ಜಿಲ್ಲಾಡಳಿತದಿಂದ ಭಗವಾನ್ ಬುದ್ಧರ 2570 ನೇ ಜಯಂತಿ ಆಚರಣೆ: ಬುದ್ಧರ ಆದರ್ಶ, ತತ್ವಗಳನ್ನು ಅನುಸರಿಸಿ- ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್
ಜಯ ಧ್ವಜ ನ್ಯೂಸ್ ,ರಾಯಚೂರು ಮೇ.1-
ಭಗವಾನ್ ಬುದ್ಧರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ ಹಾಗೂ ತತ್ವಗಳನ್ನು ನಾವು ಅನುಸರಿಸಬೇಕು, ಅವರ ವಿಚಾರಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಪಾಲಿಸಬೇಕೆಂದು ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಹೇಳಿದರು.
ಅವರು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಬುದ್ಧರ 2570ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಗವಾನ್ ಬುದ್ಧರು ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶಗಳನ್ನು ನಮ್ಮ ಯುವ ಪೀಳಿಗೆಯವರು ಪಾಲಿಸುವಂತಾಗಬೇಕು. ಬುದ್ಧನ ಪ್ರಮುಖ ಬೋಧನೆಗಳಲ್ಲಿ ಸಕಲ ಜೀವಿಗಳಿಗೂ ಸಹಾನುಭೂತಿ ತೋರಿಸುವದಾಗಿದೆ. ಸಾಮಾನ್ಯ ಜನರ ಜೊತೆಗೆ ಅವರು ಜೀವನ ನಡೆಸಿದರು ಎಂದರು.
ಭಗವಾನ್ ಬುದ್ಧರು ತಮ್ಮ ತತ್ವ ಮತ್ತು ಸಿದ್ದಾಂತಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾನ್ ವ್ಯಕ್ತಿಯಾಗಿದ್ದು, ಅವರ ಜ್ಞಾನಮಾರ್ಗ ಅನುಸರಿಸಿ ನಮ್ಮೊಳಗೆ ಜಾಗೃತಿ ಮೂಡಿಸಿಕೊಂಡು ಸಮಾಜವನ್ನು ಸುಧಾರಣೆ ಮಾಡುವಲ್ಲಿ ನಾವೆಲ್ಲರು ಶ್ರಮಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಅವರು ಮಾತನಾಡಿ, ಮನುಷ್ಯನಿಗೂ ಸಾವಿದೆ ಎಂದು ತಿಳಿದವನು ಯಾರಿಗೂ ತೊಂದರೆ ಕೊಡುವುದಿಲ್ಲ. ಬೇರೆ ಅವರಿಗೆ ತೊಂದರೆ ಕೊಡದಿದ್ದರೆ. ಶಾಂತಿ ತನ್ನಷ್ಟಕ್ಕೆ ತಾನೆ ನೆಲೆಸುತ್ತದೆ. ಎಲ್ಲರೂ ಒಂದಾಗಿ ಹೋಗಬೇಕು. ಜೀವನದಲ್ಲಿ ಶಾಂತಿ ಬೇಕಾದರೆ ಗೌತಮ ಬುದ್ಧರ ಅಷ್ಟಾಂಗ ಮಾರ್ಗವನ್ನು ಅನುಸರಿಸಬೇಕು ಎಂದರು.
ರಾಯಚೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಶರಣಪ್ಪ ಸತ್ಯಂಪೇಟಿ ಅವರು ಮಾತನಾಡಿ, ಜಗತ್ತು ಕಂಡಿರುವ ಚೇತನಗಳಲ್ಲಿ ಗೌತಮ ಬುದ್ಧರು ಒಬ್ಬರು. ಮೂಲತ: ರಾಜ ಮನೆತನದಲ್ಲಿ ಹುಟ್ಟಿದ್ದರೂ ಅವರು , ತಮ್ಮ 35ನೇ ವರ್ಷದಲ್ಲಿ ವೈರಾಗ್ಯ ಕಡೆಗೆ ಗಮನ ಹರಿಸಿದರು. ಅವರು ತಮ್ಮ ಜ್ಞಾನದ ಮೂಲಕ ಪಂಚ ತತ್ವವನ್ನು ಅನುಸರಿಸಿದರು. ಅಶೋಕ ಮಹಾರಾಜರು ಬೌದ್ಧ ಧರ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕ್ಕೆ ಆದ್ಯತೆ ನೀಡಿದರು. ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಈ ವೇಳೆ ಲಕ್ಷಾಂತರ ಜನರು ಈ ಧರ್ಮವನ್ನು ಸೇರಿದರು. ಅವರ ಪಂಚ ತತ್ವ ವಿಚಾರಧಾರೆಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಹೋಗಬೇಕು. ಅವರ ಮಾರ್ಗದರ್ಶನ ಪಾಲಿಸಬೇಕು ಎಂದರು.
ಉಪನ್ಯಾಸಕರಾಗಿ ರಾಯಚೂರು ತಾಲೂಕಿನ ಶಕ್ತಿನಗರದ ಕೆಪಿಸಿಎಲ್, ಪಂ.ಜಾತಿ ಹಾಗೂ ಪಂ.ವರ್ಗದ ನೌಕರರ ಸಂಘದ ಅಧ್ಯಕ್ಷ ಗೌತಮ ಕಟ್ಟಿಮನಿ ಅವರು ಮಾತನಾಡಿ, ಮೌಢ್ಯ ನಿರಾಕರಿಸಿ ಸತ್ಯವನ್ನು ಅನುಸರಿಸುವ ಮೂಲಕ ನೇರವಾದ ದೃಷ್ಟಿ ಕೋನ ಬೆಳೆಸಿಕೊಳ್ಳಬೇಕು ಎಂದು ಭೋದಿಸಿದ ಗೌತಮ ಬುದ್ಧರು, ಸಮಾಜದಲ್ಲಿ ಶಾಂತಿ ಸಹಬಾಳ್ವೆಯ ಜೀವನ ನಿರ್ವಹಣೆಯ ತತ್ವವನ್ನು ಜಗತ್ತಿಗೆ ಸಾರಿದರು ಎಂದರು.
ವಿವಿಧ ಗಣ್ಯರಿಂದ ಗೌರವ ಸಲ್ಲಿಕೆ: ಗೌತಮ ಬುದ್ಧರ 2570ನೇ ಜಯಂತಿ ಅಂಗವಾಗಿ ನಗರದ ಕೇಂದ್ರ ಗ್ರಂಥಾಲಯ ಎದುರುಗಡೆ ಇರುವ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಗೌತಮ ಬುದ್ಧರ ಪ್ರತಿಮೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷುಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸೇರಿದಂತೆ ವಿವಿಧ ಗಣ್ಯರಿಂದ ಗೌರವ ಸಲ್ಲಿಸಲಾಯಿತು.
ನಂತರ ಮಹಾತ್ಮಗಾಂಧಿ ಕ್ರೀಡಾಂಗಣ, ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮುಖಾಂತರ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದವರಿಗೂ ಭಗವಾನ ಬುದ್ದರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ಇದಕ್ಕೂ ಮುಂಚೆ ಗೌತಮ ಬುದ್ಧರ ವಂದನೆಯನ್ನು ಮಾಡಲಾಯಿತು.
ಕೃಷಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಮಲ್ಲೇಶ ಕೊಲಮಿ, ಸಮಾಜದ ಮುಖಂಡರಾದ ಆರ್.ತಿಮ್ಮರೆಡ್ಡಿ, ಶ್ರೀನಿವಾಸ್, ನರಸಿಂಹಲು ಸೇರಿದಂತೆ ಇತರರು ಇದ್ದರು.




Comments
Post a Comment