ನಗರದಲ್ಲಿ ಭಾರಿ ವಾಹನ ಸಂಚಾರದಿಂದ ಅಪಘಾತಗಳು ದಿನನಿತ್ಯ: ರಿಂಗ್ ರೋಡ್ ನಿರ್ಮಾಣ ಅತ್ಯಗತ್ಯ ಜಯ ಧ್ವಜ ನ್ಯೂಸ್, ರಾಯಚೂರು ,ಫೆ.28- ನಗರದಲ್ಲಿ ಭಾರಿ ವಾಹನಗಳ ಸಂಚಾರದಿಂದ ದಿನನಿತ್ಯ ಅಪಘಾತಗಳು ಸಂಭವಿಸಿ ಸಾವು ನೋವು ಆಗುತ್ತಿದ್ದು ಇದಕ್ಕೆ ಹೊಣೆ ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ನಗರದ ಬಸವೇಶ್ವರ ವೃತ್ತದಲ್ಲಿ ಇಂದು ಮಧ್ಯರಾತ್ರಿ ಲಾರಿ ಡಿಕ್ಕಿಯಾಗಿ ಮೂವರು ಮತ್ತು ಸ್ಟೇಶನ್ ರಸ್ತೆಯಲ್ಲಿ ಬಸ್ ಹರಿದು ಮತ್ತೋರ್ವ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದ್ದು ಬಸವೇಶ್ವರ ರಸ್ತೆಯಿಂದ ಸ್ಟೇಶನ್ ರಸ್ತೆಯಲ್ಲಿ ಸಂಚರಿಸಬೇಕಾದರೆ ಅತಿ ಜಾಗರೂಕತೆಯಿಂದ ಸಂಚರಿಸಬೇಕಾದ ಪರಿಸ್ಥಿತಿ ಉಧ್ಭವಿಸಿದೆ. ಶರವೇಗದಲ್ಲಿ ರಸ್ತೆಗೆ ನುಗ್ಗುವ ಭಾರಿ ವಾಹನಗಳು ಯಮ ಸ್ವರೂಪಿಗಳಾಗುತ್ತಿವೆ. ವೇಗದ ಮಿತಿಯಿಲ್ಲದೆ ಚಾಲನೆ ಮಾಡಲಾಗುತ್ತಿದೆ. ಸ್ಟೇಶನ್ ರಸ್ತೆಯಲ್ಲಿ ಭಾರಿ ವಾಹನಗಳು ಹರಿದು ಸಾವುಗಳು ಸಂಭವಿಸುತ್ತಿದ್ದರೂ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ವಿಫಲಗೊಂಡಿದ್ದು ನೋಡಿದರೆ ಬೇಸರ ಮೂಡುತ್ತದೆ.
ರಿಂಗ್ ರೋಡ್ ನೆನೆಗುದಿಗೆ: ಭಾರಿ ವಾಹನಗಳು ನಗರದಲ್ಲಿ ಸಂಚರಿಸಿದಿರಲು ರಿಂಗ್ ರೋಡ್ ಅತ್ಯಗತ್ಯವಾಗಿದ್ದು ಅದು ಕೇವಲ ಭರವಸೆಯಾಗಿಯೇ ಉಳಿದಿದೆ . ದಿಶಾ ಸಭೆಯಲ್ಲಿ ಮಾರ್ಧನಿಸಿದ್ದ ರಿಂಗ್ ರೋಡ್: ಇತ್ತೀಚೆಗೆ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯತೆ ಹಾಗೂ ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ರಿಂಗ್ ರಸ್ತೆ ನಿರ್ಮಾಣ ಬಗ್ಗೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಒತ್ತಾಯಿಸಿದರು ಅಲ್ಲದೆ ಸಂಸದ ಜಿ.ಕುಮಾರ್ ನಾಯಕರವರು ಸಹ ಅದಕ್ಕೆ ಧ್ವನಿ ಗೂಡಿಸಿದ್ದರು ರಿಂಗ್ ರಸ್ತೆಯಿಲ್ಲದೆ ಬಸವೇಶ್ವರ ವೃತ್ತದಿಂದ ಸ್ಟೇಶನ್ ವೃತ್ತದ ವರೆಗಿನ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ಅಪಘಾತಗಳು ಹೆಚ್ಚಳವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಬಜೆಟ್ ನಲ್ಲಿ ಅನುದಾನಕ್ಕೆ ಒತ್ತಾಯ: ಬಜೆಟ್ ನಲ್ಲಿ ರಿಂಗ್ ರಸ್ತೆ ನಿರ್ಮಾಣಕ್ಕೆ ಅಗತ್ಯ ಅನುದಾನ ಮೀಸಲಿಟ್ಟು ತ್ವರಿತವಾಗಿ ಕಾರ್ಯಗತಗೊಳಿಸಬೇಕು ಇಲ್ಲದಿದ್ದರೆ ರಸ್ತೆ ಅಪಘಾತಗಳು ಹೆಚ್ಚಳವಾಗುವುದು ನಿಚ್ಚಳವೆಂಬುದು ನಗರದ ನಾಗರೀಕರ ಅನಿಸಿಕೆಯಾಗಿದೆ.


Comments
Post a Comment