ಮನುಕುಲದ ಉದ್ಧಾರಕ್ಕಾಗಿ ಅವತರಿಸಿದವರು ಶ್ರೀ ಮಧ್ವಾಚಾರ್ಯರು - ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥರು. ಜಯ ಧ್ವಜ ನ್ಯೂಸ್, ರಾಯಚೂರು,ಜ.27- ಇಡಿ ಮನುಕುಲದ ಉದ್ಧಾರಕ್ಕಾಗಿ ಅವತರಿಸಿದವರು ಶ್ರೀ ಮಧ್ವಾಚಾರ್ಯರು ಎಂದು ಬಾಳಿಗಾರು ಮಠದ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥ ಶ್ರೀಪಾದಂಗಳವರು ನುಡಿದರು. ಅವರಿಂದು ನಗರದ ಮುಂಗ್ಲಿಪ್ರಾಣದೇವರ ದೇವಸ್ಥಾನದಲ್ಲಿ ಮಧ್ವನವಮಿಯ ಅಂಗವಾಗಿ ಹಮ್ಮಿಕೊಂಡಿದ್ದ ಮಹಾನ್ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಸಂಸ್ಥಾನ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.
ಮಧ್ವಾಚಾರ್ಯರು ಪ್ರಾಣದೇವರ ಅವತಾರವಾಗಿದ್ದಾರೆ. ಉಡುಪಿ ಬಳಿಯ ಪಾಜಕದಲ್ಲಿ 13ನೇ ಶತಮಾನದಲ್ಲಿ ಜನಿಸಿದ ಅವರು ಬಾಲ್ಯದಲ್ಲಿಯೆ ಅನೇಕ ಪವಾಡಗಳನ್ನು ಜಗತ್ತಿಗೆ ತೋರಿಸಿದರು.
ಅವರು ಭಗವಂತನ ಲೀಲೆಗಳನ್ನು ತಮ್ಮ ಗ್ರಂಥಗಳಲ್ಲಿ ವರ್ಣಿಸಿದ್ದಾರೆ. ಸರ್ವ ಮೂಲ ಗ್ರಂಥ ಲೋಕಕ್ಕೆ ನೀಡಿ ನಮ್ಮನ್ನು ಉದ್ಧರಿಸಿದ್ದಾರೆ. ಇಂದಿನ ಯುವಕರು ಮಧ್ವಾಚಾರ್ಯ ತತ್ವ ಸಿದ್ಧಾಂತಗಳನ್ನು ಅನುಸಿರಿಸಬೇಕು ದುರ್ಮತಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ನಾಗರೀಕರಾಗ ಬೇಕು.
ಅನೇಕ ದಶಕಗಳಿಂದ ಕೋಟೆ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ವಿವಿಧ ಜ್ಞಾನ ಪ್ರಸರಣ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ನಿನ್ನೆ ಮಧ್ವಾಚಾರ್ಯರು ಭಾವಚಿತ್ರದ ಮೆರವಣಿಗೆ ಅತ್ಯಂತ ವರ್ಣರಂಜಿತವಾಗಿ ಭಕ್ತಿಯಿಂದ ನಡೆದಿದ್ದು ಸಂತಸ ತಂದಿದೆ ಎಂದರು.
ಭವ್ಯ ಶೋಭಾಯಾತ್ರೆ: ಸೋಮವಾರ ಸಂಜೆ ರಾಯರ ಮಠದಿಂದ ಶ್ರೀ ಮಧ್ವಾಚಾರ್ಯರ ಭಾವಚಿತ್ರದ ಭವ್ಯ ಶೋಭಾಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ಹಾದು ಮುಂಗ್ಲಿ ಪ್ರಾಣದೇವರ ದೇವಸ್ಥಾನ ತಲುಪಿತು. ಚಂಡೆ ಮದ್ದಳೆ, ತಾಶ ವಾದ್ಯ, ಗೊಂಬೆ ವೇಷ , ಮಹಿಳೆಯರಿಂದ ಭಜನೆ, ಯುವಕ ಯುವತಿಯರ ನೃತ್ಯ ಮೆರಗು ನೀಡಿತು. ಸಾನಿಧ್ಯವನ್ನು ಶ್ರೀ ಅಕ್ಷೋಭ್ಯರಾಮಪ್ರಿಯ ತೀರ್ಥ ಶ್ರೀಪಾದಂಗಳವರು ವಹಿಸಿದ್ದರು. ಪಂಡಿತರು, ಬ್ರಾಹ್ಮಣ ಸಮಾಜದ ಮುಖಂಡರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಡಿವೈಎಸ್ಪಿ, ಸಿಪಿಐ ಹಾಗೂ ಪಿಎಸ್ಐ ಶೋಭಾಯಾತ್ರೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.





Comments
Post a Comment