ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆ : ದೇಶಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಜಯಧ್ವಜ ನ್ಯೂಸ್ , ರಾಯಚೂರು, ಡಿ.28- ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತಕುಮಾರ ಅವರು
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಬ್ರಿಟೀಷರ ಕಪಿಮುಷ್ಟಿಯಿಂದ ದಾಸ್ಯ ಮುಕ್ತಗೊಳಿಸಿ, ಭಾರತವನ್ನು ವಿಶ್ವಗುರುವಿನ ಮಟ್ಟಕ್ಕೆ ತಲುಪಲು ಅಡಿಪಾಯ ಹಾಕಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನಾಚರಣೆಯ ಶುಭಾಶಯಗಳು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಡಿಸೆಂಬರ್ 28, 1885 ರಲ್ಲಿ ದಾದಾ ಬಾಯಿ ನವರೋಜಿ ಹಾಗೂ ಇನ್ನಿತರ ಮಹಾನ್ ನಾಯಕರಿಂದ ಸ್ಥಾಪಿತವಾದ ಕಾಂಗ್ರೆಸ್ ಪಕ್ಷ ಬರಬರುತ್ತಾ ಈಸ್ಟ್ ಇಂಡಿಯಾ ಕಂಪನಿಯ ದಮನಕಾರಿ ಆಡಳಿತದ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮ ಎಂಬ ಜನಾಂದೋಲನಕ್ಕೆ ಕರೆಕೊಟ್ಟಿತ್ತು.
ಸ್ವಾತಂತ್ರ್ಯ ಹೋರಾಟದ ವಿಚಾರದಲ್ಲಿ ಭಾರತೀಯರಲ್ಲೇ ಒಗ್ಗಟ್ಟು ಇಲ್ಲದ ಕಾರಣ ನಾಲ್ಕು ಶತಮಾನಗಳ ಕಾಲ ಭಾರತವನ್ನು ಬಕಪಕ್ಷಿಗಳಂತೆ ಹರಿದು ಹಂಚಿ ತಿನ್ನುತ್ತಿದ್ದ ಬ್ರಿಟಿಷರಿಗೆ ಕಾಂಗ್ರೆಸ್ ಪಕ್ಷ ಒಂದು ಸಿಂಹಸ್ವಪ್ನದಂತೆ ಎದುರಿಗೆ ಬಂದು ನಿಂತಿತು.
ಅಲ್ಲಿಯವರೆಗೂ ಬ್ರಿಟೀಷರ ಬೂಟು ನೆಕ್ಕುತ್ತಾ, ಅವರೆಸೆಯುವ ಎಂಜಲನ್ನು ಮೃಷ್ಟಾನ್ನದಂತೆ ಮೇಯುತ್ತಾ ತಮ್ಮ ಹೊಟ್ಟೆಪಾಡಿನ ದಾರಿಯನ್ನು ಗಟ್ಟಿಗೊಳಿಸಿಕೊಂಡಿದ್ದ ಪ್ರಸ್ತುತ ಸ್ವಯಂ ಘೋಷಿತ ದೇಶಭಕ್ತರು ಅಂದಿನ ಕಾಲಕ್ಕೆ ಸ್ವಾತಂತ್ರ್ಯ ಯೋಧರ ಬೆನ್ನಿಗೆ ಚೂರಿ ಇರಿಯುತ್ತಿದ್ದರು.
ಇದನ್ನೆಲ್ಲ ಅರಿತಿದ್ದ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅಖಂಡ ಭಾರತದ ಸರ್ವ ಜಾತಿ ಜನಾಂಗದವರನ್ನು ಒಗ್ಗೂಡಿಸಿ ಕಾಂಗ್ರೆಸ್ ಎಂಬ ದೇಶಪ್ರೇಮಿಗಳ ಬಲಿಷ್ಟ ಸಂಘಟನೆಯನ್ನು ರಚಿಸಿದರು.
ಕಾಂಗ್ರೆಸ್ ಪಕ್ಷದ ಮುಂದಾಳತ್ವ ವಹಿಸಿಕೊಂಡ ಮಹಾತ್ಮಾ ಗಾಂಧಿಯವರು ಇಡೀ ಭಾರತದ ಉದ್ದಗಲಕ್ಕೂ ಜನರಿಗೆ ಸ್ವಾತಂತ್ರ್ಯ ಚಳುವಳಿಯ ಅರಿವು ಮೂಡಿಸುತ್ತಾ ಬರಿಮೈ ಫಕೀರನಾಗಿ ಬಡಕಲು ದೇಹದ ಸ್ವಾತಂತ್ರ್ಯ ಸಂತನಾಗಿ ಬೆಳೆದ ಮಹಾತ್ಮ ನಿಜಕ್ಕೂ ಒಂದು ಅಚ್ಚರಿಯೇ ಸರಿ.
ಕಾಂಗ್ರೆಸ್ ಪಕ್ಷದ ಲಕ್ಷಾಂತರ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ಭಾರತ ಬ್ರಿಟೀಷರ ದಬ್ಬಾಳಿಕೆಯಿಂದ ಬಿಡುಗಡೆಗೊಂಡರೂ ಭಾರತದ ಸುವರ್ಣ ಯುಗವನ್ನು ಮರು ಸ್ಥಾಪಿಸಲು ಕಾಂಗ್ರೆಸ್ ಪಕ್ಷವೇ ಮುನ್ನುಡಿ ಬರೆಯಿತು.
ಬ್ರಿಟೀಷರಿಂದ ದೋಚಲ್ಪಟ್ಟ ಭಾರತ ಅಂದು ಸೊನ್ನೆ ಸುತ್ತಿ ನಿಂತಿತ್ತು. ದೇಶದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ದೇಶದ ಬಗೆಗಿನ ದೂರದೃಷ್ಟಿ ಅವರನ್ನು ಪಂಚವಾರ್ಷಿಕ ಯೋಜನೆಯನ್ನು ದೇಶಕ್ಕೆ ಅರ್ಪಿಸುವಂತೆ ಪ್ರೇರೇಪಿಸಿತು.
ಈ ಮೂಲಕ ಭಾರತಕ್ಕೆ ಅತಿಮುಖ್ಯ ಮತ್ತು ಪ್ರಮುಖವಾಗಿ ಬೇಕಾಗಿದ್ದ ಮೂಲಭೂತ ಸೌಕರ್ಯಗಳ ಅನುಷ್ಟಾನಕ್ಕೆ ಮುಂದಾದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎನ್ನುವ ಮಹಾನಾಯಕನ ಮುಖೇನ "ಸಂವಿಧಾನ" ಎಂಬ ದೇಶದ ಧರ್ಮಗ್ರಂಥವನ್ನು ಭಾರತೀಯರಿಗೆ ಸಮರ್ಪಿಸಿದ್ದು ಕಾಂಗ್ರೆಸ್ ಪಕ್ಷ.
ಇಂದಿರಾಗಾಂಧಿಯವರಿಂದ ಉಳುವವನೇ ಹೊಲದೊಡೆಯ, ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ಹಸಿರುಕ್ರಾಂತಿ, ಕ್ಷೀರಕ್ರಾಂತಿ, ರಾಜೀವ್ ಗಾಂಧಿ ಅವರಿಂದ ಆಧುನಿಕ ಭಾರತಕ್ಕೆ ಅಡಿಪಾಯ ಹೀಗೇ ಲಕ್ಷಾಂತರ ಯೋಜನೆ, ಕಾರ್ಯಕ್ರಮಗಳನ್ನು ಕೊಟ್ಟ ಕಾಂಗ್ರೆಸ್ ಪಕ್ಷ ಸದಾ ಸರ್ವ ಧರ್ಮ ಸಮನ್ವಯತೆಯನ್ನು ಕಾಪಾಡುವಲ್ಲಿ ಯಶಸ್ವಿ ಆಗಿದೆ.
ಜಾತ್ಯಾತೀತ ತತ್ವ ಸಿದ್ಧಾಂತದ ಮೌಲ್ಯಾಧಾರಿತ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಕೋಮುವಾದವನ್ನು ಎಂದಿಗೂ ಸಹಿಸುವುದಿಲ್ಲ.
ಸಂವಿಧಾನದ ಆಶಯಗಳೇ ಕಾಂಗ್ರೆಸ್ ಪಕ್ಷದ ಗುರಿ ಮತ್ತು ಧ್ಯೇಯವೆಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ ಶಾಲಂ, ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಶಾ ಹಾಗೂ ಕೆಪಿಸಿಸಿ ಮಾದ್ಯಮ ವಕ್ತಾರ ಡಾ.ರಝಾಕ ಉಸ್ತಾದ ಹಾಗೂ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆಯವರು ಮಾತನಾಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರಿನಿವಾಸ ರೆಡ್ಡಿ, ಪಕ್ಷದ ಮುಖಂಡರಾದ ಬಸವರಾಜ ದರೂರು, ರಾಮಕೃಷ್ಣ ನಾಯಕ, ಮುರಳಿ ಯಾದವ, ಈಶಪ್ಪ, ಮೊಹಮ್ಮದ ಉಸ್ಮಾನ, ಅಂಜಿನಕುಮಾರ, ಮರಿಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.


Comments
Post a Comment