ಶ್ರೀ ಜೋಗಿಯವರು, ಇದನ್ನು ಒಂದು ಕುಟುಂಬದ ಕತೆಯಾಗಿಯೇ ನೋಡಬೇಕು. ಇದರ ಕೇಂದ್ರ ಪಾತ್ರ ನರಸಿಂಗರಾವ್ ಆಗಿದ್ದರೂ ಅವರ ಸಾಹಸಮಯ ಜೀವನದ ಕಥನ ಆಗುವುದರ ಜತೆಗೇ ಇದು ಕೂಡು ಕುಟುಂಬದ ಕತೆಯೂ ಆಗಿದೆ. ಸ್ವಾತಂತ್ರö್ಯಪೂರ್ವದ ಬಡ ಬ್ರಾಹ್ಮಣ ಕುಟುಂಬಗಳ ಬದುಕು ಹೇಗಿತ್ತು ಅನ್ನುವುದನ್ನೂ ಇದು ಹೇಳುತ್ತದೆ. ಹೀಗಾಗಿ ಈ ಕೃತಿ ಏಕಕಾಲಕ್ಕೆ ವ್ಯಯಕ್ತಿಕವೂ ಸಾರ್ವತ್ರಿಕವೂ ಆಗಿ ಬಿಡುತ್ತದೆ ಎನ್ನುತ್ತಾರೆ.
ಹಿನ್ನುಡಿ ಬರೆದ ಡಾ. ಬಿ. ಜನಾರ್ದನ ಭಟ್ಟರ ಮಾತುಗಳೊಂದಿಗೆ ಈ ಒಕ್ಕಣೆಯನ್ನು ಮುಗಿಸುತ್ತೇನೆ. ಆ ಕಾಲದ ಬದುಕಿನ ವಿವಿಧ ರಂಗು ರೇಖೆಗಳು ಮೂಡುತ್ತಾ ಒಂದು ಕ್ಯಾನ್ವಾಸ್ ತುಂಬಿಕೊಳ್ಳುವ ಬರೆವಣಿಗೆ ಕ್ರಮ, ಬದುಕನ್ನು ನಿರ್ಲಿಪ್ತವಾಗಿ ಕಟ್ಟಿಕೊಡಲು ಸೂಕ್ತವಾದ ಸರಳ ಸೌಂದರ್ಯವನ್ನು ಹೊಂದಿದೆ. (ಶ್ರೀ ನರಸಿಂಗರಾವ್ ದೇಶಪಾಂಡೆಯವರ ಜೀವನ ಕುರಿತು ಶ್ರೀನಿವಾಸ ದೇಶಪಾಂಡೆಯವರು ಬರೆದ ಕೃತಿಯ ಲೋಕಾರ್ಪಣೆ ಇಂದು. ಆ ನಿಮಿತ್ತ ಪುಸ್ತಕದ ಪರಿಚಯಾತ್ಮಕ ಲೇಖನ)
-ಲೇಖಕರು: ವಸುಧೇಂದ್ರ ಸಿರವಾರ.



Comments
Post a Comment