ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆ:                                                                    ರೈಲ್ವೇ , ರಿಂಗ್ ರೋಡ್, ಜೆಜೆಮ್, ಶೌಚಾಲಯ ನಿರ್ಮಾಣ ಮುಂತಾದವುಗಳ ಅನುಷ್ಟಾನ ವಿಳಂಬ ಸಭೆಯಲ್ಲಿ ಅಸಮಾಧಾನ.               
                                                   ಜಯ ಧ್ವಜ ನ್ಯೂಸ್ , ರಾಯಚೂರು , ಫೆ.21- ಜಿಲ್ಲೆಯಲ್ಲಿ ರೈಲ್ವೆ, ರಿಂಗ್ ರೋಡ್ , ಜೆಜೆಎಂ , ಶೌಚಾಲಯ ನಿರ್ಮಾಣ ಮುಂತಾದ ಕಾಮಗಾರಿಗಳ ಭೌತಿಕ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಸಂಬಂಧಿಸಿದ ಅಧಿಕಾರಿಗಳ ಬಗ್ಗೆ ಸಭೆಯಲ್ಲಿ ಸಚಿವರು, ಸಂಸದರು, ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.    ಬೆಳಿಗ್ಗೆ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳ ಇಲಾಖೆ ವಾರು ಪ್ರಗತಿ ಪರಿಶೀಲನೆ ವೇಳೆ ರೈಲ್ವೇ ಕಾಮಗಾರಿ, ಭಾರತ ಮಾಲಾ ಹೆದ್ದಾರಿ, ಜಲ ಜೀವನ್ ಮಿಷನ್, ಶೌಚಾಲಯ ನಿರ್ಮಾಣ ಕಾಮಗಾರಿ ಮುಂತಾದವುಗಳ ಪ್ರಗತಿ ಕುರಿತು ಸಭೆಯಲ್ಲಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ . ಎಸ್ .ಬೋಸರಾಜು, ಸಂಸದ ಜಿ.ಕುಮಾರ ನಾಯಕ,  ಶಾಸಕರಾದ ಬಸನಗೌಡ ದದ್ದಲ್ , ಜಿ.ಕರೆಮ್ಮ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

(ಓಡಿಓಪಿ) ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗದಿರುವ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸಚಿವರು ಹಾಗೂ  ಸಂಸದರು ಬೇಸರ ವ್ಯಕ್ತಪಡಿಸಿ ಜಿ.ಪಂ ಸಿಇಓ ಗೆ ಯೋಜನೆ ಅನುಷ್ಠಾನ ಸೂಚಿಸಿದರು. ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಮಾತನಾಡಿ ನನ್ನ ಕ್ಷೇತ್ರದಲ್ಲಿ ಭಾರತ ಮಾಲಾ ಯೋಜನೆಯ ಹೆದ್ದಾರಿ ನಿರ್ಮಾಣವಾಗಿದ್ದು ಹಳ್ಳಿಗಳಲ್ಲಿ ಸಂಪರ್ಕ ರಸ್ತೆ ಮಾಡಿಲ್ಲ ರೈತರು ತಮ್ಮ ಜಮೀನಿನಿಂದ ಹೋಗುವುದಕ್ಕೆ ಮಾರ್ಗವಿಲ್ಲದಂತಾಗಿದ್ದು ಸರ್ವಿಸ್ ರಸ್ತೆ ನಿರ್ಮಿಸದೆ ಹೆದ್ದಾರಿ ಉದ್ಘಾಟನೆಗೆ ಆಸ್ಪದ ನೀಡುವುದಿಲ್ಲವೆಂದ ಅವರು ರೈತರೊಂದಿಗೆ ಧರಣಿ ನಡೆಸುವ ಎಚ್ಚರಿಕೆ ನೀಡಿದರು.

ನಗರದಲ್ಲಿ ಹೊರ ವರ್ತುಲ ರಸ್ತೆ ಅತ್ಯಗತ್ಯವಾಗಿದ್ದು ಬಸವೇಶ್ವರ ರಸ್ತೆ ಹಾಗೂ ಸ್ಟೇಶನ್ ರಸ್ತೆಯಲ್ಲಿ ಭಾರಿ ವಾಹನಗಳ ತಿರುಗಾಟದಿಂದ ದಿನ ನಿತ್ಯ ಅಪಘಾತಗಳಾಗಿ ಸಾವು ನೋವು ಆಗುತ್ತಿದೆ ಆದ್ದರಿಂದ ಸಾಥ್ ಮೈಲ್ ನಿಂದ ಆಂಧ್ರಕ್ಕೆ ಸಂಪರ್ಕಿಸುವ ಹೆದ್ದಾರಿಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದರು. ಇದಕ್ಕೆ ಸಂಸದರು ಧ್ವನಿಗೂಡಿಸಿ ಈಗಾಗಲೆ ಹೆದ್ದಾರಿಗಳ ನಿರ್ಮಾಣ ನಡೆಯುತ್ತಿದ್ದು ಅದರಲ್ಲೆ ರಿಂಗ್ ರಸ್ತೆ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಬಿಎಸ್ ಎನ್ ಎಲ್ ಸಂಪರ್ಕ ಹಾಗೂ ಅಂಚೆ ಇಲಾಖೆಗಳ ಕುರಿತು  ದಿಶಾ ನಾಮನಿರ್ದೇಶಿತ ಸದಸ್ಯರು ಸಭೆಯಲ್ಲಿ ಮಾತನಾಡಿ ಲೋಪದೋಷ ಸರಿಪಡಿಸಲು ಕೋರಿದರು. ಜಲ ಜೀವನ್ ಮಿಷನ್  ಅಧಿಕಾರಿ ಮಾಹಿತಿ ನೀಡಿ ತಾವು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಜವಾಬ್ದಾರಿ ಹೊಂದಿರುವದಾಗಿ ತಿಳಿಸಿದಾಗ ಸಂಸದರು ಹಾಗೂ ಶಾಸಕರು ಮಾತನಾಡಿ ಜಿಲ್ಲೆಗೆ ಪ್ರತ್ಯೇಕ ಅಧಿಕಾರಿ ನಿಯುಕ್ತಿಗೆ ಒತ್ತಾಯಿಸಿ ಸಿಇಓ ಖುದ್ದು ಹಳ್ಳಿಗಳಿಗೆ ಭೇಟಿ ನೀಡಬೇಕೆಂದರು.

ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕಾಡದಂತೆ ಕ್ರಮಕೈಗೊಳ್ಳಬೇಕೆಂದರು ದೇವದುರ್ಗ ಶಾಸಕಿ ಜಿ.ಕರೆಮ್ಮ ನಾಯಕ ಮಾತನಾಡಿ ನನ್ನ ಕ್ಷೇತ್ರದಲ್ಲಿ ನನ್ನ ಗಮನಕ್ಕೆ ತರದೆ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ಅಲ್ಲದೆ ಶೌಚಾಲಯಗಳ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಬಗ್ಗೆ ಕಿಡಿ ಕಾರಿದರು. ಸಂಸದರು ಮಾತನಾಡಿ ಬ್ಯಾಂಕುಗಳಲ್ಲಿ ಬಡವರಿಗೆ ಸಾಲ ನೀಡದಿರುವ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ದದ್ದಲ್ ಮಾತನಾಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಡರೋಗಗಳಿಗೆ ಚಿಕಿತ್ಸೆ ಸರಿಯಾಗಿ  ನೀಡದೆ ರಿಮ್ಸ್ ಗೆ ಶಿಫಾರಸ್ಸು ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿ ಜಿಲ್ಲಾ ವೈದ್ಯಾಧಿಕಾರಿ ಗಳಿಂದ ಮಾಹಿತಿ ಪಡೆದರು.   ಜಿಲ್ಲೆಯಲ್ಲಿ ನವ ಜಾತ ಶಿಶುಗಳ ಮರಣ ಪ್ರಮಾಣ ಬಗ್ಗೆ 
ಡಿಎಚ್ ಓ ಮಾಹಿತಿ ನೀಡಿ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಆಸ್ಪತ್ರೆಗಳಲ್ಲಿ ಗರ್ಭಿಣಿ ಮಹಿಳೆಯರ ಆರೈಕೆ ಉತ್ತಮಪಡಿಸಲಾಗಿದೆ ಎಂದರು. ಶಾಸಕಿ ಕರೆಮ್ಮ ನಾಯಕ ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆಯಿದ್ದು ಬೇರೆಡೆ ವರ್ಗಾವಣೆಯಾದ ಶಿಕ್ಷಕರ ಹುದ್ದೆಗಳಿಗೆ ಶೀಘ್ರದಲ್ಲಿ ನೇಮಕಾತಿ ಮಾಡುವಂತೆ ಡಿಡಿಪಿಐ ಗೆ ಸೂಚಿಸಿದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ವೇದಿಕೆ ಮೇಲೆ  ಜಿ.ಪಂ ಸಿಇಓ ಈಶ್ವರ ಕುಮಾರ್ ಕಾಂದೂ, ಎಸ್ಪಿ ಅರುಣಾಂಗ್ಶುಗಿರಿ ಇದ್ದರು. ಸಭೆಯಲ್ಲಿ ದಿಶಾ ನಾಮನಿರ್ದೇಶಿತ ಸದಸ್ಯರು,ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Comments

Popular posts from this blog